ಕೊಪ್ಪಳ: ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು ಎಂದಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ಕೂಡಲೇ ರಾಜ್ಯದ ರೈತರೊಂದಿಗೆ ಕ್ಷಮೆ ಕೇಳಬೇಕು. ಇಲ್ಲವೇ ಸರ್ಕಾರ ಪಾಟೀಲರನ್ನು ಸಚಿವ ಸ್ಥಾನದಿಂದ ತೆಗೆದು ಹಾಕಬೇಕೆಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಸಮಿತಿಯಿಂದ ನಗರದ ಬಸವೇಶ್ವರ ವೃತ್ತದ ಬಳಿ ಪ್ರತಿಭಟನೆ ನಡೆಸಿ ಸಚಿವರ ಪ್ರತಿಕೃತಿ ದಹಿಸಲಾಯಿತು.
ಕೃಷಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ್ ಅವರು ರೈತರ ಬಗ್ಗೆ ಒಳ್ಳೆಯ ಮಾತು ಆಡುವ ಬದಲು, ಅವರ
ಶ್ರೇಯೋಭಿವೃದ್ಧಿಗೆ ಶ್ರಮಿಸುವ ಬದಲು ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು ಎಂದು ಜರಿದಿದ್ದಾರೆ. ಇದೊಂದು ನಾಚಿಕೆಗೇಡಿನ ಸಂಗತಿ. ರೈತರು ಸುಮ್ಮನೆ ಆತ್ಮಹತ್ಯೆ ಮಾಡಿಕೊಳ್ಳಲ್ಲ. ಅವರು ಬೆಳೆದ ಬೆಲೆಗೆ ಮಾರುಕಟ್ಟೆಯಲ್ಲಿ ಬೆಲೆ ಸಿಗುತ್ತಿಲ್ಲ. ಕಷ್ಟಪಟ್ಟು ಬೆಳೆದರೂ ನೂರೆಂಟು ತೊಂದರೆ ಅನುಭವಿಸುವಂತಾಗಿದೆ. ಸರ್ಕಾರವೂ ರೈತರ ನೋವಿಗೆ ಸ್ಪಂದಿಸುತ್ತಿಲ್ಲ. ಸಾಲ ಮಾಡಿಕೊಂಡು ತೀರಿಸಲಾಗದೆ ಮನನೊಂದು ಆತನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ. ಇಂಹತ ರೈತರ ಬಗ್ಗೆ ಕೃಷಿ ಸಚಿವರು ಹೇಡಿಗಳು ಎಂದಿರುವುದು ನಿಜಕ್ಕೂ ರೈತರಿಗೆ ಮಾಡಿದ ದೊಡ್ಡ ಅಪಮಾನ ಎಂದು ಅವರ ವಿರುದ್ಧ ರೈತ ಸಂಘವು ಗುಡುಗಿತು.
ಇದನ್ನೂ ಓದಿ:ತೇರದಾಳ ಘಟನೆಯಲ್ಲಿ ಶಾಸಕರನ್ನು ರಕ್ಷಿಸುವ ಕೆಲಸವಾಗುತ್ತಿದೆ: ಡಿ ಕೆ ಶಿವಕುಮಾರ್
ಸಿಎಂ ಯಡಿಯೂರಪ್ಪ ಅವರು ಕೂಡಲೇ ಕೃಷಿ ಸಚಿವರನ್ನು ಸಚಿವ ಸ್ಥಾನದಿಂದ ವಜಾ ಮಾಡಬೇಕು. ಇಲ್ಲದೇ ಇದ್ದರೆ ಅವರೇ ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು. ರೈತರ ಬಗ್ಗೆ ಹಗುರವಾಗಿ ಮಾತನಾಡಿದ್ದು, ಕೂಡಲೇ ಬಹಿರಂಗವಾಗಿ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು. ಇನ್ನೂ ದೆಹಲಿಯಲ್ಲಿ ಕೃಷಿ ಕಾಯ್ದೆ, ಭೂ ಸುಧಾರಣಾ ಕಾಯ್ದೆ, ಭೂ ಸ್ವಾಧೀನ ಕಾಯ್ದೆ, ಎಪಿಎಂಸಿ, ವಿದ್ಯುತ್ ಸೇರಿ ವಿವಿಧ ಜನಪರ ಕಾಯ್ದೆಗಳನ್ನು ತಿದ್ದುಪಡಿ ಮಾಡಿ ರೈತರಿಗೆ ಮಾರಕವಾಗುವಂತೆ ಮಾಡಿದ್ದಾರೆ. ಇದನ್ನು ಖಂಡಿಸಿ ಪಂಜಾಬ್ ಹಾಗೂ ಹರಿಯಾಣ ರೈತರು ದೆಹಲಿಯಲ್ಲಿ ಹೋರಾಟ ಮಾಡುತ್ತಿದ್ದರೆ. ಅವರ ಮೇಲೆ ಕೇಂದ್ರ ಸರ್ಕಾರವು ಜಲ ಪಿರಂಗಿ ಪ್ರಯೋಗ ಮಾಡುತ್ತಿದೆ. ಅವರ ಮೇಲೆ ಲಾಠಿ ಪ್ರಹಾರ ನಡೆಸುತ್ತಿದೆ. ದೌರ್ಜನ್ಯ, ದಬ್ಟಾಳಿಕೆ, ಬೆದರಿಕೆ ಹಾಕುತ್ತಿದೆ.
ಇದೊಂದು ನಾಚಿಕೆಗೇಡಿನ ಸಂಗತಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ಮಾಡುವುದನ್ನು ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ. ಕೂಡಲೇ ಸರ್ಕಾರ ತನ್ನ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ರೈತ ಸಂಘವು ನಗರದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಸರ್ಕಾರದ ಹಾಗೂ ಕೃಷಿ ಸಚಿವ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮುಖಂಡರಾದ ಭೀಮಸೇನ ಕಲಕೇರಿ, ಹನುಮಂತಪ್ಪ ಹೊಳೆಯಾಚೆ, ಇಸ್ಮಾಯಿಲ್ ನಾಲಬಂದ್ ಸೇರಿ ಇತರರು ಪಾಲ್ಗೊಂಡಿದ್ದರು.