Advertisement

ಕಿನ್ನಿಗೋಳಿ: ಪತಿಯಿಂದ ಸಾಮೂಹಿಕ ಹತ್ಯೆ ಯತ್ನ, ಪತ್ನಿಯ ರಕ್ಷಣೆ; ಮೂವರು ಮಕ್ಕಳು ಬಲಿ

12:10 AM Jun 24, 2022 | Team Udayavani |

ಕಿನ್ನಿಗೋಳಿ : ಪತ್ನಿ ಮತ್ತು ಮೂವರು ಮಕ್ಕಳನ್ನು ಬಾವಿಗೆ ತಳ್ಳಿ ಬಳಿಕ ತಾನೂ ಅದೇ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕಿನ್ನಿಗೋಳಿ ಸಮೀಪದ ಪದ್ಮನೂರು ಶೆಟ್ಟಿಗಾಡುವಿನಲ್ಲಿ ಗುರುವಾರ ಸಂಭವಿಸಿದೆ. ಪತಿ, ಪತ್ನಿ ಬದುಕುಳಿದಿದ್ದು ಮೂವರು ಮಕ್ಕಳು ಮೃತಪಟ್ಟಿದ್ದಾರೆ.

Advertisement

ಮಕ್ಕಳಾದ ರಶ್ಮಿತಾ (14), ಉದಯ (12) ಮತ್ತು ದಕ್ಷಾ (6) ಮೃತಪಟ್ಟವರು.

ಬಾಲಕಿ ರಶ್ಮಿತಾ ಕಟೀಲು ದೇವಸ್ಥಾನದ ಶಾಲೆಯ 8ನೇ ತರಗತಿಯಲ್ಲಿ, ಉದಯ ಪುನರೂರು ಭಾರತಮಾತಾ ಶಾಲೆಯ 6ನೇ ತರಗತಿಯಲ್ಲಿ ಮತ್ತು ದಕ್ಷಾ ಪದ್ಮನೂರು ಅಂಗನವಾಡಿಯಲ್ಲಿ ಕಲಿಯುತ್ತಿದ್ದರು. ತಂದೆ ಪದ್ಮನೂರು ಶೆಟ್ಟಿಗಾಡು ನಿವಾಸಿ ಹಿತೇಶ್‌ ಶೆಟ್ಟಿಗಾರ್‌ (46) ಕೃತ್ಯ ಎಸಗಿದ್ದ ಆರೋಪಿ.

ಹಿತೇಶ್‌ ತನ್ನ ಮನೆ ಪಕ್ಕದ ಮುಖ್ಯ ರಸ್ತೆ ಬದಿಯಲ್ಲಿ ತೆಂಗಿನಕಾಯಿ, ಸೀಯಾಳ ವ್ಯಾಪಾರ ಮಾಡುತ್ತಿದ್ದು, ಪತ್ನಿ ಲಕ್ಷ್ಮೀ ಬೀಡಿ ಕಟ್ಟುತ್ತಿದ್ದರು. ಕಳೆದೊಂದು ವಾರದಿಂದ ಅಂಗಡಿಯೊಂದಕ್ಕೆ ಕೆಲಸಕ್ಕೆ ಹೋಗುತ್ತಿದ್ದರು. ಗುರುವಾರ ಬೆಳಗ್ಗೆ ಎಂದಿನಂತೆ ಮಕ್ಕಳನ್ನು ಶಾಲೆಗೆ ಕಳುಹಿಸಿ ಕೆಲಸಕ್ಕೆ ಹೋಗಿ ಸಂಜೆ ವಾಪಸಾದಾಗ ಮಕ್ಕಳು ಮನೆಯಲ್ಲಿ ಕಾಣಿಸದ್ದರಿಂದ ಸಮೀಪದಲ್ಲೇ ಇದ್ದ ಪತಿಯ ಬಳಿ ಮಕ್ಕಳು ಎಲ್ಲಿದ್ದಾರೆ ಎಂದು ವಿಚಾರಿಸಿದರು. ಮೊದಲಿಗೆ ಎಲ್ಲೋ ಅಡಗಿರಬಹುದು ಎಂದು ಹೇಳಿದನು. ಮನೆಯಲ್ಲಿ ಹುಡುಕಿ ಸಿಗದಿದ್ದಾಗ ಸಮೀಪದ ಬಾವಿಗೆ ಇಣುಕಿದಾಗ ಮಕ್ಕಳು ಮುಳುಗೇಳುತ್ತಿರುವುದು ಕಾಣಿಸಿತು. ಆಗ ಸ್ಥಳಕ್ಕೆ ಧಾವಿಸಿದ ಹಿತೇಶ್‌ ಪತ್ನಿಯನ್ನೂ ಬಾವಿಗೆ ತಳ್ಳಿ ತಾನೂ ಹಾರಿ ಆತ್ಮಹತ್ಯೆಗೆ ಯತ್ನಿಸಿದನು.
ಘಟನೆ ನಡೆದ ಸ್ಥಳಕ್ಕೆ ಡಿಸಿಪಿ ಹರಿರಾಂ ಶಂಕರ್‌ ಎಸಿಪಿ ಮಹೇಶ್‌ ಕುಮಾರ್‌, ಮೂಲ್ಕಿ ಠಾಣಾಧಿಕಾರಿ ಕುಸುಮಾಧರ್‌ ಭೇಟಿ ನೀಡಿದ್ದಾರೆ.

Advertisement

ಮಾನಸಿಕ ಖನ್ನತೆ
ಹಿತೇಶ್‌ ಸ್ವಲ್ಪ ಸಮಯ ಎಂಆರ್‌ಪಿಎಲ್‌ನ ಕ್ಯಾಂಟಿನ್‌ನಲ್ಲಿ ಕೆಲಸ ಮಾಡಿದ್ದು ಕಳೆದ 6 ತಿಂಗಳಿನಿಂದ ಮನೆಯ ಸಮೀಪ ಸೀಯಾಳ ಹಾಗೂ ಹೂವಿನ ವ್ಯಾಪಾರ ಮಾಡುತ್ತಿದ್ದ. ಮನೆಯ ಪಕ್ಕದಲ್ಲಿ ಅಂಗಡಿ ಕೋಣೆಯನ್ನು ಕಟ್ಟಿಸಿದ್ದ. ಮಳೆಗಾಲ ಆರಂಭವಾದ ಬಳಿಕ ಸೀಯಾಳ ವ್ಯಾಪಾರವನ್ನು ನಿಲ್ಲಿಸಿದ್ದನು. ಕೆಲವು ದಿನಗಳಿಂದ ಮಾನಸಿಕವಾಗಿ ಕ್ಷೀಣಿಸಿದಂತೆ ಕಾಣಿಸುತ್ತಿದ್ದು, ಹೆಚ್ಚಿನ ಸಮಯ ಮನೆಯಲ್ಲೇ ಮೌನವಾಗಿ ಇರುತ್ತಿದ್ದ ಎಂದು ಪಕ್ಕದ ಮನೆಯವರು ತಿಳಿಸಿದ್ದಾರೆ.

ಹಗ್ಗದ ಮೂಲಕ ದಂಪತಿ ರಕ್ಷಣೆ
ಪತ್ನಿ ಲಕ್ಷ್ಮೀ ಮಕ್ಕಳನ್ನು ರಕ್ಷಿಸಲು ಪ್ರಯತ್ನಿಸಿದರೂ ಸಾಧ್ಯವಾಗದೆ ಕೂಗಿದಾಗ ರಸ್ತೆಬದಿಯಲ್ಲಿ ಹೂ ಮಾರುತ್ತಿದ್ದ ನಾಸೀರ್‌ ಹಾಗೂ ಮತ್ತಿಬ್ಬರು ಬಾವಿಯ ಬಳಿ ಬಂದು ಹಿತೇಶ್‌ ಮತ್ತು ಲಕ್ಷ್ಮೀ ಅವರನ್ನು ಹಗ್ಗದ ಸಹಾಯದಿಂದ ರಕ್ಷಿಸಿದ್ದಾರೆ. ಕೂಡಲೇ ಮೂಲ್ಕಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಅಗ್ನಿಶಾಮಕ ದಳದ ಸಹಾಯದಿಂದ ಮೂಲ್ಕಿ ಪೊಲೀಸರು ಮೂವರೂ ಮಕ್ಕಳನ್ನು ಮೇಲೆಕ್ಕೆತ್ತಿದ್ದರು. ಚಿಂತಾಜನಕ ಸ್ಥಿತಿಯಲ್ಲಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೂವರೂ ಮಕ್ಕಳು ಮೃತಪಟ್ಟಿದ್ದಾರೆ.
ಹಿತೇಶ್‌ ಶೆಟ್ಟಿಗಾರ್‌ ಅರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿದ್ದು, ಕಳೆದ ಕೆಲವು ದಿನಗಳಿಂದ ಮಾನಸಿಕವಾಗಿ ನೊಂದಿದ್ದರು ಎನ್ನಲಾಗಿದೆ.

ತಾಯಿಯ ಆರ್ತನಾದ
ಮೂವರೂ ಮಕ್ಕಳನ್ನು ಕಳೆದುಕೊಂಡ ಹೆತ್ತಬ್ಬೆ ಕಂಗಾಲಾಗಿದ್ದಾಳೆ. ನನ್ನ ಮಕ್ಕಳನ್ನು ತಂದು ಕೊಡಿ. ಬಾವಿಯಲ್ಲಿ ಇದ್ದ ನನ್ನ ಮಗ, ಮಗಳು ಎಲ್ಲಿ ಹೋದರು. ಅವರನ್ನು ನೋಡಬೇಕು. ನನಗೆ ಮಕ್ಕಳು ಬೇಕು ಎನುತ್ತ ಕಣ್ಣೀರು ಹಾಕುತ್ತಿದ್ದಾರೆ. ಮನೆಯೊಳಗಿನ ದೇವರ ಚಿತ್ರದ ಮುಂದೆಯೂ ಬಿಕ್ಕಿ ಬಿಕ್ಕಿ ಅಳುತ್ತ ಮಕ್ಕಳನ್ನು ನೆನೆದು ರೋದಿಸುತ್ತಿರುವುದನ್ನು ಕಂಡು ಅಲ್ಲಿ ಸೇರಿದವರ ಕರುಳನ್ನೂ ಚುರುಕ್‌ ಅನ್ನಿಸುವಂತಿತ್ತು.

Advertisement

Udayavani is now on Telegram. Click here to join our channel and stay updated with the latest news.

Next