Advertisement

ಮಕ್ಕಳ ಹಕ್ಕುಗಳ ರಕ್ಷಣೆ ನಮ್ಮೆಲ್ಲರ ಕರ್ತವ್ಯ

07:31 AM Mar 09, 2019 | |

ತುಮಕೂರು: ಮಕ್ಕಳ ರಕ್ಷಣೆ, ಬಾಲ್ಯ, ಸುರಕ್ಷತೆ ಪ್ರತಿಯೊಬ್ಬರ ನಾಗರಿಕನ ಕರ್ತವ್ಯ. ಆದರೆ ಇಂದು ಮಕ್ಕಳು ಭ್ರೂಣಾವಸ್ಥೆಯಿಂದಲೇ ಶೋಷಣೆಗೊಳಗಾಗುತ್ತಿರುವುದು ಉತ್ತಮ ಬೆಳವಣಿಗೆಯಲ್ಲ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ರಾಜೇಂದ್ರ ಬಾದಾಮಿಕರ್‌ ಆತಂಕ ವ್ಯಕ್ತಪಡಿಸಿದರು.

Advertisement

ನಗರದ ಜಿಲ್ಲಾಸ್ಪತ್ರೆ ಆಡಿಟೋರಿಯಂನಲ್ಲಿ ಜಿಲ್ಲಾಡಳಿತ, ಜಿಪಂ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಸಹಯೋಗದಲ್ಲಿ ವಸತಿ ನಿಲಯಗಳಲ್ಲಿ ಮಕ್ಕಳ ಸುರಕ್ಷತೆ ಮತ್ತು ರಕ್ಷಣಾ ನೀತಿ ಕುರಿತು ವಿವಿಧ ಇಲಾಖೆಗಳಡಿ ನಡೆಯುತ್ತಿರುವ ವಸತಿನಿಲಯಗಳ ಮೇಲ್ವಿಚಾರಕರಿಗೆ ಏರ್ಪಡಿಸಿದ್ದ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳ ರಕ್ಷಣೆ, ಬಾಲ್ಯ, ಸುರಕ್ಷತೆ ಪ್ರತಿಯೊಬ್ಬರ ನಾಗರಿಕನ ಕರ್ತವ್ಯವಾಗಿದ್ದು, ಮಕ್ಕಳಿಗೆ ಸಂಬಂಧಿಸಿದಂತೆ ಸಾಕಷ್ಟು ಹಕ್ಕುಗಳನ್ನು ಸಂವಿಧಾನದಲ್ಲಿ ನೀಡಲಾಗಿದೆ ಎಂದರು.

ಮಕ್ಕಳನ್ನು ನಿರ್ಲಕ್ಷಿಸಬೇಡಿ: ಸಮಾಜದಲ್ಲಿ ಭ್ರೂಣಾವಸ್ಥೆಯಿಂದ ಪ್ರೌಢಾವಸ್ಥೆ ತಲುಪುವವರೆಗೂ ವಿವಿಧ ಹಂತಗಳಲ್ಲಿ ಮಕ್ಕಳು ಶೋಷಣೆಗೊಳಗಾಗುತ್ತಲೇ ಇದ್ದಾರೆ. ಸಾಮಾನ್ಯವಾಗಿ ಬಡತನ, ಲಿಂಗ ತಾರತಮ್ಯ ಮತ್ತಿತರ ಕಾರಣ ಗಳಿಗಾಗಿ ಮಹಿಳೆಯರ ನಂತರ ಹೆಚ್ಚಿನ ಶೋಷಣೆಗೊಳಗಾಗುವವರು ಮಕ್ಕಳೇ ಆಗಿದ್ದು, ದೇಶವನ್ನು ಮುನ್ನಡೆಸಬೇಕಾದ ಮಕ್ಕಳ ಜವಾಬ್ದಾರಿ ನಮ್ಮ ಮೇಲಿದೆ. ಅವರನ್ನು ನಿರ್ಲಕ್ಷಿಸದೆ ಉತ್ತಮ ನಾಗರಿಕರನ್ನಾಗಿ ರೂಪಿಸುವ ಹೊಣೆ ನಮ್ಮದು ಎಂದು ತಿಳಿಸಿದರು.

ಅರಿವು ಕಾರ್ಯಾಗಾರ: ಶಾಲೆಯಲ್ಲಿ ಹೆಚ್ಚಿನ ಅಂಕ ಗಳಿಸಬೇಕೆಂದು ಪೋಷಕರು ಮಕ್ಕಳ ಮೇಲೆ ಒತ್ತಡ ಹಾಕದೆ ತಮ್ಮ ಬಾಲ್ಯಾವಸ್ಥೆ ಮುಕ್ತವಾಗಿ ಅನುಭವಿಸಲು ಅವಕಾಶ ಮಾಡಿಕೊಡಬೇಕು. ಮಕ್ಕಳು ಪುಸ್ತಕದ ಹುಳುವಾ ಗಬೇಕೆಂದು ಎಲ್ಲ ಪೋಷಕರು ಬಯಸುತ್ತಾರೆ. ಸಾಮಾನ್ಯ ಜ್ಞಾನಕ್ಕಿಂತ ಮೀರಿದ ಜ್ಞಾನ ಮತ್ತೂಂದಿಲ್ಲ. ಅವರು ಗಳಿಸುವ ಅಂಕಗಳ ಆಧಾರದ ಮೇಲೆ ಮಕ್ಕಳ ಬುದ್ಧಿಮಟ್ಟ ಅಳೆಯಲು ಸಾಧ್ಯವಿಲ್ಲ. ಯಾವುದೇ ವಿಷಯವನ್ನು ಎಷ್ಟರ ಮಟ್ಟಿಗೆ ಅರ್ಥಮಾಡಿಕೊಂಡಿದ್ದಾರೆ?  ಅವರ ಬೆಳವಣಿಗೆ ಯಾವ ರೀತಿ ಇರಬೇಕು? ಎಂದು ಹಿರಿಯರಾದ ನಾವು ವಿಚಾರ ಮಾಡುವುದೇ ಇಲ್ಲ. ಈ ನಿಟ್ಟಿನಲ್ಲಿ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ಅಧಿಕಾರಿಗಳಲ್ಲದೆ ಪೋಷಕರಿಗೂ ಇಂತಹ ಅರಿವು ಕಾರ್ಯಾಗಾರ ಏರ್ಪಡಿಸಬೇಕು ಎಂದರು.

ಆತ್ಮ ವಿಶ್ವಾಸ ಬೆಳೆಸಲು ಸಹಕಾರಿ: ತಂದೆ-ತಾಯಿಗಳಿಬ್ಬರೂ ಉದ್ಯೋಗಸ್ಥರಾಗಿರುವ ಮಕ್ಕಳು ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದ್ದಾರೆ. ಇಂಥ ಮಕ್ಕಳು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿ, ಮಾದಕ ವ್ಯಸನಿ, ಮಾನಸಿಕ ಖನ್ನತೆಗಳಿಂದ  ಬಳಲುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ  ಮಕ್ಕಳು ವಸತಿನಿಲಯಗಳಲ್ಲಿ ಕನಿಷ್ಠ ಒಂದೆರಡು ವರ್ಷವಾದರೂ ವ್ಯಾಸಂಗ ಮಾಡಿದರೆ ಭಿನ್ನ ಮನಸ್ಕ, ಸಂಸ್ಕೃತಿ, ಪ್ರದೇಶಗಳಿಂದ ಬಂದ ಮಕ್ಕಳೊಂದಿಗೆ ಬೆರೆತು ಅವರ ಬುದ್ಧಿ ವಿಕಸನವಾಗುತ್ತದೆ. ವಸತಿನಿಲಯಗಳಲ್ಲಿ ಬೆಳೆದ ಮಕ್ಕಳಿಗೆ ತಂದೆ-ತಾಯಿಯರ ಮಹತ್ವ ಅರಿವಾಗುತ್ತದೆ. ಅಲ್ಲದೆ ತಮ್ಮ ಭಾವನೆ, ಆಂತರಿಕ ವಿಷಯಗಳನ್ನು ಸ್ನೇಹಿತರೊಂದಿಗೆ ಹಂಚಿಕೊಂಡು ಆತ್ಮವಿಶ್ವಾಸ ಬೆಳೆಸಿಕೊಳ್ಳಲು ಅವಕಾಶವಾಗುತ್ತದೆ ಎಂದು ಹೇಳಿದರು.

Advertisement

ನಿಮ್ಮ ಜವಾಬ್ದಾರಿ: ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಡಾ.ದೇವರಾಜ್‌ ಮಾತನಾಡಿ, ವಸತಿನಿಲಯದಲ್ಲಿ ಓದುತ್ತಿರುವ ಮಕ್ಕಳು ಬಾಲವಾಡಿಯಿಂದ ಪ್ರಾರಂಭವಾಗಿ ಪದವಿ ತರಗತಿವರೆಗೆ ನಿಲಯದ ಮೇಲ್ವಿಚಾರಕರ ಒಡನಾಟದಲ್ಲಿ ಬೆಳೆಯುತ್ತಾರೆ. ಮಕ್ಕಳು ತಮ್ಮ ಬಾಲ್ಯದ ಶೇ.70 ರಷ್ಟು ಭಾಗದ ಜೀವನವನ್ನು ವಸತಿನಿಲಯಗಳಲ್ಲಿ ಕಳೆಯುವುದರಿಂದ ಅಲ್ಲಿನ ವಾತಾವರಣ ಹಾಗೂ ಅಧಿಕಾರಿಗಳನ್ನು ಅನುಕರಿಸುವುದರಿಂದ ವಸತಿ ನಿಲಯಗಳ ಮೇಲ್ವಿಚಾರಕರು ಅವರಿಗೆ ಮಾದರಿಯಾಗಿರಬೇಕು.

ಮಕ್ಕಳ ಬಾಲ್ಯ ಕಸಿಯದೆ ಅವರಿಗಿರುವ ಹಕ್ಕುಗಳ ರಕ್ಷಣೆ ಮಾಡುವುದು ನಿಮ್ಮ ಜವಾಬ್ದಾರಿ ಎಂದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್‌.ನಟರಾಜ್‌, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಕೆ.ಆರ್‌. ರಾಜಕುಮಾರ್‌, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವಾಸಂತಿ ಉಪ್ಪಾರ್‌, ಸಂಪನ್ಮೂಲ ವ್ಯಕ್ತಿ ಕೊಪ್ಪಳದ ಮಕ್ಕಳ ಸಂರಕ್ಷಣಾ ಯೋಜನೆಯ ಸಂಯೋಜಕ ಕೆ.ರಾಘವೇಂದ್ರ ಭಟ್‌, ಅಂಬಿಕಾ ಜಿಲ್ಲೆಯ ವಿವಿಧ ವಸತಿನಿಲಯಗಳ ಮೇಲ್ವಿಚಾರಕರು, ಸಿಬ್ಬಂದಿ ಇತತರು ಇದ್ದರು.

ಆತಂಕಕಾರಿ ಬೆಳವಣಿಗೆ: ಜಿಪಂ ಸಿಇಒ ಶುಭಾ ಕಲ್ಯಾಣ್‌ ಮಾತನಾಡಿ, ವಸತಿನಿಲಯಗಳ ಮೇಲ್ವಿಚಾರಕರು ಹಾಗೂ ಸಿಬ್ಬಂದಿ ಮಕ್ಕಳ ಸುರಕ್ಷತೆಗಾಗಿ ನಿಲಯದ ಸುತ್ತ ಆಗಿಂದಾಗ್ಗೆ ಪರಿಶೀಲಿಸಬೇಕು. ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆ, ವಿಶೇಷ ಜ್ಞಾನವನ್ನು ಹುಡುಕಿ ಬೆಳಕಿಗೆ ತರುವ ಪ್ರಯತ್ನ ಮಾಡಬೇಕು. ಮಕ್ಕಳಿಗೆ ಉತ್ತಮ ವಾತಾವರಣ ಸೃಷ್ಟಿಸಬೇಕು. ಮಕ್ಕಳು ಸೈಬರ್‌ ಅಪರಾಧಗಳಲ್ಲಿ ಹೆಚ್ಚಾಗಿ ಭಾಗಿಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಈ ನಿಟ್ಟಿನಲ್ಲಿ 18 ವರ್ಷದೊಳಗಿನ ಮಕ್ಕಳನ್ನು ಸ್ಮಾರ್ಟ್‌ಫೋನ್‌ಗಳಿಂದ ದೂರವಿಡಬೇಕು. ಹೆಣ್ಣಿರಲಿ, ಗಂಡಿರಲಿ 3 ವರ್ಷದ ಮಕ್ಕಳಿಂದ ಹಿಡಿದು ಪ್ರೌಢಾವಸ್ಥೆವರೆಗಿನ ಮಕ್ಕಳಿಗೆ ಗುಡ್‌ ಟಚ್‌ ಹಾಗೂ ಬ್ಯಾಡ್‌ ಟಚ್‌ ಬಗ್ಗೆ ತಿಳಿವಳಿಕೆ ಹೇಳಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next