Advertisement

ಗೋವಂಶ ರಕ್ಷಣೆ ಆಗ್ರಹಿಸಿ ಕರಾವಳಿಯೆಲ್ಲೆಡೆ ಪ್ರತಿಭಟನೆ

02:14 AM Jul 04, 2019 | Team Udayavani |

ಕಠಿನ ಕ್ರಮಕ್ಕೆ ಜಗದೀಶ ಶೇಣವ ಆಗ್ರಹ
ಮಂಗಳೂರು: ಗೋವಂಶ ರಕ್ಷಣೆಗೆ ಒತ್ತಾಯಿಸಿ ವಿಹಿಂಪ, ಬಜರಂಗದಳ ಹಾಗೂ ಹಿಂದೂ ಜಾಗರಣ ವೇದಿಕೆ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಉಡುಪಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಧರಣಿ ಪ್ರತಿಭಟನ ಸಭೆ ಬುಧವಾರ ನಡೆಯಿತು.

Advertisement

ಮಂಗಳೂರಿನಲ್ಲಿ ನಡೆದ ಪ್ರತಿಭಟನ ಸಭೆಯಲ್ಲಿ ವಿಹಿಂಪ ಪ್ರಾಂತ ಸಹ ಗೋರûಾ ಪ್ರಮುಖ್‌ ಜಗದೀಶ ಶೇಣವ ಮಾತನಾಡಿ, ಜಿಲ್ಲೆಯಲ್ಲಿ ಅಕ್ರಮ ಗೋಸಾಗಾಟ ನಿರಂತರವಾಗಿ ನಡೆಯುತ್ತಿದೆ. ಮೇಯಲು ಬಿಟ್ಟ ಗೋವುಗಳು ಕಟುಕರ ಪಾಲಾಗುತ್ತಿವೆ. ಆದರೆ ಗೋ ಸಾಗಾಟ ತಡೆದವರ ವಿರುದ್ಧ ಪೊಲೀಸರು ಕೇಸು ದಾಖಲಿಸಿ ಠಾಣೆಗಳಲ್ಲಿ ಹಿಂಸಿಸುತ್ತಿದ್ದಾರೆ ಎಂದು ಆರೋಪಿಸಿದರು.

ಪ್ರಾಣಿಬಲಿ ನಿಷೇಧ ಕಾಯಿದೆ 1959ರ ತಿದ್ದುಪಡಿ 1975ನ್ನು ಸಂಪೂರ್ಣ ಅನುಷ್ಠಾನಕ್ಕೆ ತರಬೇಕು. ಈ ಬಗ್ಗೆ ಜಿಲ್ಲಾಡಳಿತ ಹಾಗೂ ಪೊಲೀಸ್‌ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದವರು ಆಗ್ರಹಿಸಿದರು.

ಸಾಕಲಾಗದಿರುವ ಗೋವುಗಳನ್ನು ಕಟುಕ ರಿಗೆ ನೀಡಬೇಡಿ. ಹಿಂದೂ ಸಂಘಟನೆಗಳನ್ನು ಸಂಪರ್ಕಿಸಿ ಮಾಹಿತಿ ನೀಡಿ. ನಾವೇ ಗೋವುಗಳನ್ನು ಕೊಂಡುಕೊಂಡು ಗೋ ಶಾಲೆಯಲ್ಲಿ ಸಾಕುತ್ತೇವೆ ಎಂದು ಜಗದೀಶ್‌ ಶೇವಣ ತಿಳಿಸಿದರು.

ಹಿಂದೂ ಜಾಗರಣಾ ವೇದಿಕೆ ವಿಭಾಗ ಅಧ್ಯಕ್ಷ ಕಿಶೋರ್‌ ಕುಮಾರ್‌, ವಿಹಿಂಪ ಜಿಲ್ಲಾ ಕಾರ್ಯದರ್ಶಿ ಶಿವಾನಂದ ಮೆಂಡನ್‌ ಮಾತನಾಡಿದರು.

Advertisement

ವಿಧಾನ ಪರಿಷತ್‌ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ಮುಖಂಡರಾದ ಗೋಪಾಲ್‌ ಕುತ್ತಾರು, ಭುಜಂಗ ಕುಲಾಲ್‌, ಅಮಿತ್‌ ಗುಂಡಳಿಕೆ, ವಾಸುದೇವ ಗೌಡ, ಪ್ರದೀಪ್‌ ಪಂಪ್‌ವೆಲ್‌, ಗುರುಪ್ರಸಾದ್‌, ಪ್ರವೀಣ್‌ ಕುತ್ತಾರ್‌, ಮನೋಹರ ಸುವರ್ಣ, ವಿನಯ ಎಲ್‌. ಶೆಟ್ಟಿ, ಸುಭಾಸ್‌ ಪಡೀಲ್‌ ಉಪಸ್ಥಿತರಿದ್ದರು.

ಬಳಿಕ ಗೋ ವಂಶ ರಕ್ಷಣೆ ಮಾಡ ಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿಯವರಿಗೆ ಸಲ್ಲಿಸಲಾಯಿತು.

ಆಯುಕ್ತರ ಕ್ರಮ ಶ್ಲಾಘನೀಯ
ಜಿಲ್ಲೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಗೋ ವಂಶದ ಮೇಲಿನ ಕ್ರೌರ್ಯದ ವಿರುದ್ಧ ಕಠಿನ ಕ್ರಮಕ್ಕೆ ಮುಂದಾಗಿರುವ ಮಂಗಳೂರು ನಗರ ಪೊಲೀಸ್‌ ಆಯುಕ್ತರ ಕ್ರಮ ಅಭಿನಂದನೀಯ. ಆಯುಕ್ತರು 104 ಮಂದಿ ಗೋ ಕಳ್ಳತನ ಆರೋಪಿಗಳ ಪರೇಡ್‌ ನಡೆಸಿರುವುದು ಗೋ ಕಳ್ಳರಿಗೆ ನೀಡಿದ ಎಚ್ಚರಿಕೆಯಾಗಿದೆ ಎಂದು ಜಗದೀಶ್‌ ಶೇಣವ ಹೇಳಿದರು.

ಪ್ರಾಣಿ ಕ್ರೌರ್ಯ ತಡೆ ಸಮಿತಿ ಸಕ್ರಿಯಗೊಳಿಸಿ: ಶರಣ್‌ ಪಂಪ್‌ವೆಲ್
ಉಡುಪಿ: ವಾಜಪೇಯಿ ಅವರು ಪ್ರಧಾನಿಯಾದ ಸಂದರ್ಭ ದೇಶದ ಪ್ರತಿ ಜಿಲ್ಲೆಯಲ್ಲಿ ಪ್ರಾಣಿ ಕ್ರೌರ್ಯ ತಡೆ ಸಮಿತಿಯನ್ನು ಜಾರಿಗೆ ತರಲಾಗಿತ್ತು. ಅದನ್ನು ಉಡುಪಿಯಲ್ಲಿ ಸಕ್ರಿಯಗೊಳಿಸುವ ಮೂಲಕ ಗೋ ಕಳ್ಳಸಾಗಣೆ ಮತ್ತು ಗೋ ಹತ್ಯೆಯನ್ನು ತಡೆಯಬೇಕು ಎಂದು ವಿಶ್ವ ಹಿಂದೂ ಪರಿಷತ್‌ ಮಂಗಳೂರು ವಿಭಾಗ ಕಾರ್ಯದರ್ಶಿ ಶರಣ್‌ ಪಂಪ್‌ವೆಲ್ ಆಗ್ರಹಿಸಿದ್ದಾರೆ.

ಗೋವಿನ ಮೇಲೆ ಕ್ರೌರ್ಯ, ಗೋ ಕಳ್ಳತನ, ಗೋವಧೆ, ಅಕ್ರಮ ಗೋ ಸಾಗಾಟಕ್ಕೆ ತಡೆ ಮತ್ತು ಕಸಾಯಿಖಾನೆಗಳನ್ನು ಮುಚ್ಚುವಂತೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್‌, ಬಜರಂಗದಳ ಹಾಗೂ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಬುಧವಾರ ಬನ್ನಂಜೆ ತಾಲೂಕು ಕಚೇರಿಯ ಎದುರು ನಡೆಸಿದ ಪ್ರತಿಭಟನೆ ಸಭೆಯಲ್ಲಿ ಮಾತನಾಡಿದರು.

ಜಿಲ್ಲಾಡಳಿತವು ಒಂದು ತಿಂಗಳೊಳಗೆ ಪ್ರಾಣಿ ಕ್ರೌರ್ಯ ತಡೆ ಸಮಿತಿಗಳನ್ನು ಸಕ್ರಿಯಗೊಳಿಸಿ ಅಕ್ರಮ ಕಸಾಯಿಖಾನೆಯಗಳನ್ನು ಮುಚ್ಚಬೇಕು ಹಾಗೂ ಗೋ ಕಳ್ಳರನ್ನು ಸೆರೆ ಹಿಡಿಯಬೇಕು. ಇಲ್ಲವಾದರೆ ಗೋ ರಕ್ಷಕರ ತಂಡ ಉಗ್ರ ಪ್ರತಿಭಟನೆ ಮಾಡಲಿದೆ. ಕಾನೂನಿನ ಮೂಲಕ ಗೋ ಕಳ್ಳತನಕ್ಕೆ ಕಡಿವಾಣ ಹಾಕದೇ ಹೋದರೆ ಗೋ ರಕ್ಷಕರು ರಸ್ತೆಗಿಳಿದು ಗೋ ರಕ್ಷಣೆ ಮಾಡಬೇಕಾಗುತ್ತದೆ. ಇದರಿಂದ ಕೋಮು ಸೌಹಾರ್ದಕ್ಕೆ ತೊಂದರೆ ಯಾದರೆ ಸಂಘ ಪರಿವಾರ ಕಾರಣವಲ್ಲ ಎಂದು ಎಚ್ಚರಿಕೆ ನೀಡಿದರು.

2,000 ಗೋ ಮಾಂಸ ಅಂಗಡಿ
ಅಕ್ರಮ ಕಸಾಯಿಖಾನೆಗಳ ಮಾಹಿತಿ ಸಂಘ ಪರಿವಾರಕ್ಕೆ ಇದೆ; ಆದರೆ ಪೊಲೀಸರಿಗೆ ಇಲ್ಲ. ಅವಿಭಜಿತ ಜಿಲ್ಲೆಗಳಿಗೆ ಅಧಿಕೃತವಾಗಿರುವುದು ಒಂದೇ ಕಸಾಯಿಖಾನೆ. ಅಲ್ಲಿ ದಿನಕ್ಕೆ 12 ಜಾನುವಾರು ವಧೆ ಮಾಡಲಾಗುತ್ತದೆ. ಇಂದುಕರಾವಳಿಯಲ್ಲಿ 2,000ಕ್ಕಿಂತ ಹೆಚ್ಚು ಗೋ ಮಾಂಸದ ಅಂಗಡಿಗಳಿವೆ. ಅವುಗಳಿಗೆ ಗೋ ಮಾಂಸ ಎಲ್ಲಿಂದ ಬರುತ್ತಿದೆ ಎಂದು ಪ್ರಶ್ನಿಸಿದರು.

ಗೋ ಕಳ್ಳತನ ಹೆಚ್ಚಳ
ಸರಕಾರ, ಜಿಲ್ಲಾಡಳಿತ, ಜನಪ್ರತಿನಿಧಿಗಳು ಗೋ ರಕ್ಷಣೆಗೆ ಮುಂದಾಗುತ್ತಿಲ್ಲ. ಅವರ ನಿರ್ಲಕ್ಷ್ಯದಿಂದ ಗ್ರಾಮೀಣ ಭಾಗದಲ್ಲಿ ಗೋ ಕಳ್ಳತನ ಹೆಚ್ಚಾಗುತ್ತಿದೆ. ಗೋ ಕಳ್ಳರು ಯಾವ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಗೋಕಳ್ಳತನ ಮಾಡುತ್ತಿದ್ದಾರೋ ಅದೇ ಮಾರಕಾಸ್ತ್ರಗಳಿಂದ ಅವರನ್ನು ತಡೆಯುವುದಕ್ಕೂ ನಮಗೆ ಗೊತ್ತಿದೆ ಎಂದರು.

ಗೋ ಕಳ್ಳರಿಗೆ ಸರಕಾರ ಬೆಂಬಲ
ರಾಜ್ಯದಲ್ಲಿ 1964ರಿಂದ ಗೋ ಹತ್ಯೆ ನಿಷೇಧದ ಕಾನೂನು ಜಾರಿಯಲ್ಲಿದೆ. ಯಾವುದೇ ಹಸು, ಕರು, ಎಮ್ಮೆಯನ್ನು ಕಡಿಯುವಂತಿಲ್ಲ ಎಂದು ಅಲ್ಲಿ ಸ್ಪಷ್ಟವಾಗಿ ಉಲ್ಲೇಖೀಸಲಾಗಿದೆ. ಆದರೆ ಇಂದು ಸರಕಾರ ಆ ಕಾನೂನನ್ನು ಪಾಲಿಸುತ್ತಿಲ್ಲ. ಗೋ ಹಂತಕರಿಗೆ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿದರು.

ವಿಶ್ವ ಹಿಂದೂ ಪರಿಷತ್‌, ಬಜರಂಗದಳ ಹಾಗೂ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ತಹಶೀಲ್ದಾರ್‌ ಹಾಗೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಗೋವಿಗೆ ಪೂಜೆ ಸಲ್ಲಿಸಲಾಯಿತು.

ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಬಜರಂಗದಳ ಜಿಲ್ಲಾ ಸಂಚಾಲಕ ದಿನೇಶ್‌ ಮೆಂಡನ್‌, ವಿಶ್ವಹಿಂದೂ ಪರಿಷತ್‌ ಜಿಲ್ಲಾಧ್ಯಕ್ಷ ಸಂತೋಷ ಸುವರ್ಣ, ಉಪಾಧ್ಯಕ್ಷೆ ಸುಪ್ರಭಾ ಆಚಾರ್ಯ, ದಿನೇಶ್‌ ಹೆಬ್ರಿ, ಬಿಜೆಪಿ ಮುಖಂಡರಾದ ಮಟ್ಟಾರು ರತ್ನಕರ ಹೆಗ್ಡೆ, ರಾಘವೇಂದ್ರ ಕಿಣಿ, ಉದಯ ಕುಮಾರ್‌ ಶೆಟ್ಟಿ, ಸಂಧ್ಯಾ, ನಯನ ಉಪಸ್ಥಿತರಿದ್ದರು.

ಕುರಾನ್‌ನಲ್ಲೂ ಗೋಹತ್ಯೆ ನಿಷೇಧವಿದೆ
ಬಕ್ರೀದ್‌ ಹಬ್ಬದಂದು ಪ್ರಾಣಿಬಲಿ ನೀಡುವು ದಕ್ಕೆ ಅವಕಾಶ ಇದೆ, ಅದರೇ ಗೋಹತ್ಯೆ ಮಾಡ ಬೇಕು ಎಂದು ಎಲ್ಲಿಯೂ ಹೇಳಿಲ್ಲ. ಹಬ್ಬವನ್ನು ಆಚರಿಸಿ, ಆದರೆ ಶಾಂತಿಯನ್ನು ಕೆಡಿಸಬೇಡಿ. ನಿಮಗೆ ಹಬ್ಬ ಬೇಕೋ ಶಾಂತಿ ಬೇಕೋ ಎಂಬುದನ್ನು ನಿರ್ಧರಿಸಿ. ಕುರಾನ್‌ನಲ್ಲಿ ಗೋಹತ್ಯೆಗೆ ನಿಷೇಧ ಇದೆ, ಷರೀಯತ್‌ನಲ್ಲಿ ಕಳ್ಳತನ ಮಾಡಿದವನ ಕೈ ಕಡಿಯಬೇಕು ಎಂದು ಹೇಳಲಾಗಿದೆ. ಇವೆರಡನ್ನೂ ಪಾಲಿಸಿ, ಆಗ ಗೋಕಳ್ಳತನ – ಗೋಹತ್ಯೆ ಎರಡೂ ನಿಲ್ಲುತ್ತದೆ ಎಂದು ವಿಶ್ವ ಹಿಂದೂ ಪರಿಷತ್‌ ಮಂಗಳೂರು ವಿಭಾಗ ಕಾರ್ಯದರ್ಶಿ ಶರಣ್‌ ಪಂಪ್‌ವೆಲ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next