Advertisement

ಸಮುದ್ರದಲ್ಲಿ  ಸಿಲುಕಿದ್ದ  13 ಮೀನುಗಾರರ ರಕ್ಷಣೆ

08:40 AM Dec 07, 2017 | Harsha Rao |

ಪಣಂಬೂರು: ಒಖೀ ಚಂಡಮಾರುತದ ಹೊಡೆತಕ್ಕೆ ಸಿಲುಕಿ ನಾಲ್ಕು ದಿನಗಳಿಂದ ಆಳ ಸಮುದ್ರದಲ್ಲಿ ಕೆಟ್ಟು ನಿಂತು ಮುಳುಗಡೆ ಭೀತಿ ಎದುರಿಸುತ್ತಿದ್ದ ದೋಣಿಯಲ್ಲಿದ್ದ 13 ಮಂದಿ ಮೀನುಗಾರರನ್ನು ಕರ್ನಾಟಕ ಕರಾವಳಿ ರಕ್ಷಣಾ ಪಡೆ ಬುಧವಾರ ರಕ್ಷಿಸಿದೆ.

Advertisement

ಬಾರಾಕುಡಾ ಹೆಸರಿನ ಮೀನುಗಾರಿಕಾ ದೋಣಿ ನ. 7ರಂದು ಕೊಚ್ಚಿಯಿಂದ ಆಳಸಮುದ್ರ ಮೀನುಗಾರಿಕೆಗೆ ಹೊರಟಿತ್ತು. ಇದರಲ್ಲಿ ಕನ್ಯಾಕುಮಾರಿಯ ಒಂಬತ್ತು ಮಂದಿ, ಕೇರಳದ ಮೂವರು ಹಾಗೂ ಅಸ್ಸಾಮ್‌ನ ಓರ್ವ ಮೀನುಗಾರರಿದ್ದರು.

ಮಲ್ಪೆಯಿಂದ 10 ನಾಟಿಕಲ್‌ ಮೈಲು ದೂರದ ಕಡಲಲ್ಲಿ ಮೀನುಗಾರಿಕಾ ದೋಣಿಯೊಂದು ಮುಳುಗುತ್ತಿರುವ ಮಾಹಿತಿಯು ಮಲಪ್ಪುರದ ಮೀನುಗಾರಿಕಾ ಉಪ ನಿರ್ದೇಶಕರ ಕಚೇರಿಗೆ ಬುಧವಾರ ಲಭಿಸಿತು. ಕೂಡಲೇ ಕರ್ನಾಟಕ ಕೇರಳ ಗಡಿಯಲ್ಲಿ ಕಣ್ಗಾವಲು ನಿರತವಾಗಿದ್ದ ಕೋಸ್ಟ್‌ ಗಾರ್ಡ್‌ನ ಅಮರ್ತ್ಯ ಹಡಗಿಗೆ ಮಾಹಿತಿ ರವಾನಿಸಲಾಯಿತು. ಎರಡು ತಾಸಿನ ಅವ ಧಿಯಲ್ಲಿ ಕೆಟ್ಟು ನಿಂತಿದ್ದ ದೋಣಿಯ ಬಳಿಗೆ ತಲುಪಿದ ಕೋಸ್ಟ್‌ ಗಾರ್ಡ್‌ ಸಿಬಂದಿ 13 ಮೀನುಗಾರರನ್ನು ರಕ್ಷಿಸುವಲ್ಲಿ ಸಫಲರಾದರು.

ಡಿ. 2ರಂದು ಒಖೀ ಚಂಡಮಾರುತದ ಹೊಡೆತಕ್ಕೆ ದೋಣಿ ಎಂಜಿನ್‌ ಕೆಟ್ಟು ನಿಂತಿತು. ದೋಣಿಯ ಒಳಗೆ ನೀರು ನುಗ್ಗಿ ಮುಳುಗುವ ಹಂತ ತಲುಪಿತ್ತು.  ಮೀನುಗಾರರು ನೀರನ್ನು ಹೊರ ಹಾಕುತ್ತ ಜೀವ ಉಳಿಸಿ ಕೊಳ್ಳಲು ಯತ್ನಿಸಿದ್ದರು. ತುರ್ತು ಸಂದೇಶ ಕಳಿಸುವ ಉಪಕರಣಗಳು ಕೆಟ್ಟು ಹೋಗಿದ್ದವು. ತಂದಿದ್ದ ಆಹಾರ ಸಾಮಗ್ರಿ ಖಾಲಿಯಾದ್ದರಿಂದ ಹಸಿ ಮೀನು ತಿಂದು, ನೀರು ಕುಡಿದು ಜೀವ ಉಳಿಸಿಕೊಂಡಿದ್ದರು.

ಕೋಸ್ಟ್‌ಗಾರ್ಡ್‌ ಸಿಬಂದಿ ಸಮುದ್ರದಲ್ಲಿಯೇ ಆಹಾರ, ವೈದ್ಯಕೀಯ ಮತ್ತಿತರ ತುರ್ತು ಸೇವೆ ಒದಗಿಸಿ ಸುರಕ್ಷಿತವಾಗಿ ಕರೆತಂದರು. ಕೆಟ್ಟು ಹೋದ ದೋಣಿಯನ್ನು ಮೂವರು ಮೀನುಗಾರರ ಸಹಿತ ಮಲ್ಪೆ ಬಂದರಿಗೆ ಇನ್ನೊಂದು ದೋಣಿಯ ಮೂಲಕ ಕಳಿಸಲಾಯಿತು.

Advertisement

62 ಮಂದಿಯ ರಕ್ಷಣೆ
ಡಿ. 1ರ ಬಳಿಕ ಒಖೀ ಚಂಡಮಾರುತದಿಂದ ತತ್ತರಿಸಿರುವ ಮೀನು ಗಾರಿಕಾ ದೋಣಿಗಳಿಂದ ಒಟ್ಟು 35 ಮಂದಿಯನ್ನು ಕೋಸ್ಟ್‌ ಗಾರ್ಡ್‌ ಹಡಗು ಅಮರ್ತ್ಯ ರಕ್ಷಿಸಿದೆ. ಮಳೆಗಾಲದ ಅವ ಧಿಯಲ್ಲಿ 27 ಮೀನು ಗಾರರನ್ನು ಸುರಕ್ಷಿತ ವಾಗಿ ಕರೆತರಲಾಗಿದೆ. ಚಂಡಮಾರುತದಿಂದ ಸಮುದ್ರ ಬಿರುಸು ಗೊಂಡಿದ್ದು ಕಮಾಂಡರ್‌ ಅನಿಕೇತನ್‌ ನೇತೃತ್ವದ ಅಮರ್ತ್ಯ ಹಡಗು ಅರಬೀ ಸಮುದ್ರ ದಲ್ಲಿ ಕಣ್ಗಾವಲು ನಿರತವಾಗಿದೆ. ಪ್ರಾಣ ರಕ್ಷಣೆಗೆ ಪ್ರಥಮ ಆದ್ಯತೆ ನೀಡಲಾಗಿದೆ. ಗರಿಷ್ಠವಾಗಿ ದೋಣಿಗಳನ್ನು, ಬಲೆಗಳನ್ನು ರಕ್ಷಿಸುವ ಪ್ರಯತ್ನ ವನ್ನು ಕೋಸ್ಟ್‌ ಗಾರ್ಡ್‌ ಮಾಡುತ್ತದೆ. ತುರ್ತು ಸಂದರ್ಭದಲ್ಲಿ ಕರಾವಳಿ ಜಿಲ್ಲೆಗಳ ಜಿಲ್ಲಾ ಧಿಕಾರಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರುತ್ತೇವೆ.
– ಎಸ್‌.ಎಸ್‌. ದಸೀಲಾ, ಕಮಾಂಡರ್‌, ಕರ್ನಾಟಕ ಕೋಸ್ಟ್‌ ಗಾರ್ಡ್‌

ನ. 7ರಂದು ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದೆವು. ಡಿ. 2ರಂದು ಚಂಡಮಾರುತದಿಂದ ದೋಣಿ ಕೆಟ್ಟು ಮುಳುಗುವ ಹಂತ ತಲುಪಿತು. ತುರ್ತು ಸಂದೇಶ ಕಳಿಸಲು ಸಾಧ್ಯವಾಗಲಿಲ್ಲ. ಸಂಪರ್ಕ ಸಾಧನಗಳು ಹಾಳಾಗಿದ್ದರಿಂದ ಯಾವುದೇ ನೆರವು ಯಾಚಿಸುವ ಸ್ಥಿತಿಯಲ್ಲಿ ಇರಲಿಲ್ಲ. ದೋಣಿಗೆ ನೀರು ನುಗ್ಗಲಾರಂಭಿಸಿದಾಗ ದೇವರ ಮೇಲೆ ಭಾರ ಹಾಕಿ ನೀರು ಖಾಲಿ ಮಾಡುತ್ತಾ ಬೇರೆ ದೋಣಿಯ ನಿರೀಕ್ಷೆಯಲ್ಲಿದ್ದೆವು. ಗಾಳಿಯ ರಭಸಕ್ಕೆ ದೋಣಿ ಮಲ್ಪೆ ಭಾಗದ ತೀರಕ್ಕೆ ಬಂದಾಗ ಮೊಬೈಲ್‌ ಸಂಪರ್ಕ ಸಾಧ್ಯವಾಗಿ ಕುಟುಂಬದವರಿಗೆ ಕರೆ ಮಾಡಿ ರಕ್ಷಿಸುವಂತೆ ಕೇಳಿಕೊಂಡೆವು.
– ಸ್ಟಾಲಿನ್‌, ಮೀನುಗಾರ

Advertisement

Udayavani is now on Telegram. Click here to join our channel and stay updated with the latest news.

Next