Advertisement

ಮೂಡಬಿದಿರೆ: ‘ಹಿಂದೂ ವಿರೋಧಿ ಶಾಸಕರ’ವಿರುದ್ಧ  ಪ್ರತಿಭಟನೆ

08:05 AM Mar 20, 2018 | Team Udayavani |

ಮೂಡಬಿದಿರೆ: ಕರಿಂಜೆ ಶ್ರೀ ಮುಕ್ತಾನಂದ ಸ್ವಾಮೀಜಿ ಅವರನ್ನು ನಿಂದಿಸಿ ಮಾತನಾಡಿದರೆನ್ನಲಾದ ಮೂಡಬಿದಿರೆ ಶಾಸಕ ಕೆ. ಅಭಯಚಂದ್ರ ವಿರುದ್ಧ ಮೂಡಬಿದಿರೆಯಲ್ಲಿ ವಿಶ್ವಹಿಂದೂ ಪರಿಷತ್‌ ಮೂಡಬಿದಿರೆ ಪ್ರಖಂಡ ವತಿಯಿಂದ ಸೋಮವಾರ ಸಂಜೆ ಪ್ರತಿಭಟನ ಮೆರವಣಿಗೆ ಹಾಗೂ ಸ್ವರಾಜ್ಯ ಮೈದಾನದಲ್ಲಿ ಬಹಿರಂಗ ಪ್ರತಿಭಟನ ಸಭೆ ಜರಗಿತು.

Advertisement

ಗುರುಪುರ ವಜ್ರದೇಹಿ ಮಠಾಧೀಶ ಶ್ರೀ ರಾಜಶೇಖರಾನಂದ ಸ್ವಾಮೀಜಿ ಮಾತನಾಡಿ, ‘ಅಹಿಂಸೆಯನ್ನು ಪ್ರತಿಪಾದಿಸುವ ಹಿನ್ನೆಲೆಯ ಮತದವರಾದ ಮೂಡಬಿದಿರೆ ಶಾಸಕರು ಹಿಂಸಾತ್ಮಕ ನಡೆನುಡಿಯ ಮೂಲಕ ಕರಿಂಜೆ ಸ್ವಾಮೀಜಿಯವರನ್ನು ಅವಮಾನಿಸಿರುವುದು ಸರಿಯಲ್ಲ. ತಾಕತ್ತಿದ್ದರೆ ಅವರು ವಜ್ರದೇಹಿಯ ಸುದ್ದಿಗೆ ಬರಲಿ. ನೇರ ವಿಧಾನಸೌಧಕ್ಕೂ ಬಂದು ಜರೆಯುವೆ’ ಎಂದರು. ‘ಸಂತರು ತೊಟ್ಟಿರುವುದು ‘ ಅಗ್ನಿ ವಸ್ತ್ರ’. ಬೇಕಾದರೆ ನೀವು ರಾಜಕೀಯ ಸಂತರಾಗಿ’ ಎಂದು ಅವರು ಪ್ರತಿ ಸವಾಲು ಹಾಕಿದರು.

ಕರಿಂಜೆ ಶ್ರೀ ಮುಕ್ತಾನಂದ ಸ್ವಾಮೀಜಿ ಮಾತನಾಡಿ, ‘ಶಾಸಕರು ಜೇನುಗೂಡಿಗೆ ಕಲ್ಲು ಎಸೆದು ಸಮಸ್ಯೆಯನ್ನು ಎದುರು ಹಾಕಿಕೊಂಡಂತಾಗಿದೆ; ಹಿಂದುತ್ವದ ವಿಚಾರದಲ್ಲಿ ವಜ್ರದೇಹಿ ಸ್ವಾಮೀಜಿ ತಮಗೆ ಸ್ಫೂರ್ತಿ’ ಎಂದರು.

ಗೋಹಂತಕರಿಗೆ ಮಹತ್ವ ನೀಡಿದ ರಾಜ್ಯ ಸರಕಾರ
ವಿಹಿಂಪ ಕ್ಷೇತ್ರೀಯ ಸಂಘಟನ ಕಾರ್ಯದರ್ಶಿ ಗೋಪಾಲ್‌ಜೀ ಮುಖ್ಯ ಭಾಷಣ ಮಾಡಿದರು. ಟಿಪ್ಪು ಜಯಂತಿ ಆಚರಿಸಿದ ಹಿಂದೂ ವಿರೋಧಿ ಸರಕಾರ ಕರ್ನಾಟಕದಲ್ಲಿದೆ. ಈಗಿರುವುದು ಗೋಹಂತಕರನ್ನು ಬೆಂಬಲಿಸುವ ರಾವಣ ರಾಜ್ಯ ಎಂದವರು ಹೇಳಿದರು. ಹಿಂದೂ ಸ್ವಾಮೀಜಿಯವರನ್ನು ನಿಂದಿಸಿದ ಶಾಸಕರಿಗೆ ಶಿಕ್ಷೆ ಖಂಡಿತ. ಹಾಗೆಂದು ನಮಗೆ ಅವರ ರಾಜೀನಾಮೆ ಬೇಡ. ಜನರೇ ಅವರ ರಾಜೀನಾಮೆ ಕೊಡಿಸ್ತಾರೆ. ಇಷ್ಟೆಲ್ಲ ಹತ್ಯೆಗಳಾದ ಈ ರಾಜ್ಯ ರಾವಣ ರಾಜ್ಯವಲ್ಲದೇ ಇನ್ನೇನು? ಎಂದು ಅವರು ಪ್ರಶ್ನಿಸಿದರು.

ವಿಹಿಂಪ ಪ್ರಾಂತ ಅಧ್ಯಕ್ಷ ಪ್ರೊ| ಎಂ.ಬಿ. ಪುರಾಣಿಕ್‌ ಮಾತನಾಡಿ, ‘ಶಾಸಕರು ಸ್ವಾಮೀಜಿಯವರ ಕ್ಷಮೆ ಕೇಳಬೇಕು’ ಎಂದು ಆಗ್ರಹಿಸಿದರು. ಮಾಜಿ ವಿಧಾನಪರಿಷತ್‌ ಸದಸ್ಯ ಮೋನಪ್ಪ ಭಂಡಾರಿ ಅವರು, ‘ಕರಿಂಜೆ ಸ್ವಾಮೀಜಿ ಭೂ ಅತಿಕ್ರಮಿಸಿದ್ದಾರೆ ಎಂಬುದು ಸುಳ್ಳು ಮಾತು ಆಡಿರುವ ಶಾಸಕರು ತಮ್ಮ ಬೆಂಬಲಿಗರು ಮಾಡಿರುವ ಅಕ್ರಮಗಳ ಬಗ್ಗೆ ಏಕೆ ಮಾತನಾಡುತ್ತಿಲ್ಲ? ಎಂದು ಪ್ರಶ್ನಿಸಿದರು. ಶಾಸಕರ ಓಲೈಕೆಯ ರಾಜಕಾರಣದಿಂದ ಹಿಂದೂಗಳಿಗೆ ಇಲ್ಲಿ ಅವಮಾನವಾಗಿದೆ ಎಂದು ಅವರು ಆರೋಪಿಸಿದರು.

Advertisement

ಬಜರಂಗದಳ ತಾಲೂಕು ಸಂಚಾಲಕ ಸುಚೇತನ್‌ ಜೈನ್‌ ಸ್ವಾಗತಿಸಿದರು. ವಿಹಿಂಪ ಪ್ರಖಂಡ ಉಪಾಧ್ಯಕ್ಷ ಸೋಮನಾಥ ಕೋಟ್ಯಾನ್‌ ಪ್ರಸ್ತಾವನೆಗೈದರು. ವಿಹಿಂಪ ಪ್ರಾಂತ ಕಾರ್ಯಾಧ್ಯಕ್ಷ ಪ್ರೊ| ಎಂ.ಬಿ. ಪುರಾಣಿಕ್‌, ವಿಹಿಂಪ ಜಿಲ್ಲಾಧ್ಯಕ್ಷ ಜಗದೀಶ ಶೇಣವ, ಬಜರಂಗದಳ ಪ್ರಾಂತ ಸಂಯೋಜಕ ಸುನೀಲ್‌ ಕೆ.ಆರ್‌. ಉಪಸ್ಥಿತರಿದ್ದರು. ವಿಹಿಂಪ ಪ್ರಖಂಡ ಕಾರ್ಯಾಧ್ಯಕ್ಷ ಶ್ಯಾಮ ಹೆಗ್ಡೆ ನಿರೂಪಿಸಿ ವಂದಿಸಿದರು. ಸಭೆಗೆ ಮುನ್ನ ಶ್ರೀ ವೆಂಕಟರಮಣ ದೇವಸ್ಥಾನದ ಬಳಿಯಿಂದ ಹೊರಟ ಪ್ರತಿಭಟನಾ ಮೆರವಣಿಗೆ ಪೇಟೆಯನ್ನು ಹಾದು ಸ್ವರಾಜ್ಯ ಮೈದಾನ ತಲುಪಿತು.

Advertisement

Udayavani is now on Telegram. Click here to join our channel and stay updated with the latest news.

Next