ಉಡುಪಿ: ಗ್ರಾಮ ಪಂಚಾಯತ್‌ಗಳಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಗೆ ವಿಶೇಷ ಗ್ರಾಮಸಭೆ ನಡೆಸುವುದು, ಮಕ್ಕಳ ಅಹವಾಲುಗಳನ್ನು ಆಲಿಸುವುದು ಸಾಮಾನ್ಯ. ಇನ್ನು ಮುಂದೆ ಮಕ್ಕಳ ಹಕ್ಕುಗಳ ರಕ್ಷಣೆಗೆ ಪ್ರತಿ ಗ್ರಾ.ಪಂ.ನಲ್ಲೂ ಫೇಸ್‌ಬುಕ್ ಪೇಜ್ ರಚನೆ ಮಾಡುವಂತೆ ರಾಜ್ಯ ಪಂಚಾಯತ್‌ರಾಜ್ ಆಯುಕ್ತಾಲಯ ಆದೇಶ ಹೊರಡಿಸಿದೆ.
ಈ ಫೇಸ್‌ಬುಕ್ ಪೇಜ್‌ಗೆ ತಮ್ಮ ಗ್ರಾ. ಪಂ. ಹೆಸರಿನೊಂದಿಗೆ ಮಕ್ಕಳ ಹಕ್ಕುಗಳ ರಕ್ಷಣೆ(ಉದಾ: ಗ್ರಾ.ಪಂ. ಮಕ್ಕಳ ಹಕ್ಕುಗಳ ರಕ್ಷಣೆ, ಜಿಲ್ಲೆ ಮತ್ತು ತಾಲೂಕು ಹೆಸರು)ಯ ಉಲ್ಲೇಖ ಇರಬೇಕು. ಪೇಜ್ ರಚನೆಯ ಅನಂತರ ಆಯಾ ಗ್ರಾ.ಪಂ. ವ್ಯಾಪ್ತಿಯ ಶಾಲಾ ಶಿಕ್ಷಕರು, ಸ್ಥಳೀಯ ಸ್ವಯಂಸೇವಾ ಸಂಘಟನೆಗಳ ಮೂಲಕ ಮಕ್ಕಳಿಗೆ ಈ ಬಗ್ಗೆ ಮಾಹಿತಿ ನೀಡಬೇಕು.
ಮಕ್ಕಳ ಶಿಕ್ಷಣ, ಶಾಲೆ, ಆರೋಗ್ಯ ಸೇವೆ, ರಕ್ಷಣ ವ್ಯವಸ್ಥೆ, ವಸತಿ ನಿಲಯಗಳು, ಆಹಾರ ಮತ್ತು ಪೌಷ್ಟಿಕತೆ, ವಿಪತ್ತು ನಿರ್ವಹಣೆ, ನೀರು, ನೈರ್ಮಲ್ಯ, ಶುಚಿತ್ವ, ರಸ್ತೆ ಮಾರ್ಗಸೂಚಿ, ಸಾರ್ವಜನಿಕ ಕಟ್ಟಡ, ವಸತಿ ಸೌಲಭ್ಯ, ಅಂಗನವಾಡಿ ಹಾಗೂ ಮಾನವ ಸಂಪನ್ಮೂಲಕ ಮೊದಲಾದ ಕ್ಷೇತ್ರ ಅಥವಾ ವಿಷಯಗಳಿಗೆ ಸಂಬಂಧಿಸಿದ ಮಕ್ಕಳ ಸಮಸ್ಯೆಗಳು, ಬೇಡಿಕೆ, ಪ್ರಶ್ನೆಗಳನ್ನು ಫೇಸ್‌ಬುಕ್‌ಪೇಜ್‌ನಲ್ಲಿ ದಾಖಲಿಸಲು ಪ್ರಯತ್ನಿಸಬೇಕು.
ಗ್ರಾ.ಪಂ.ನಿಂದ ಈ ಪೇಜ್‌ನಲ್ಲಿ ಮಕ್ಕಳಿಂದ ಬಂದ ಸಮಸ್ಯೆ, ಬೇಡಿಕೆ, ಪ್ರಶ್ನೆಗಳ ಪಟ್ಟಿಯನ್ನು ಸಿದ್ಧಪಡಿಸಿ ಮಕ್ಕಳ ಗ್ರಾಮ ಸಭೆಯಲ್ಲಿ ಮಂಡಿಸಬೇಕು. ಮಕ್ಕಳಿಗೆ ಸಂಬಂಧಿಸದ ವಿಷಯಗಳು ಬಂದಲ್ಲಿ ಅದನ್ನು ಪಿಡಿಒಗಳೊಂದಿಗೆ ಚರ್ಚಿಸಿ ಆ ವಿಷಯವನ್ನು ಕೈಬಿಡಬಹುದು. ಮಕ್ಕಳ ಚಿತ್ರಗಳನ್ನು ಫೇಸ್‌ಬುಕ್ ಪೇಜ್‌ನಲ್ಲಿ ಅಪ್‌ಲೋಡ್ ಮಾಡುವಾಗ ವೈಯಕ್ತಿಕತೆಗೆ ಧಕ್ಕೆ ಬಾರದಂತೆ ಖಾಸಗಿತನವನ್ನು ಕಾಪಾಡಬೇಕು ಎಂದು ಗ್ರಾ.ಪಂ.ಗಳಿಗೆ ಆಯುಕ್ತಾಲಯ ನಿರ್ದೇಶನ ನೀಡಿದೆ.
ಮಕ್ಕಳಿಗೆ ದನಿಯಾಗಿ
ಮಕ್ಕಳು ಅಥವಾ ಮಕ್ಕಳ ಪರವಾಗಿ ಆಸಕ್ತರು ಮಕ್ಕಳ ಸಮಸ್ಯೆ, ಬೇಡಿಕೆ ಅಥವಾ ಪ್ರಶ್ನೆಗಳನ್ನು ಬರೆದು ಹಾಕಲು ಅನುಕೂಲವಾಗುವಂತೆ ಮಕ್ಕಳ ಧ್ವನಿ ಪೆಟ್ಟಿಗೆಯನ್ನು ಆಕರ್ಷಣೀಯವಾಗಿ ತಯಾರಿಸಬೇಕು. ಈ ಧ್ವನಿ ಪೆಟ್ಟಿಗೆಯ ಮೇಲೆ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಬರೆದಿರಬೇಕು. ಈ ಧ್ವನಿ ಪೆಟ್ಟಿಗೆಯನ್ನು ಪಂಚಾಯತ್‌ನ ಪ್ರತಿ ವಾರ್ಡ್ ಅಥವಾ ಗ್ರಾಮದಲ್ಲಿ ಇಡಬೇಕು. ಮುಖ್ಯವಾಗಿ ಜನ ಸಂದಣಿ ಹೆಚ್ಚಿರುವ ಶಾಲೆ, ವಸತಿ ನಿಲಯ, ಮಕ್ಕಳ ಪಾಲನ ಕೇಂದ್ರ, ಅಂಗನವಾಡಿ ಕೇಂದ್ರ, ನ್ಯಾಯಬೆಲೆ ಅಂಗಡಿ, ಹಾಲು ಉತ್ಪಾದಕರ ಸಹಕಾರಿ ಸಂಘ, ಗ್ರಾ.ಪಂ. ಕಚೇರಿಗಳಲ್ಲಿ ಇಡಬೇಕು ಎಂದು ಸೂಚಿಸಿದೆ.
Related Articles
ಮಕ್ಕಳ ಹಕ್ಕುಗಳ ರಕ್ಷಣೆಗೆ ಸಂಬಂಧಿಸಿದಂತೆ ಮಕ್ಕಳ ಗ್ರಾಮ ಸಭೆಯಲ್ಲಿ ನಿರಂತರ ಚರ್ಚೆ ನಡೆಯುತ್ತಿರುತ್ತದೆ. ಮಕ್ಕಳ ರಕ್ಷಣೆಗೆ ಗ್ರಾ.ಪಂ.ಗಳು ಎಲ್ಲ ರೀತಿಯ ಕ್ರಮ ತೆಗೆದುಕೊಳ್ಳುತ್ತಿವೆ.
– ಪ್ರಸನ್ನ ಎಚ್.,
ಸಿಇಒ, ಜಿ. ಪಂ. ಉಡುಪಿ