Advertisement

ಹೆದ್ದಾರಿ ತಡೆದು ಪ್ರತಿಭಟನೆ

03:46 PM Nov 27, 2021 | Team Udayavani |

ಸುರಪುರ: ದೇವಪುರ ಕ್ರಾಸ್‌ನ ಬೀದರ- ಬೆಂಗಳೂರು ರಾಜ್ಯ ಹೆದ್ದಾರಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದವರು (ಹಸಿರು ಸೇನೆ) ಶುಕ್ರವಾರ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.

Advertisement

ಕರಾರೈ ಸಂಘದ (ಹಸಿರು ಸೇನೆ) ಜಿಲ್ಲಾಧ್ಯಕ್ಷ ಅಯ್ಯಣ್ಣ ಹಾಲಭಾವಿ ಮಾತನಾಡಿ, ಮೂರು ಕೃಷಿ ಕಾಯ್ದೆ ರದ್ದು ಮಾಡುವಂತೆ ಒತ್ತಾಯಿಸಿ ದೆಹಲಿ ಗಡಿಗಳಲ್ಲಿ ನಡೆಸುತ್ತಿರುವ ರೈತರ ಹೋರಾಟದಿಂದ ಕೇಂದ್ರ ಸರ್ಕಾರ ಕಾಯ್ದೆ ವಾಪಸ್ಸಾತಿಗೆ ಸಮ್ಮತಿ ಸೂಚಿಸಿದೆ. ಆದರೆ, ಕಾಯ್ದೆಗಳಲ್ಲಿರುವ ಪ್ರಮುಖ ಅಂಶಗಳ ಕುರಿತು ಸರ್ಕಾರ ಸ್ಪಷ್ಟವಾಗಿ ಹೇಳಿಲ್ಲ. ಕನಿಷ್ಟ ಬೆಂಬಲ ಬೆಲೆ (ಎಂಎಸ್‌ಪಿ) ಕಾನೂನು ಬದ್ಧಗೊಳಿಸುವಂತೆ ಆಗ್ರಹಿಸಿದರು.

ಲಖೀಂಪೂರ ಖೇರ್‌ನಲ್ಲಿ ನಡೆದ ರೈತರ ಹತ್ಯಾಕಾಂಡಕ್ಕೆ ಕಾರಣರಾದ ಕೇಂದ್ರ ಸಹಾಯಕ ಗೃಹ ಸಚಿವರನ್ನು ಸಂಪುಟದಿಂದ ವಜಾಗೊಳಿಸಬೇಕು. ಆಶೀಸ್‌ ಮಿಶ್ರಾಗೆ ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆನ್ನುವ ಪ್ರಮುಖ ಬೇಡಿಕೆ ಮತ್ತು ಪರಿಹಾರಕ್ಕಾಗಿ ಸಂಯುಕ್ತ ಕಿಸಾನ್‌ ಮೋರ್ಚಾ ರೈತರು ದೆಹಲಿ ಗಡಿಗಳಲ್ಲಿ ಹೋರಾಟ ಮುಂದುವರಿಸಿದ್ದಾರೆ. ಸಂಸತ್‌ನಲ್ಲಿ ಈ ಮೂರು ಕಾಯ್ದೆಗಳು ಅಧಿಕೃತವಾಗಿ ರದ್ದಾಗುವವರೆಗೂ ಹೋರಾಟ ಹಿಂಪಡೆಯಲು ಸಾಧ್ಯವಿಲ್ಲವೆಂದು ಪಟ್ಟು ಹಿಡಿದಿದ್ದಾರೆ. ಹೋರಾಟದಲ್ಲಿ ಹುತಾತ್ಮರಾದ ರೈತರ ಕುಟುಂಬಗಳಿಗೆ ಉದ್ಯೋಗ ಒದಗಿಸಿ ಪರಿಹಾರ ನೀಡಬೇಕು ಎಂದರು.

ಅಕಾಲಿಕ ಮಳೆಯಿಂದ ಕಟಾವಿಗೆ ಬಂದ ಬೆಳೆಗಳು ಹಾಳಾಗಿವೆ. ರಾಜ್ಯ ಸರ್ಕಾರ ಅತಿವೃಷ್ಟಿಯಿಂದ ಹಾಳಾದ ಬೆಳೆ ನಷ್ಟದ ಸಮೀಕ್ಷೆ ನಡೆಸಿ ರೈತರಿಗೆ ಪರಿಹಾರ ನೀಡುವಂತೆ ಒತ್ತಾಯಿಸಿದರು.

ನೀರಾವರಿ ಇಲಾಖೆ ಅಧಿಕಾರಿಗಳು ಹಾಗೂ ರಾಜಕೀಯ ಮುಖಂಡರು ರೈತರು ಹಾಗೂ ಸಲಹಾ ಸಮಿತಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕ ಪಕ್ಷೀಯವಾಗಿ ಮಾ.17ರವರೆಗೆ ಕಾಲುವೆಗಳಿಗೆ ನೀರು ಹರಿಸಲು ತೀರ್ಮಾನ ತೆಗೆದುಕೊಂಡಿದ್ದಾರೆ. ಇದು ಅವೈಜ್ಞಾನಿಕ. ಇದರಿಂದ ದ್ವಿದಳ ಧಾನ್ಯಗಳು, ಬೇಸಿಗೆ ಶೇಂಗಾ, ಭತ್ತ, ಸಜ್ಜಿ ಇತರೆ ಬೆಳೆಗಳು ಕಟಾವಿಗೆ ಬರುವುದಕ್ಕಿಂತ ಮುಂಚೆಯೇ ನೀರಿಲ್ಲದೇ ಒಣಗುವ ಸಾಧ್ಯತೆಗಳಿವೆ. ಕಾರಣ ವಾರಾಬಂದಿ ರದ್ದುಪಡಿಸಿ ಏ.15ರವರೆಗೆ ಕಾಲುವೆಗಳಿಗೆ ನೀರು ಹರಿಸಬೇಕು. ರಾಜ್ಯ ಸರ್ಕಾರ ಕೂಡಲೇ ಭತ್ತ ಖರೀದಿ ಕೇಂದ್ರ ತೆರೆದು ಗರಿಷ್ಠ ಪ್ರಮಾಣದಲ್ಲಿ ಬೆಂಬಲಿತ ಬೆಲೆಗೆ ಭತ್ತ ಖರೀದಿಸಬೇಕು ಎಂದರು.

Advertisement

ನಂತರ ಗ್ರೇಡ್‌-2 ತಹಶೀಲ್ದಾರ್‌ ಸುಫೀಯಾ ಸುಲ್ತಾನ್‌ ಅವರಿಗೆ ಮನವಿ ಸಲ್ಲಿಸಲಾಯಿತು. ಈ ವೇಳೆ ಸಂಘದ ರಾಜ್ಯ ಉಪಾಧ್ಯಕ್ಷೆ ಮಹಾದೇವಮ್ಮ ಬೇವಿನಾಳಮಠ, ಸುರಪುರ-ಹುಣಸಗಿ ತಾಲೂಕು ಅಧ್ಯಕ್ಷರಾದ ಹಣಮಂತ ಚಂದಲಾಪುರ, ಎಚ್‌.ಆರ್‌. ಬಡಿಗೇರ, ಹನುಮಗೌಡ ನಾರಾಯಣಪುರ, ಎಐಟಿಯುಸಿ ಜಿಲ್ಲಾಧ್ಯಕ್ಷ ದೇವಿಂದ್ರಪ್ಪ ಪತ್ತಾರ, ಮಲ್ಲಯ್ಯ ಕಮತಗಿ, ಮಲ್ಲಣ್ಣ ಹಾಲಭಾವಿ, ಗದ್ದೆಪ್ಪ ಜಂಗಿನಗಡ್ಡಿ, ತಿಪ್ಪಣ್ಣ ಜಂಪಾ, ವೆಂಕಟೇಶ ಕುಪಗಲ್‌, ರಾಘವೇಂದ್ರ ಕುಪಗಲ್‌, ಪ್ರಭು ದೊರೆ, ಮೌನೇಶ ಅರಳಹಳ್ಳಿ, ರುದ್ರಪ್ಪಗೌಡ ಮೇಟಿ, ಧರ್ಮಣ್ಣ ಮಳಕೇರಿ, ಹಣಮಂತ್ರಾಯ ನಾರಾಯಣಪುರ ಇತರರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next