Advertisement

Protect Environment: ಪ್ರಕೃತಿ ರಕ್ಷತಿ ರಕ್ಷಿತಃ

03:23 PM Sep 08, 2024 | Team Udayavani |

ಈ ಗ್ರಹದಲ್ಲಿ ದೇವರ ಅತ್ಯುತ್ತಮ, ಅಮೂಲ್ಯ ಮತ್ತು ಉದಾತ್ತ ಕೊಡುಗೆಯೆಂದರೆ ಪ್ರಕೃತಿ. ನೆಲ, ಜಲ, ವಾಯು, ಅಗ್ನಿ, ಆಕಾಶ ಈ ಪಂಚಭೂತಗಳನ್ನು ಒಳಗೊಂಡ ಈ ವ್ಯವಸ್ಥೆಯೇ ಪ್ರಕೃತಿ. ಇದು ಮಾನವಕುಲಕ್ಕೆ ಆಸರೆ, ಆಶೀರ್ವಾದ ಎರಡೂ ಆಗಿದೆ.

Advertisement

ಪ್ರಕೃತಿ ಮಡಿಲಲ್ಲಿ ಜೀವ ಮತ್ತು ನಿರ್ಜೀವ ವಸ್ತುಗಳೆರಡೂ ಇದ್ದು, ಮನೆಯಿಂದ ಹೊರಗೆ ಕಾಲಿಟ್ಟ ಕ್ಷಣದಿಂದ ನಮ್ಮ ಸುತ್ತಮುತ್ತ ಕಾಣುವ ಭೂದೃಶ್ಯಗಳು ಅದು ಪ್ರಕೃತಿಯ ಭಾಗ. ಇಂತಹ ಅದ್ಭುತ ಶಕ್ತಿಯಿಂದ ಸ್ಫೂರ್ತಿಗೊಂಡವರು ಕವಿಗಳು, ಬರಹಗಾರರು, ಕಲಾವಿದರು, ವಿಜ್ಞಾನಿಗಳಾದರು. ಹಾಗಾಗಿಯೇ ಈ ಪ್ರಕೃತಿಯನ್ನು ನಮ್ಮ ಪೂರ್ವಜರು ತಾಯಿ ಎಂದೂ ಪೂಜಿಸಿ, ಆರಾಧಿಸಿ ಮತ್ತು ಸಂರಕ್ಷಿಸಿಕೊಂಡು ಬಂದಿರುವುದು. ಇದಕ್ಕೆ ತಾನೆ ಹೇಳಿರುವುದು ಪ್ರಕೃತಿಯು ಮಾನವನ ಅತ್ಯುತ್ತಮ ಗೆಳೆಯ/ತಿ ಮತ್ತು ಔಷಧಿ ಎಂದು.

ಸಾಟಿಯಿಲ್ಲದ ಮೌಲ್ಯವನ್ನು ಹೊಂದಿರುವ ಪ್ರಕೃತಿಯು ಇಡೀ ಮನುಕುಲವನ್ನು ರಕ್ಷಿಸುವ ಜೊತೆಗೆ ನಾಶಮಾಡುವಷ್ಟು ಶಕ್ತಿಯುತವಾಗಿದೆ. ಕಳೆದ ನೂರು ವರ್ಷಗಳಿಂದ ಅಥವಾ ಅದಕ್ಕಿಂತ ಹೆಚ್ಚಿನ ಕಾಲದಿಂದ ಪ್ರಕೃತಿ ಮೌಲ್ಯವನ್ನು ಶಿಕ್ಷಣ ಪಡೆದ ನಾವು ಅಭಿವೃದ್ಧಿ ಅನ್ನುವ ಅವೈಜ್ಞಾನಿಕ ಬೆಳವಣಿಗೆಗೆ ಪ್ರಕೃತಿಯನ್ನು ವಿವಿಧ ರೀತಿಯಲ್ಲಿ ದುರುಪಯೋಗ ಹಾಗೂ ಬೆದರಿಕೆ ಹೆಸರಿನಲ್ಲಿ ಎಷ್ಟು ನಾಶಮಾಡಬೇಕೋ ಅಷ್ಟು ಹಾಳು ಮಾಡುತ್ತಾ ಬಂದಿದ್ದರೂ ಸಹ ನಾವು ನಮ್ಮ ಅಸ್ತಿತ್ವವನ್ನು ಇಂದಿಗೂ ಉಳಿಸಿಕೊಳ್ಳಲು ಮುಖ್ಯ ಕಾರಣ ನಮ್ಮ ಅಪಾರ ಜ್ಞಾನವುಳ್ಳ ಪೂರ್ವಜರ ನಂಬಿಕೆ. ಇವರು ಪರಿಸರಕ್ಕೆ ಹೊಂದಿಕೊಂಡು ಆಚರಿಸುತ್ತಿದ್ದ ಆಚರಣೆಗಳು ಇಂದಿನ ವೈಜ್ಞಾನಿಕ ಯುಗದಲ್ಲಿ ನಮಗೆ ಮೂಢನಂಬಿಕೆಯಾಗಿ ಕಂಡರೂ ಅದು ಪ್ರಕೃತಿಯೊಂದಿಗಿನ ಅವರ ಹೊಂದಾಣಿಕೆ.

ಆದರೆ ಇಂದು ಅತಿಯಾದ ನಗರೀಕರಣದಿಂದ ಹಳ್ಳಿಗಳು ನಾಶವಾಗಿ ನಗರಗಳು ನಿವೇಶನಗಳ ಗೂಡಾಗಿ ಕಸದ ರಾಶಿಯಿಂದಾಗಿ ಗಬ್ಬು ನಾರುತ್ತಿದೆ. ಫಲವತ್ತಾದ ಕೃಷಿ ಭೂಮಿ ಕೈಗಾರಿಕ ನೆಲೆಯಾಗಿ ಅವುಗಳ ವಿಷಪೂರಿತ ತ್ಯಾಜ್ಯಗಳು ನಿಶ್ಕಲ್ಮಶ ಜಲಮೂಲಗಳಿಗೆ ಸೇರಿ ಜಲಚರಗಳು ಸಾವನ್ನಪ್ಪುತ್ತಿವೆ. ಅರಣ್ಯ ನಾಶದಿಂದ ಅನಾವೃಷ್ಠಿ-ಅತಿವೃಷ್ಠಿಯಿಂದಾಗಿ ಗುಡ್ಡಗಳು ನೆಲಸಮವಾಗಿ ಜೀವ-ಜಂತುಗಳು ಸ್ವತ್ಛ ಗಾಳಿಯಿಲ್ಲದೆ ಉಸಿರಾಡಲು ಪರದಾಡುವ ಸ್ಥಿತಿ ಬಂದಿದೆ. ವಾಹನಗಳ, ಕೈಗಾರಿಕೆಗಳ ದಟ್ಟವಾದ ಹೊಗೆಯಿಂದ ಓಝೋನ್‌ ಪದರ ಹಾನಿಯಾಗಿ ಉರಿಬಿಸಿಲು ಮನುಷ್ಯನ ನೆತ್ತಿ ಸುಡುತ್ತಿದ್ದು, ಅನೇಕ ಹೊಸ ರೋಗಗಳ ಹುಟ್ಟಿಗೆ ಕಾರಣೀಭೂತವಾಗಿದೆ.

ಭೂಗರ್ಭ ಬಿಸಿಯಾಗಿ ಹಿಮಪರ್ವತಗಳು ಕರಗಿ ಸಮುದ್ರದಲ್ಲಿ ನೀರಿನ ಮಟ್ಟ ಹೆಚ್ಚಾಗಿ ಪ್ರಕೃತಿ ವಿಕೋಪಗಳಿಗೆ ಎಡೆಮಾಡಿಕೊಡುತ್ತಿದೆ. ಕೃಷಿಗೆ ಅತಿಯಾದ ರಾಸಾಯನಿಕಗಳ ಬಳಕೆಯಿಂದ ಆಹಾರ ಪದಾರ್ಥಗಳು ವಿಷಕಾರಿಯಾಗಿ ಮಾರ್ಪಡುತ್ತಿವೆ. ಇದಕ್ಕಾಗಿಯೇ ಇಂದು ನಾವು “ವಿಶ್ವ ಪರಿಸರ ದಿನ”, ‘ವನಮಹೋತ್ಸವ’ವನ್ನು ಆಚರಿಸುವ ಮೂಲಕ “ಈ ಒಂದು ದಿನವಾದರೂ ಪ್ರಕೃತಿಯನ್ನು ಸಂರಕ್ಷಿಸುವ” ಎಂದು ಶಿಕ್ಷಣದ ಅರಿವು ಇರುವವರಿಗೆ ಪರಿಸರದ ಪಾಠ ಹೇಳಿಕೊಡುವ ದುರ್ದೈವದ ಸ್ಥಿತಿಯಲ್ಲಿರುವುದು.

Advertisement

ಮಾನವ ಹೀಗೆಯೇ ಜೀವಿಸಿದರೆ ಭವಿಷ್ಯದಲ್ಲಿ ಇನ್ನಷ್ಟು ಕರಾಳ ದಿನ ಎದುರಿಸುವುದು ಖಂಡಿತ. ಸುಂದರವಾದ ಪ್ರಕೃತಿಯ ಸೌಂದರ್ಯವನ್ನು ಕಾಪಾಡಿಕೊಳ್ಳಲು ಇಂದು ನಮಗೆ ಬೇಕಾಗಿರುವುದು “ಪ್ರಕೃತಿಯಿಂದಾಗಿ ನಾವೇ ಹೊರತು, ನಮ್ಮಿಂದ ಪ್ರಕೃತಿಯಲ್ಲ” ಎಂಬ ಜ್ಞಾನ ಮತ್ತು ಜಾಗೃತಿಯ ಅರಿವು.

ಶ್ರುತೇಶ್‌ ಆಚಾರ್ಯ

ಮೂಡುಬೆಳ್ಳೆ

Advertisement

Udayavani is now on Telegram. Click here to join our channel and stay updated with the latest news.