ಗಜೇಂದ್ರಗಡ: ಸಮೀಪದ ಚಿಲಝರಿ ಗ್ರಾಮದಿಂದ ಗಜೇಂದ್ರಗಡಕ್ಕೆ ಶಿಕ್ಷಣ ಪಡೆಯಲು ಹೋಗುವ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಬಸ್ ಬಿಡದೇ ನಿರ್ಲಕ್ಷ್ಯ ತೋರುತ್ತಿರುವುದನ್ನು ಖಂಡಿಸಿ ವಿದ್ಯಾರ್ಥಿಗಳು ಗ್ರಾಮದಲ್ಲಿ ವಾಕರ ಸಾರಿಗೆ ಘಟಕ ಬಸ್ ತಡೆದು ಸೋಮವಾರ ಪ್ರತಿಭಟನೆ ನಡೆಸಿದರು.
ಸಮೀಪದ ಚಿಲಝರಿ ಗ್ರಾಮದಿಂದ ಗಜೇಂದ್ರಗಡಕ್ಕೆ ಶಿಕ್ಷಣ ಪಡೆಯಲು ನಿತ್ಯ 25ಕ್ಕೂ ಅಧಿಕ ವಿದ್ಯಾರ್ಥಿಗಳು ಸಾರಿಗೆ ಘಟಕದಿಂದ ಪಾಸ್ ಪಡೆದಿದ್ದಾರೆ. ಆದರೆ ಕಳೆದ ಎರಡು ತಿಂಗಳಿಂದ 10 ಗಂಟೆಗೆ ಬಸ್ ಬಿಡುತ್ತಿದ್ದಾರೆ. ಇದರಿಂದ ಶಾಲೆಗೆ ಹೋಗುವುದು ಕಷ್ಟಕರವಾಗಿದೆ. ಶಾಲಾ ವೇಳೆ 9 ಗಂಟೆಗೆ ಆದರೆ ಸಾರಿಗೆ ಘಟಕ ಅಧಿಕಾರಿಗಳು 10 ಗಂಟೆ ಮೇಲ್ಪಟ್ಟು ಬಸ್ ಗ್ರಾಮಕ್ಕೆ ಬರುತ್ತಿರುವುದರಿಂದ ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.
ಗ್ರಾಮದ 25ಕ್ಕೂ ಅಧಿಕ ವಿದ್ಯಾರ್ಥಿಗಳು ನಿತ್ಯ ಗ್ರಾಮದಲ್ಲಿ ಬಸ್‌ಗಾಗಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಮಯಕ್ಕೆ ಸರಿಯಾಗಿ ಬಾರದ ಬಸ್‌ನಿಂದಾಗಿ ಹಣ ನೀಡಿ ಖಾಸಗಿ ವಾಹನಗಳಿಂದ ಗಜೇಂದ್ರಗಡಕ್ಕೆ ತೆರಳುವ ಅನಿವಾರ್ಯತೆ ಎದುರಾಗಿದೆ. ನೂರಾರು ರೂಪಾಯಿ ನೀಡಿ ಪಾಸ್ ಪಡೆದರೂ ನಿತ್ಯ ಖಾಸಗಿ ವಾಹನಗಳಿಗೆ ಹಣ ಕೊಟ್ಟು ಸಂಚರಿಸಬೇಕಾದ ಸ್ಥಿತಿ ಉದ್ಭವಿಸಿದೆ. ಆದರೆ ಸಾರಿಗೆ ಘಟಕ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಹಲವಾರು ಬಾರಿ ತಿಳಿಸಿದರೂ ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಸ್ ಅನಾನುಕೂಲತೆಯಿಂದಾಗಿ ನಿತ್ಯ ಶಾಲೆಗೆ ತಡವಾಗಿ ಹೋಗುವಂತಾಗಿದೆ. ಶೈಕ್ಷಣಿಕ ಬದುಕಿಗೂ ಹಿನ್ನಡೆಯಾಗುತ್ತಿದೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವವರೆಗೂ ಬಸ್ ಬಿಡುವುದಿಲ್ಲ ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದು ಕುಳಿತರು.
ನಂತರ ಮಧ್ಯಾಹ್ನ 12ಕ್ಕೆ ವಾಕರ ಸಾರಿಗೆ ಘಟಕ ಪ್ರಭಾರಿ ವ್ಯವಸ್ಥಾಪಕ ರಾಜಶೇಖರ ಮಸ್ಕಿ ಸ್ಥಳಕ್ಕಾಗಮಿಸಿ ಪ್ರತಿಭಟನಾಕಾರರ ಅಹವಾಲು ಆಲಿಸಿದರು. ಬಳಿಕ ಮಾತನಾಡಿದ ಅವರು, ಗಣೇಶ ಚತುರ್ಥಿ ಹಬ್ಬದಿಂದಾಗಿ ಬಸ್ ತಡವಾಗಿದೆ. ಮುಂದಿನ ದಿನಗಳಲ್ಲಿ ಶಾಲಾ ವೇಳೆಗೆ ಬಸ್ ಬಿಡಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದರು.