ಕಲಬುರಗಿ: ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ ದೊರಕಲು ಹಾಗೂ ಹೈದ್ರಾಬಾದ ಕರ್ನಾಟಕ ಭಾಗದಲ್ಲಿ ವಿಶೇಷ ಆದ್ಯತೆ ನೀಡಲು ಜತೆಗೆ ಅಗತ್ಯ ತಿದ್ದುಪಡಿ ತರುವಂತೆ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಿ ಗಮನಕ್ಕೆ ತರಲಾಗಿದೆ ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಅಸೋಸಿಯೇಷನ್ (ಕಾಸಿಯಾ)ಅಧ್ಯಕ್ಷ ಎ. ಪದ್ಮನಾಭ ತಿಳಿಸಿದರು.
ಹೈದ್ರಾಬಾದ ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆ, ಸಣ್ಣ ಕೈಗಾರಿಕೆಗಳ ಅಸೋಸಿಯೇಷನ್ ಆಶ್ರಯದಲ್ಲಿ ನಗರದ ಯಲ್ಲಮ್ಮ ದೇವಾಲಯದ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಸಣ್ಣ ಕೈಗಾರಿಕೆಗಳ ನೀತಿಗಳ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ ದೊರಕಲು ಸಹಾಯ ಕಲ್ಪಿಸುವಂತೆ ಮನವಿ ಸಲ್ಲಿಸಲಾಗಿದೆ. ಅಲ್ಲದೆ ಈಗ ತಿದ್ದುಪಡಿ ತರುವ ಅಂಶಗಳಿದ್ದರೆ ಸಣ್ಣ ಉದ್ಯಮಿಗಳು ಕಾಸಿಯಾ ಗಮನಕ್ಕೆ ತರಬಹುದಾಗಿದೆ ಎಂದು ಹೇಳಿದರು. ಹೈದ್ರಾಬಾದ ಕರ್ನಾಟಕ ಭಾಗದಲ್ಲಿ ಉದ್ಯಮ ಕ್ಷೇತ್ರ ಬೆಳವಣಿಗೆಗೆ ಪ್ರತ್ಯೇಕ ಕೈಗಾರಿಕಾ ನೀತಿ ಅಗತ್ಯವಾಗಿದೆ.
371ನೇ (ಜೆ) ವಿಧಿ ನೀತಿ ರೂಪಿಸಬಹುದಾಗಿದೆ. ಇದಕ್ಕಾಗಿ ವಿಶೇಷ ಪ್ಯಾಕೇಜ್ ಘೋಷಣೆಯಾದರೆ ಹೆಚ್ಚಿನ ಸಹಾಯವಾಗುತ್ತದೆ ಎಂದರು. ಕಾಸಿಯಾ ಉಪಾಧ್ಯಕ್ಷ ಎ.ಆರ್. ಹನುಂತಗೌಡ, ಜಿಲ್ಲಾಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ದೊಡ್ಡ ಬಸವರಾಜ ಮಾತನಾಡಿದರು.
ಸಣ್ಣ ಕೈಗಾರಿಕಾ ಅಸೋಸಿಯೆಷನ್ ಅಧ್ಯಕ್ಷ ಭೀಮಾಶಂಕರ ಪಾಟೀಲ ಅವರನ್ನು ಸನ್ಮಾನಿಸಲಾಯಿತು. ಎಚ್‌ಕೆಸಿಸಿಐ ಗೌರವ ಕಾರ್ಯದರ್ಶಿ ಪ್ರಶಾಂತ ಮಾನಕರ, ಪದಾಧಿಕಾರಿಗಳಾದ ರಮೇಶ ಮಂದಕನಹಳ್ಳಿ, ಶಿವಾನಂದ ಹುಲಿ, ಸಂತೋಷ ಲಂಗರ, ಸಚಿನನಿಗ್ಗುಡಗಿ, ಚನ್ನಬಸಯ್ಯ ನಂದಿಕೋಲ ಇದ್ದರು. ಉತ್ತಮ ಬಜಾಜ ನಿರೂಪಿಸಿದರು. ಪ್ರವೀಣ ವಂದಿಸಿದರು.