ತೆಹ್ರಾನ್/ಪ್ಯಾರೀಸ್: ಇರಾನ್ನಲ್ಲಿ ಹಿಜಾಬ್ ವಿರೋಧಿ ಪ್ರತಿಭಟನೆಗಳಲ್ಲಿ ಇದುವರೆಗೆ 58 ಮಂದಿ ಮಕ್ಕಳು ಅಸುನೀಗಿದ್ದಾರೆ ಎಂದು ಇರಾನ್ ಮಾನವ ಹಕ್ಕುಗಳ ಸಂಘಟನೆಯ ನಿರ್ದೇಶಕ ಮೆಹಮೂದ್ ಅಮಿರಿ ಮೊಗ್ಧಾಮ್ ಹೇಳಿದ್ದಾರೆ. 46 ಮಂದಿ ಬಾಲಕರು ಮತ್ತು 12 ಮಂದಿ ಬಾಲಕಿಯರು ಎಂದು ಅವರು ತಿಳಿಸಿದ್ದಾರೆ. ಕಳೆದ ವಾರವೇ ಐವರು ಮಕ್ಕಳನ್ನು ಸರ್ಕಾರಿ ಪಡೆಗಳು ಗುಂಡು ಹಾರಿಸಿ ಕೊಂದಿವೆ ಎಂದು ಆರೋಪಿಸಲಾಗಿದೆ.
ಸೆ.16ರಂದು 22 ವರ್ಷದ ಮಶಾ ಅಮಿನಿ ಪೊಲೀಸ್ ಕಸ್ಟಡಿಯಲ್ಲಿ ಅಸುನೀಗಿದ ಬಳಿಕ ಭಾರೀ ಪ್ರಮಾಣದಲ್ಲಿ ಪ್ರತಿಭಟನೆಗಳು ಭುಗಿಲೆದ್ದಿವೆ. ಇದುವರೆಗೆ ಖಚಿತಪಟ್ಟ ವರ್ತಮಾನಗಳ ಪ್ರಕಾರ 378 ಮಂದಿ ಭದ್ರತಾಪಡೆಗಳ ಜತೆಗಿನ ಘರ್ಷಣೆ- ಗುಂಡು ಹಾರಾಟದಲ್ಲಿ ಜೀವ ಕಳೆದುಕೊಂಡಿದ್ದಾರೆ. ಶನಿವಾರ ನಡೆದಿದ್ದ ಬೆಳವಣಿಗೆಯಲ್ಲಿ ಇನ್ನೂ ಮೂವರು ಅಸುನೀಗಿದ್ದಾರೆ.
ಇನ್ನೊಂದೆಡೆ, ಇರಾನ್ನ ಸರ್ವೋಚ್ಚ ಧಾರ್ಮಿಕ ನಾಯಕ ಆಯತೊಲ್ಲಾ ಖೊಮೇನಿ ಅವರು ಪ್ರತಿಕ್ರಿಯೆ ನೀಡಿ ವೈರಿಗಳನ್ನು ಸೋಲಿಸಿದ್ದೇವೆ. ಅವರು ಪ್ರತಿ ದಿನ ಹೊಸತಂತ್ರಗಳನ್ನು ಬಳಸುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ.