ಗದಗ: ಕಳಸಾ-ಬಂಡೂರಿ ಮಹಾದಾಯಿ ಯೋಜನೆಗೆ ಪರಿಸರ ಇಲಾಖೆ ತಡೆ ನೀಡಿರುವುದನ್ನು ಖಂಡಿಸಿ ನಗರದ ಮಹಾತ್ಮಗಾಂಧಿ ವೃತ್ತದಲ್ಲಿ ಸೋಮವಾರ ಕರವೇ ಕಾರ್ಯಕರ್ತರು ರಸ್ತೆ ತಡೆ ನಡೆಸಿ ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.
ನಂತರ ಕೇಂದ್ರ ಸಚಿವರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಧಿಕ್ಕಾರ ಕೂಗಿದರು. ಈ ಕುರಿತು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿ, ಕಳಸಾ-ಬಂಡೂರಿ ಯೋಜನೆಗೆ ಕೇಂದ್ರ ಪರಿಸರಸಚಿವಾಲ ಯವೇ ನೀಡಿದ್ದ ಅನುಮತಿಗೆ ತಾನೇ ತಡೆ ನೀಡಿರುವುದು ಸರಿಯಲ್ಲ. ಮಹದಾಯಿ ಕುಡಿಯುವ ನೀರಿಗಾಗಿ ಕಳೆದ ನಾಲ್ಕೂವರೆ ವರ್ಷದಿಂದ ಜಿಲ್ಲೆಯ ನರಗುಂದದಲ್ಲಿ ರೈತರು ನಿರಂತರ ಹೋರಾಟ ನಡೆಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದ ಹಿತದೃಷ್ಟಿಯಿಂದ ಈ ಕೂಡಲೇ ಕೇಂದ್ರ ಸರಕಾರ ತಡೆಯಾಜ್ಞೆ ವಾಪಸ್ ಪಡೆದು ಮಹಾದಾಯಿ ಯೋಜನೆ ಅನುಷ್ಠಾನಕ್ಕಾಗಿ ಮುಂದಾಗಬೇಕು. ಮಹದಾಯಿ ವಿವಾದ ಕುರಿತು ಗೋವಾ ಸರಕಾರ ಅನಗತ್ಯ ಖ್ಯಾತೆ ತೆಗೆಯುತ್ತಿದೆ. ಆದರೆ, ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರಕಾರ ಇದೆ. ರಾಜ್ಯದ 28 ಸಂಸದರ ಈ ಪೈಕಿ 25 ಬಿಜೆಪಿಯವರೇ ಇದ್ದಾರೆ. ಆದರಿಂದ ನಮ್ಮ ನಾಯಕರು ಈ ಕುರಿತು ತುಟಿ ಪಿಟಿಕ್ ಎನ್ನುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಕೂಡಲೇ ರಾಜ್ಯದ ಸಂಸದರು ಎಚ್ಚೆತ್ತುಕೊಂಡು ಕೇಂದ್ರ ಸರಕಾರದ ಮೇಲೆ ಒತ್ತಡ ತರಬೇಕು. ವಿವಾದವನ್ನು ಬಗೆಹರಿಸಿ ಈ ಭಾಗಕ್ಕೆ ಮಹದಾಯಿ ನೀರು ಹರಿಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಕರವೇ ರಾಜ್ಯ ಉಪಾಧ್ಯಕ್ಷ ಎಚ್.ಎಸ್. ಸೊಂಪುರ, ಜಿಲ್ಲಾಧ್ಯಕ್ಷ ಹನಮಂತ ಅಬ್ಬಿಗೇರಿ, ಪ್ರಮುಖರಾದ ಈರಣ್ಣ ಗೋಡೆ, ನಿಂಗನಗೌಡ ಮಾಲಿಪಾಟೀಲ, ಮೈಲಾರಪ್ಪ ಕರಿ, ನಿಂಗಪ್ಪ ಹೊನ್ನಪುರ, ಆಶಾ ಜೂಲಗುಡ್ಡ, ಮಾಹಾದೇವಿ ದೊಡ್ಡಗೌಡರ, ರತ್ನಮ್ಮ ಯಲಬುರ್ಗಿ, ವಿರೂಪಾಕ್ಷಿ ಹಿತ್ತಲಮನಿ, ರಜಾಕ ಡಾಲಾಯತ್, ಶ್ರೀನಿವಾಸ ಕೋರ್ಲಗಟ್ಟಿ, ನಾಗಪ್ಪ ಅಣ್ಣಿಗೇರಿ, ರಾಜು ಶಿರಹಟ್ಟಿ ಇದ್ದರು.