ಸಾಗರ: ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಾಕಾರಿ ಸಂದೇಶ ಕಳಿಸಿ ಸಮಾಜದ ಶಾಂತಿ ಸಾಮರಸ್ಯಕ್ಕೆ ಧಕ್ಕೆ ತರುತ್ತಿರುವ ಎಡಜಿಗಳೇಮನೆ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಗಿರೀಶ್ ಹಕ್ರೆ ವಿರುದ್ಧ ಸೂಕ್ತ ಕಾನೂನುಕ್ರಮ ಜರುಗಿಸುವಂತೆ ಒತ್ತಾಯಿಸಿ ಸೋಮವಾರ ಮಾನವ ಹಕ್ಕುಗಳ ಕ್ಷೇಮಾಭಿವೃದ್ಧಿ ಸಮಿತಿ ವತಿಯಿಂದ ಉಪವಿಭಾಗಾಧಿಕಾರಿಗಳ ಕಚೇರಿ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಸಮಿತಿ ರಾಜ್ಯಾಧ್ಯಕ್ಷ ಎಂ.ಎಸ್.ಶಶಿಕಾಂತ್, ಏ. ೮ರಂದು ರಾತ್ರಿ 11ರ ಸುಮಾರಿಗೆ ಸಾಮಾಜಿಕ ಜಾಲತಾಣದಲ್ಲಿ ಗಿರೀಶ್ ಹಕ್ರೆ ಪ್ರಚೋದನಾಕಾರಿ ಸಂದೇಶವನ್ನು ಹರಿಬಿಟ್ಟಿದ್ದಾರೆ. ಯಾವುದೋ ಸಂದೇಶವನ್ನು ಮುಂದಿರಿಸಿಕೊಂಡು ಜಾಲತಾಣದಲ್ಲಿ ಮಾನವ ಹಕ್ಕು ಹೋರಾಟಗಾರರ ಬಗ್ಗೆ ಕೇವಲವಾಗಿ ಮಾತನಾಡಿದ್ದನ್ನು ಸಮಿತಿ ತೀವ್ರವಾಗಿ ಖಂಡಿಸುತ್ತದೆ. ಅವರು ಯಾರನ್ನೋ ಮೆಚ್ಚಿಸಲು ಹೋಗಿ ಪ್ರಾಮಾಣಿಕವಾಗಿ ಹೋರಾಟ ಮಾಡುತ್ತಿರುವ ಮಾನವ ಹಕ್ಕು ಹೋರಾಟಗಾರರ ವಿರುದ್ದ ಸುಳ್ಳು ಆಪಾದನೆಗಳನ್ನು ಮಾಡಿದ್ದಾರೆ ಎಂದು ದೂರಿದರು.
ಕುರಾನ್ ರದ್ದು ಮಾಡಿ ಎಂದು ಸಂದೇಶದಲ್ಲಿ ಉಲ್ಲೇಖಿಸುವ ಮೂಲಕ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಹಾಳು ಮಾಡಲು ಪ್ರಯತ್ನ ನಡೆಸುತ್ತಿದ್ದಾರೆ. ತಕ್ಷಣ ಪೊಲೀಸ್ ಇಲಾಖೆ ಅವರನ್ನು ಬಂಧಿಸಬೇಕು. ಅವರ ಗ್ರಾಮ ಪಂಚಾಯ್ತಿ ಸದಸ್ಯತ್ವವನ್ನು ರದ್ದು ಮಾಡಬೇಕು. ಕ್ರಮ ತೆಗೆದುಕೊಳ್ಳಲು ಹಿಂದೇಟು ಹಾಕಿದರೆ ಗಿರೀಶ್ ಹಕ್ರೆ ಮನೆ ಎದುರು ಅಹೋರಾತ್ರಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಾಮಾಜಿಕ ಕಾರ್ಯಕರ್ತ ಶಿವಾನಂದ ಕುಗ್ವೆ ಮಾತನಾಡಿ, ರಾಜ್ಯದಲ್ಲಿ ಸೌಹಾರ್ದತೆ ಹಾಳು ಮಾಡುವ ಷಡ್ಯಂತ್ರ ಕೆಲವರು ಮಾಡುತ್ತಿದ್ದಾರೆ. ಒಂದು ರೀತಿಯ ಆತಂಕವನ್ನು ರಾಜ್ಯದಲ್ಲಿ ಸೃಷ್ಟಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಇಂತಹದ್ದನ್ನು ಪೊಲೀಸ್ ಇಲಾಖೆ ನಿಯಂತ್ರಿಸುವತ್ತ ಹೆಚ್ಚಿನ ಗಮನ ಹರಿಸಬೇಕು ಎಂದು ಒತಾಯಿಸಿದರು.
ಈ ಸಂದರ್ಭದಲ್ಲಿ ಡಾ. ಕೆಳದಿ ಗುಂಡಾ ಜೋಯ್ಸ್, ಶಾಂತಪ್ಪ, ಸೋಮೇಶ್, ಪ್ರಭುಪ್ರಸಾದ್, ಸವಿತಾ ಶಶಿಕಾಂತ್, ಮೀನಾ, ಮಂಜುಳಾ, ಶ್ರೀಲಕ್ಷ್ಮೀ, ರಾಘವೇಂದ್ರ, ಸೋಮರಾಜು, ಯು.,ಮಂಜುನಾಥ ಬಳಸಗೋಡು, ಗೋಪಾಲ್ ಇನ್ನಿತರರು ಹಾಜರಿದ್ದರು.