Advertisement

ಅಗ್ನಿಪಥ ಖಂಡಿಸಿ ಭಾರತ ಬಂದ್‌

11:24 PM Jun 20, 2022 | Team Udayavani |

ಹೊಸದಿಲ್ಲಿ: “ಅಗ್ನಿಪಥ’ ಯೋಜನೆ ಜಾರಿ ಮಾಡಿಯೇ ಸಿದ್ಧ ಎಂದು ಕೇಂದ್ರ ಸರಕಾರ ಸ್ಪಷ್ಟಪಡಿಸಿದರೂ ಅದರ ವಿರುದ್ಧದ ಪ್ರತಿಭಟನೆ ಮಾತ್ರ ತಣ್ಣಗಾಗಿಲ್ಲ. ಸೋಮವಾರ ಕೆಲವು ಸಂಘಟನೆಗಳು ಸೇನಾ ನೇಮಕಾತಿ ಯೋಜನೆ ರದ್ಧತಿಗೆ ಆಗ್ರಹಿಸಿ “ಭಾರತ್‌ ಬಂದ್‌’ಗೆ ಕರೆ ನೀಡಿದ್ದರಿಂದ ಹಲವು ರಾಜ್ಯಗಳಲ್ಲಿ ಜನಜೀವನ ಅಸ್ತವ್ಯಸ್ತವಾದವು.

Advertisement

ಭಾರತ್‌ ಬಂದ್‌ ಹಿನ್ನೆಲೆ ಸೋಮವಾರ ಸುಮಾರು 595 ರೈಲುಗಳ ಸಂಚಾರ ರದ್ದು ಮಾಡಲಾಗಿತ್ತು. ದಿಲ್ಲಿಯಲ್ಲಿ ಹಲವೆಡೆ ಪ್ರತಿಭಟನೆ ನಡೆದ ಕಾರಣ ಟ್ರಾಫಿಕ್‌ ಜಾಮ್‌ ಉಂಟಾಗಿ, ಮೈಲುಗಟ್ಟಲೆ ವಾಹನಗಳು ಸಾಲುಗಟ್ಟಿ ನಿಲ್ಲಬೇಕಾಯಿತು. ಹರಿಯಾಣದ ಫ‌ತೇಹಾಬಾದ್‌ನಲ್ಲಿ ಸೇನಾಕಾಂಕ್ಷಿಗಳ ಗುಂಪೊಂದು ಲಾಲ್‌ ಬಟ್ಟಿ ಚೌಕ್‌ನಲ್ಲಿ ರಸ್ತೆ ತಡೆ ನಡೆಸಿತು.

ಕೇರಳ, ತೆಲಂಗಾಣ, ಪಶ್ಚಿಮ ಬಂಗಾಲ, ಉತ್ತರ ಪ್ರದೇಶ, ಪಂಜಾಬ್‌, ಬಿಹಾರ ಮತ್ತು ರಾಜಸ್ಥಾನಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಕಟ್ಟೆಚ್ಚರ ಕೈಗೊಳ್ಳಲಾಗಿತ್ತು. ಬಿಹಾರದ 20 ಜಿಲ್ಲೆಗಳಲ್ಲಿ ಇಂಟರ್ನೆಟ್‌ ಸಂಪರ್ಕ ಇನ್ನೂ ಸಹಜಸ್ಥಿತಿಗೆ ಬಂದಿಲ್ಲ. ಝಾರ್ಖಂಡ್‌ನ‌ಲ್ಲಿ ಸೋಮವಾರ ಎಲ್ಲ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು.

ತಮಿಳುನಾಡಿನಲ್ಲಿ ಪ್ರತಿಭಟನಕಾರರು ರೈಲು ನಿಲ್ದಾಣಕ್ಕೆ ನುಗ್ಗಿ ಸಂಚಾರಕ್ಕೆ ಅಡ್ಡಿಪಡಿಸುವ ಸಾಧ್ಯತೆ ಇದ್ದ ಕಾರಣ, ಎಲ್ಲ ರೈಲು ನಿಲ್ದಾಣಗಳಲ್ಲೂ ಪ್ಲ್ರಾಟ್‌ಫಾರಂ ಟಿಕೆಟ್‌ ವಿತರಣೆ ನಿರ್ಬಂಧಿಸಲಾಗಿತ್ತು.

ಜುಲೈಯಿಂದ ನೋಂದಣಿ: ಪ್ರತಿಭಟನೆಗಳು ಮುಂದುವರಿದಿರುವಂತೆಯೇ, ಅಗ್ನಿಪಥ ಯೋಜನೆಯಡಿ ಯೋಧರ ನೇಮಕಾತಿ ಸಂಬಂಧ ಸೇನೆಯು ಸೋಮವಾರ ಅಧಿಸೂಚನೆ ಹೊರಡಿಸಿದೆ. ಜುಲೈಯಿಂದ ಆನ್‌ಲೈನ್‌ ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ ಎಂದೂ ಹೇಳಿದೆ. ಹೊಸ ಯೋಜನೆಯಂತೆ ಸೇನಾ ಕಾಂಕ್ಷಿಗಳು ಸೇನಾಪಡೆಯ ನೇಮಕಾತಿ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿ ಕೊಳ್ಳುವುದನ್ನು ಕಡ್ಡಾಯ ಗೊಳಿಸಲಾಗಿದೆ ಎಂದಿದೆ. ಉತ್ತರಪ್ರದೇಶದಲ್ಲಿ ಹಿಂಸಾಚಾರದಲ್ಲಿ ತೊಡಗುವಂತೆ ವಾಟ್ಸ್‌ಆ್ಯಪ್‌ ಸಂದೇಶ ಗಳನ್ನು ಕಳುಹಿಸಲಾಗಿತ್ತು ಎಂಬ ವಿಚಾರ ತನಿಖೆಯಿಂದ ಬಯಲಾಗಿದೆ. ಮತ್ತೆ 72 ಪ್ರತಿಭಟನಕಾರರನ್ನು ಸೋಮವಾರ ಬಂಧಿಸಲಾಗಿದೆ.

Advertisement

ಅಗ್ನಿವೀರರಿಗೆ ವಿವಿಧ ಕಂಪೆನಿಗಳಿಂದ ಆಫ‌ರ್‌ :

ಸೇನೆಯಿಂದ ನಿವೃತ್ತರಾಗುವ ಅಗ್ನಿವೀರರಿಗೆ ತಮ್ಮ ಕಂಪೆ‌ನಿಯ ನೇಮಕಾತಿಯಲ್ಲಿ ಆದ್ಯತೆ ನೀಡಲಾಗುವುದು ಎಂದು ಮಹೀಂದ್ರಾ ಗ್ರೂಪ್‌ ಮುಖ್ಯಸ್ಥ ಆನಂದ್‌ ಮಹೀಂದ್ರಾ ಘೋಷಿಸಿದ್ದಾರೆ. ಇದರ ಬೆನ್ನಲ್ಲೇ ಆರ್‌ಪಿಜಿ ಗ್ರೂಪ್‌ ಮುಖ್ಯಸ್ಥ ಹರ್ಷ್‌ ಗೋಯೆಂಕಾ ಅವರೂ ಇದೇ ರೀತಿಯ ಘೋಷಣೆ ಮಾಡಿದ್ದು, ನಮ್ಮ ಕಂಪೆನಿಯೂ ಅಗ್ನಿವೀರರನ್ನು ಸ್ವಾಗತಿಸುತ್ತದೆ ಎಂದಿದ್ದಾರೆ.  ಮತ್ತೂಂದೆಡೆ, ಟಾಟಾ ಸನ್ಸ್‌ ಕಂಪೆನಿಯ ಮುಖ್ಯಸ್ಥ ಎನ್‌. ಚಂದ್ರಶೇಖರ್‌ ಕೂಡ ಅಗ್ನಿಪಥ್‌ನಿಂದ ನಿವೃತ್ತಿ ಹೊಂದಿ ಬರುವ ಯೋಧರಿಗೆ ಟಾಟಾ ಸನ್ಸ್‌ ಸಂಸ್ಥೆಯಲ್ಲಿ ಉದ್ಯೋಗ ನೀಡುವುದಾಗಿ ಘೋಷಿಸಿದ್ದಾರೆ. ಇದರ ಜತೆಗೆ ಬಯೋಕಾನ್‌ ಸಂಸ್ಥೆಯ ಮುಖ್ಯಸ್ಥೆ ಕಿರಣ್‌ ಮಜುಂದಾರ್‌-ಶಾ, ಅಪೊಲೊ ಆಸ್ಪತ್ರೆಗಳ ಸಮೂಹ ಸಂಸ್ಥೆಗಳ ಜಂಟಿ ನಿರ್ವಹಣ ನಿರ್ದೇಶಕ ಸಂಗೀತಾ ರೆಡ್ಡಿ ಕೂಡ ಅಗ್ನಿಪಥ ಯೋಧರಿಗೆ ತಮ್ಮಲ್ಲಿ ಕೆಲಸ ಕೊಡುವುದಾಗಿ ಆಶ್ವಾಸನೆ ನೀಡಿದ್ದಾರೆ.

ಇದೇ ಮೊದಲ ಬಾರಿಗೆ ಸರಕಾರದ ಯೋಜನೆಯೊಂದನ್ನು ಸಮರ್ಥಿಸಿಕೊಳ್ಳಲು ಮೂರೂ ಪಡೆಗಳ ಮುಖ್ಯಸ್ಥರು ಸುದ್ದಿಗೋಷ್ಠಿ ನಡೆಸಬೇಕಾಯಿತು. ಸ್ವತಂತ್ರ ಭಾರತದ 75 ವರ್ಷಗಳ ಇತಿಹಾಸದಲ್ಲಿ ಹೀಗೆ ಎಂದೂ ಆಗಿರಲಿಲ್ಲ.-ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ ಹಿರಿಯ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next