Advertisement

ಸಿಎಎ ವಿರುದ್ಧ ಹರಿಹಾಯ್ದ ನಾಯಕರು

12:28 PM Feb 25, 2020 | Suhan S |

ವಿಜಯಪುರ: ಕೇಂದ್ರ ಸರ್ಕಾರ ಜನ ವಿರೋಧಿ ಪೌರತ್ವ ಕಾನೂನುಗಳನ್ನು ಹಿಂಪಡೆಯುವವರೆಗೆ, ಸರ್ಕಾರ ಬೆದರದ ಹೊರತು, ದೆಹಲಿ ಅಧಿಕಾರಸ್ತರ ಕುರ್ಚಿ ಅಲುಗಾಡದ ಹೊರತು, ಅಧಿಕಾರದಿಂದ ಅವರನ್ನು ಕೆಳಗಿಳಿಸಲು 2024ರವರೆಗೆ ಕಾಯಬೇಕಿಲ್ಲ. ಸಂವಿಧಾನ ಉಳಿಸಿ ಹೋರಾಟವನ್ನು ಗಾಂಧೀಜಿ ಮಾರ್ಗದಲ್ಲಿ, ಡಾ| ಬಿ.ಆರ್‌. ಅಂಬೇಡ್ಕರ್‌ ಅವರ ಸಂವಿಧಾನಾತ್ಮಕ ಹಾದಿಯಲ್ಲೇ ಶಾಂತ ರೀತಿಯಲ್ಲಿ ನಿರಂತರ ಹೋರಾಟ ಮುಂದುವರಿಸೋಣ ಎಂದು ಕೇಂದ್ರದ ಮಾಜಿ ಸಚಿವ ಯಶವಂತ ಸಿನ್ಹಾ ಮನವಿ ಮಾಡಿದರು.

Advertisement

ನಗರದ ಹೊರ ವಲಯದ ಜುಮನಾಳ ಕ್ರಾಸ್‌ ಬಳಿ ಬಿಜಾಪುರ ಜಂಟಿ ಕ್ರಿಯಾ ಸಮಿತಿ ಹಮ್ಮಿಕೊಂಡಿದ್ದ ಸಂವಿಧಾನ ಉಳಿಸಿ ಆಂದೋಲನದಲ್ಲಿ ಮಾತನಾಡಿದ ಅವರು, ಎನ್‌ಪಿಆರ್‌, ಎನ್‌ಆರ್‌ಸಿ ಜಾರಿಯಿಂದ ದೇಶದಲ್ಲಿ ಇನ್ನೂ ಗಂಭೀರ ಸ್ಥಿತಿ ನಿರ್ಮಾಣವಾಗಲಿದೆ ಎಂದು ಎಚ್ಚರಿಸಿದರು. ಈ ಹೋರಾಟದಲ್ಲಿ ಪಾಲ್ಗೊಂಡಿರುವ ನನ್ನನ್ನು ದೆಹಲಿಯಲ್ಲಿ ಅಧಿಕಾರದಲ್ಲಿರುವ ವ್ಯಕ್ತಿಗಳು ಹಾಗೂ ಅವರ ಪಕ್ಷಗಳ

ಮುಖಂಡರು ತುಕ್ಡೆ  ಗ್ಯಾಂಗ್‌ ಸದಸ್ಯ ಖಾನ್‌ ಮಾರ್ಕೆಟ್‌, ಅರ್ಬನ್‌ ನಕ್ಸಲ್‌ ಗುಂಪು ಸೇರಿರುವ ದೇಶದ್ರೋಹಿ ಎನ್ನಲು ಹಿಂಜರಿಯರು. ನನ್ನನ್ನು ಕೂಡ ಪಾಕಿಸ್ತಾನಕ್ಕೆ ಹೋಗು ಎಂದರೂ ಅಚ್ಚರಿ ಇಲ್ಲ. ದೇಶ ದಿವಾಳಿತನದತ್ತ ಹೆಜ್ಜೆ ಹಾಕುತ್ತಿದೆ. ಇದನ್ನು ಮುಚ್ಚಿಕೊಳ್ಳಲು ಹಾಗೂ ಆಡಳಿತ ವೈಫಲ್ಯ ಮರೆ ಮಾಚಲು ಕೇಂದ್ರ ಸರ್ಕಾರ ಪೌರತ್ವ ಕಾಯ್ದೆಗಳನ್ನು ಜಾರಿಗೆ ತರುವ ಮೂಲಕ ದೇಶದ ಜನರ ಮನಸ್ಥಿತಿಯ ದಿಕ್ಕನ್ನು ತಪ್ಪಿಸುವ ಕೆಲಸ ನಡೆಸಿದೆ ಎಂದು ವಾಗ್ಧಾಳಿ ನಡೆಸಿದರು.

ಸುಪ್ರೀಂ ಕೋರ್ಟ್‌ ಕೂಡ ಏನೂ ಮಾಡಲಾಗದ ಸ್ಥಿತಿ ನಿರ್ಮಾಣ ಮಾಡಿದ್ದಾರೆ. ಹೀಗಾಗಿ ಈ ಪೌರತ್ವ ಕಾಯ್ದೆಗಳನ್ನು ವಿರೋಧಿಸಿ ನಾನು ಜನೆವರಿ 9ರಿಂದ ಆರಂಭಿಸಿದ್ದ ಯಾತ್ರೆ ಜ. 30ರಂದು ರಾಜಘಾಟದಲ್ಲಿ ಕೊನೆಗೊಂಡಿತ್ತು. 6 ಸಾವಿರ ಕಿಮೀ ನಡೆಸಿದ ನನ್ನ ಯಾತ್ರೆ ಸಂದರ್ಭದಲ್ಲಿ ದೇಶದ ಜನರು ಸಂಪೂರ್ಣ ಸಹಮತ ವ್ಯಕ್ತಪಡಿಸಿ ಸ್ಪಂದಿಸಿದ ರೀತಿ ದೆಹಲಿ ಆಡಳಿತಗಾರರನ್ನು ಎಚ್ಚರಿಸುವ ಕೆಲಸ ಮಾಡಿದೆ ಎಂದರು.

ಭಾರತಕ್ಕೆ ಭೇಟಿ ನೀಡಿರುವ ಅಮೆರಿಕ ಅಧ್ಯಕ್ಷ ಡೋನಾಲ್ಡ್‌ ಟ್ರಂಪ್‌ಗೆ ಕೃತಕ ಹಿಂದೂಸ್ಥಾನ ಸೃಷ್ಟಿಸಿ ದರ್ಶನ ಮಾಡಿಸಲಾಗುತ್ತಿದೆ. ಟ್ರಂಪ್‌ ವಿಜಯಪುರ ನಗರಕ್ಕೆ ಆಗಮಿಸಿದ್ದರೆ ಟ್ರಂಪ್‌ ಅವರ ಸ್ನೇಹಿತ (ಮೋದಿ) ಹೇಳುವ ಭಾರತ ಎಲ್ಲಿದೆ ಎನ್ನುವುದು ತಿಳಿಯುತ್ತಿತ್ತು ಎಂದು ಗೇಲಿ ಮಾಡಿದರು. ಸೈಯ್ಯದ್‌ ತನ್ವೀರಪೀರಾ ಹಾಶ್ಮಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಿ.ಎಂ.ಇಬ್ರಾಹಿಂ, ರಮೇಶಕುಮಾರ, ಶಿವಾನಂದ ಪಾಟೀಲ, ಯಶವಂತರಾಯಗೌಡ ಪಾಟೀಲ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next