ಬೆಳಗಾವಿ: ಗಡಿಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜಿಲ್ಲೆಯಲ್ಲಿ ಪ್ರವಾಹದ ಅಬ್ಬರಕ್ಕೆ ಜನತೆ ನಲುಗಿದ್ದು, ರಕ್ಷಣೆಗಾಗಿ ಮೂರು ಹೆಲಿಕಾಪ್ಟರ್ ಗಳು ಬಂದಿಳಿದಿದ್ದರಿಂದ ಎರಡು ದಿನಗಳಲ್ಲಿ ಬೆಳಗಾವಿ ಹಾಗೂ ಬಗಲಕೋಟೆ ಜಿಲ್ಲೆಯ 45 ಜನರನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಸಾಗಿಸಲಾಗಿದೆ.
ಗೋಕಾಕ ತಾಲೂಕಿನ ಉದಗಟ್ಟಿ ಗ್ರಾಮದಲ್ಲಿ ಸಿಲುಕಿಕೊಂಡಿದ್ದ ರಾಮದುರ್ಗ ತಾಲೂಕಿನ ಹಾಲೋಳ್ಳಿಯ 18, ಮುಧೋಳ ತಾಲೂಕಿನ ಸೊದ್ನಾಳ ಗ್ರಾಮದ ಒಬ್ಬ ಹಾಗೂ ರೂಗಿ ಗ್ರಾಮದ 6 ಜನರನ್ನು ಗುರುವಾರ ರಕ್ಷಿಸಲಾಗಿದೆ. ಶುಕ್ರವಾರ ದಿನಮತ್ತೆ ಕಾರ್ಯಾಚರಣೆ ನಡೆಸಿದ ಸೇನಾ ಪಡೆ ಹಾಲೋಳ್ಳಿಯ ಮೂವರು ಹಾಗೂ ರೂಗಿ ಗ್ರಾಮದ 10 ಜನರನ್ನು ರಕ್ಷಿಸಿದೆ.
ಪ್ರವಾಹ ಪೀಡಿತ ಸಂತ್ರಸ್ತರ ರಕ್ಷಣೆಗಾಗಿ ಸೇನಾಪಡೆ ಹಗಲಿರುಳು ಶ್ರಮಿಸುತ್ತಿದ್ದು, ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಯಲ್ಲಿ ಹೆಲಿಕಾಪ್ಟರ್ ಗಳು ಸುತ್ತಾಡುತ್ತಿವೆ. ನಡುಗಡ್ಡೆಯಲ್ಲಿ ಸಿಕ್ಕಿ ಹಾಕಿಕೊಂಡಿರುವ ಸಂತ್ರಸ್ತರ ನೆರವಿಗೆ ಸೇನಾಪಡೆ ಧಾವಿಸಿ ಬಂದಿದ್ದು, ಆಹಾರದ ಪೊಟ್ಟಣಗಳನ್ನೂ ವಿತರಿಸುತ್ತಿದೆ.