ಬೆಂಗಳೂರು: ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಅಡ್ಡೆ ಮೇಲೆ ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರು ದಾಳಿ ನಡೆಸಿದ್ದು, ಸ್ಪಾ ಮಾಲೀಕ ಅನಿಲ್ ಸೇರಿ 34 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಹಾಗೆಯೇ 44 ಮಂದಿ ಮಹಿಳೆಯರು ಹಾಗೂ ಯುವತಿಯರನ್ನು ರಕ್ಷಿಸಿದ್ದಾರೆ. ಮತ್ತೂಂದೆಡೆ ಈ ದಂಧೆಗೆ ಮಹಿಳಾ ಎಸಿಪಿಯೊಬ್ಬರ ಕುಮ್ಮಕ್ಕು ಇದೆ ಎಂದು ಹೇಳಲಾಗಿದೆ.
ಹೀಗಾಗಿ ಇದೇ ಮೊದಲ ಬಾರಿಗೆ ಪ್ರಕರಣದ ಹೆಚ್ಚಿನ ತನಿಖೆಗಾಗಿ ಸಿಎಆರ್ ಡಿಸಿಪಿ ಅವರಿಗೆ ನೀಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪ್ರಕರಣ ಸಂಬಂಧ ಮಹದೇವಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕೆ.ಆರ್.ಪುರದ ಟಿನ್ ಫ್ಯಾಕ್ಟರಿ ಬಳಿಯ ಹಳೇ ಮದ್ರಾಸ್ ರಸ್ತೆಯಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ನಿರ್ವಾನ ಇಂಟರ್ ನ್ಯಾಷನಲ್ ಸ್ಪಾ ಪ್ರೈವೇಟ್ ಲಿಮಿಟೆಡ್‌ನಲ್ಲಿ ಕಳೆದ ಐದು ವರ್ಷಗಳಿಂದ ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಸಿಸಿಬಿ ಎಸಿಪಿ ಧರ್ಮೇಂದ್ರ ನೇತೃತ್ವದಲ್ಲಿ ಶನಿವಾರ ದಾಳಿ ನಡೆಸಲಾಗಿದೆ. ದೆಹಲಿ, ಕೊಲ್ಕೋತ್ತಾ, ಮುಂಬೈ ಹಾಗೂ ಥೈಲ್ಯಾಂಡ್‌ನ 40 ಮಹಿಳೆಯರನ್ನು ರಕ್ಷಿಸಲಾಗಿದೆ. ಸ್ಪಾ ಮಾಲೀಕ ಅನಿಲ್, ವಿದೇಶದಿಂದ ಹಾಗೂ ಹೊರ ರಾಜ್ಯಗಳಿಂದ ಯುವತಿಯರನ್ನು ಕರೆತಂದು ವೇಶ್ಯಾವಾಟಿಕೆ ನಡೆಸುತ್ತಿರುವುದು ಪತ್ತೆಯಾಗಿದ್ದು, ಈ ಹಿನ್ನೆಲೆಯಲ್ಲಿ ದಾಳಿ ನಡೆಸಿ ನಾಲ್ಕು ಗಂಟೆಗೂ ಹೆಚ್ಚಿನ ಸಮಯ ಪರಿಶೀಲನೆ ಮಾಡಲಾಯಿತು ಎಂದು ಸಿಸಿಬಿ ಪೊಲೀಸರು ಮಾಹಿತಿ ನೀಡಿದರು.
ಆರೋಪಿ ಅನಿಲ್ ಹೊರ ರಾಜ್ಯದಿಂದ ನಗರಕ್ಕೆ ಬಂದು, ಹಳೇ ಮದ್ರಾಸ್ ರಸ್ತೆಯ ಬಹುಮಹಡಿ ಕಟ್ಟಡದ 1 ಮತ್ತು 6ನೇ ಮಹಡಿಯಲ್ಲಿ ಸ್ಪಾ ನಡೆಸುತ್ತಿದ್ದ. ಕಟ್ಟಡದ ಹೊರಗೆ ಸ್ಪಾ ಎಂದು ಬೋರ್ಡ್ ಹಾಕಿ, ಒಳಗೆ ಅನೈತಿಕ ಚಟುವಟಿಕೆಗಳನ್ನು ನಡೆಸುತ್ತಿದ್ದ. ಒಟ್ಟು 34 ಕೊಠಡಿಗಳನ್ನು ಒಳಗೊಂಡ ಬಹುಮಹಡಿ ಕಟ್ಟಡದಲ್ಲಿ ಹಲವು ವರ್ಷಗಳಿಂದ ವೇಶ್ಯಾವಾಟಿಕೆ ದಂಧೆ ನಡೆಯುತ್ತಿತ್ತು.
ವಿದೇಶಿ ಮಾದರಿಯಲ್ಲಿ ಕೋಣೆಗಳನ್ನು ವಿನ್ಯಾಸಗೊಳಿಸಿ ಮಸಾಜ್ ಹೆಸರಿನಲ್ಲಿ ಅನಿಲ್ ದಂಧೆ ನಡೆಸುತ್ತಿದ್ದ ಎಂಬುದು ಗೊತ್ತಾಗಿದೆ. ಆರೋಪಿ ಅನಿಲ್‌ನಿಂದ ಐಷಾರಾಮಿ ಕಾರು ಜಪ್ತಿ ಮಾಡಲಾಗಿದೆ ಎಂದು ಸಿಸಿಬಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಸಿಎಆರ್ ಡಿಸಿಪಿ ಹೆಗಲಿಗೆ ತನಿಖೆ?: ಸ್ಪಾ ಮೇಲೆ ದಾಳಿ ನಡೆಸಿದಾಗ, ಅದರ ಮಾಲೀಕನಿಗೆ ಮಹಿಳಾ ಎಸಿಪಿಯೊಬ್ಬರ ಪತಿಯ ಕುಮ್ಮಕ್ಕು ಇರುವುದು ಗೊತ್ತಾಗಿತ್ತು. ಜತೆಗೆ ಕೆಲ ಪೊಲೀಸರು ಸಹಕಾರ ನೀಡುತ್ತಿದ್ದಾರೆ ಎಂಬ ಬಗ್ಗೆ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್‌ಗೆ ದೂರು ಬಂದಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಗೆ ಕೇಂದ್ರ ವಿಭಾಗದ ಸಿಎಆರ್ ಡಿಸಿಪಿ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತದೆ. ಸದ್ಯ ಮಾರತ್ತಹಳ್ಳಿ ಎಸಿಪಿ ನೇತೃತ್ವದಲ್ಲಿ ತನಿಖೆ ಮುಂದುವರಿದೆ ಎಂದು ಮೂಲಗಳು ತಿಳಿಸಿವೆ.
ದಂಧೆಗೆ ಎಸಿಪಿ ಪತಿಯ ಕುಮ್ಮಕ್ಕು? : ನಿರ್ವಾನ ಇಂಟರ್ ನ್ಯಾಷನಲ್ ಸ್ಪಾ ವಹಿವಾಟಿಗೆ ಮಹಿಳಾ ಎಸಿಪಿಯೊಬ್ಬರ ಪತಿಯ ಕುಮ್ಮಕ್ಕು ಇದೆ ಎಂದು ಹೇಳಲಾಗಿದೆ. ಎಸಿಪಿ ಪತಿ ಸ್ಪಾ ಅವರಿಂದ ಮಾಮೂಲಿ ವಸೂಲಿ ಮಾಡುತ್ತಿದ್ದರು. ಅವರ ಕುಮ್ಮಕ್ಕಿನಿಂದಲೇ ಅನಿಲ್ ಅಕ್ರಮ ದಂಧೆ ನಡೆಸುತ್ತಿದ್ದ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಕರಣ ಗಂಭೀರವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.