Advertisement

ಹೊಸ ತಾಲೂಕುಗಳಲ್ಲಿ ಡಯಾಲಿಸಿಸ್‌ ಕೇಂದ್ರ ತೆರೆಯಲು ಪ್ರಸ್ತಾವ

08:46 PM Jul 29, 2021 | Team Udayavani |

ಉಡುಪಿ:  ಮೂತ್ರ ಪಿಂಡದ ಸಮಸ್ಯೆಯಿಂದ ಬಳಲುತ್ತಿರುವ ಬಡ ರೋಗಿಗಳಿಗೆ ಸರಕಾರಿ ಆಸ್ಪತ್ರೆಯ ಡಯಾಲಿಸಿಸ್‌ ಕೇಂದ್ರ ಸಂಜೀವಿನಿಯಾಗಿ ಪರಿಣಮಿಸಿದೆ. ಇದೀಗ ಬೇಡಿಕೆ ಹೆಚ್ಚಿದ ಹಿನ್ನೆಲೆಯಲ್ಲಿ ಹೊಸ ತಾಲೂಕಿನ ಆಸ್ಪತ್ರೆಗಳಲ್ಲಿ ತಲಾ 3ರಿಂದ 5 ಬೆಡ್‌ಗಳ ಡಯಾಲಿಸ್‌ ಕೇಂದ್ರ ಪ್ರಾರಂಭಿಸುವಂತೆ ಜಿಲ್ಲಾ ಆರೋಗ್ಯ ಇಲಾಖೆಯಿಂದ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

Advertisement

ಉಡುಪಿ ಜಿಲ್ಲಾಸ್ಪತ್ರೆ ಡಯಾಲಿಸಿಸ್‌ ಕೇಂದ್ರದಲ್ಲಿ 10 ಬೆಡ್‌, ಕುಂದಾಪುರ ತಾಲೂಕು ಆಸ್ಪತ್ರೆಯಲ್ಲಿ 3 ಬೆಡ್‌, ಕಾರ್ಕಳ ತಾಲೂಕು ಆಸ್ಪತ್ರೆಯಲ್ಲಿ 2 ಬೆಡ್‌ಗಳಿವೆ. ಹೆಚ್ಚುವರಿಯಾಗಿ 5 ಬೆಡ್‌ಗಳನ್ನು ಜಿಲ್ಲೆಗೆ ನೀಡಲು ಆರೋಗ್ಯ ಇಲಾಖೆ ಒಪ್ಪಿಗೆ ಸೂಚಿಸಿದೆ. ಆದರೆ ಜಿಲ್ಲಾಸ್ಪತ್ರೆ ಆವರಣದಲ್ಲಿ ಜಾಗದ ಕೊರತೆಯಿಂದ ಸದ್ಯ ಇರುವ ಡಯಾಲಿಸಿಸ್‌ ಕೇಂದ್ರವನ್ನು ವಿಸ್ತರಿಸುವುದು ಅಸಾಧ್ಯವಾಗಿದೆ.

ಬೆಡ್‌ ಕೊರತೆ:

ಜಿಲ್ಲೆಯಲ್ಲಿ ಡಯಾಲಿಸಿಸ್‌ ಬೆಡ್‌ಗಳ ಕೊರತೆ ಹಾಗೂ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಅನೇಕ ಮಂದಿ ಈ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿರುವ 10 ಬೆಡ್‌ಗಳಲ್ಲಿ 90 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಇನ್ನೂ 40 ಮಂದಿ ವೇಟಿಂಗ್‌ ಲಿಸ್ಟ್‌ನಲ್ಲಿದ್ದಾರೆ. ಹೀಗಾಗಿ ಜನರಿಂದ ಹೆಚ್ಚುವರಿ ಬೆಡ್‌ಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ.

ಅವಧಿಗೂ ಮುನ್ನವೇ ಗುತ್ತಿಗೆ ಕೈಬಿಟ್ಟ ಸಂಸ್ಥೆ :

Advertisement

ರಾಜ್ಯ ಸರಕಾರದ ಪಿಪಿಪಿ ಮಾದರಿಯಲ್ಲಿ ರಾಜ್ಯದ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಡಯಾ ಲಿಸಿಸ್‌ ಕೇಂದ್ರವನ್ನು ಸ್ಥಾಪಿಸಿ, ಘಟಕದ ನಿರ್ವಹಣೆ ಹೊಣೆಯನ್ನು ಬಿಆರ್‌ಎಸ್‌ ಆರೋಗ್ಯ ಮತ್ತು ಸಂಶೋಧನ ಸಂಸ್ಥೆಗೆ ಗುತ್ತಿಗೆ ನೀಡಲಾಗಿತ್ತು. ಇದೀಗ ಸಂಸ್ಥೆ ಅವಧಿಗೂ ಮುನ್ನವೇ ಡಯಾಲಿಸಿಸ್‌ ಕೈಬಿಟ್ಟಿದೆ. ಇದರಿಂದಾಗಿ ಪ್ರಸ್ತುತ ರಾಜ್ಯಾದ್ಯಂತ ಸರಕಾರವೇ ಡಯಾಲಿಸಿಸ್‌ ಕೇಂದ್ರ ಮುನ್ನಡೆಸುತ್ತಿದೆ. 2022ರ ಮಾರ್ಚ್‌ ಅಂತ್ಯಕ್ಕೆ ಬಿಆರ್‌ಎಸ್‌ ಗುತ್ತಿಗೆ ಅವಧಿ ಪೂರ್ಣಗೊಂಡ ಬಳಿಕವಷ್ಟೇ ಹೊಸ ತಾಲೂಕು ಆಸ್ಪತ್ರೆಗಳಲ್ಲಿ ಡಯಾ ಲಿಸಿಸ್‌ ಕೇಂದ್ರವಾಗುವ ಸಾಧ್ಯಗಳಿವೆ.

2,000 ರೂ. ವೆಚ್ಚ  :

ಮೂತ್ರಪಿಂಡ ಸಮಸ್ಯೆ ಬಾಧಿತರು ವಾರಕ್ಕೆ ಎರಡರಿಂದ ಮೂರು ಬಾರಿ ಡಯಾಲಿಸಿಸ್‌ ಮಾಡಿಸಿಕೊಳ್ಳಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ಪ್ರತೀ ಡಯಾಲಿಸಿಸ್‌ಗೆ ಸುಮಾರು 1,500ರಿಂದ 2,000 ರೂ. ವೆಚ್ಚವಾಗುತ್ತದೆ. ಬಡಕುಟುಂಬಗಳಿಗೆ ಇದು ದೊಡ್ಡ ಹೊರೆಯಾಗಿದ್ದು, ಸರಕಾರಿ ಆಸ್ಪತ್ರೆಯಲ್ಲಿ ಕ್ಲಪ್ತ ಸಮಯದಲ್ಲಿ ಸೌಲಭ್ಯ ದೊರೆಯದಿದ್ದರೆ ಆರೋಗ್ಯ ಇನ್ನಷ್ಟು ಹದಗೆಡುವ ಸಾಧ್ಯತೆ ಹೆಚ್ಚಿರುತ್ತದೆ.

04 ವರ್ಷಗಳಿಂದ ಸೇವೆ :

ಜಿಲ್ಲೆಯಲ್ಲಿ ಸುಮಾರು 4 ವರ್ಷಗಳಿಂದ ಡಯಾಲಿಸಿಸ್‌ ಕೇಂದ್ರ ಕಾರ್ಯಾಚರಿಸುತ್ತಿದ್ದು, 12 ಮಂದಿ ಹೊರಗುತ್ತಿಗೆ ನೌಕರರು ಸೇವೆ ಸಲ್ಲಿಸುತ್ತಿದ್ದಾರೆ. ಒಬ್ಬ ವ್ಯಕ್ತಿಗೆ ಡಯಾಲಿಸಿಸ್‌ ಮಾಡಲು 4 ಗಂಟೆ ಬೇಕಾಗುತ್ತದೆ. ಬೆಳಗ್ಗೆ 7ರಿಂದ ರಾತ್ರಿ 9ರ ವರೆಗೆ ಘಟಕ ಕಾರ್ಯನಿರ್ವಹಿಸುತ್ತಿದೆ.

ಜಿಲ್ಲಾಸ್ಪತ್ರೆಯಲ್ಲಿ ಹೊಸ ಡಯಾಲಿಸಿಸ್‌ ಕೇಂದ್ರಕ್ಕೆ ಜಾಗದ ಕೊರತೆ ಉಂಟಾಗಿದೆ. ಹೊಸದಾಗಿ ನಿರ್ಮಿಸಿದ ಬ್ರಹ್ಮಾವರ ಸೇರಿದಂತೆ ಇತರ ತಾಲೂಕಿನ ಆಸ್ಪತ್ರೆಯಲ್ಲಿ ಡಯಾಲಿಸಿಸ್‌ ಕೇಂದ್ರ ಪ್ರಾರಂಭಿಸುವಂತೆ ಜಿಲ್ಲಾ ಆರೋಗ್ಯ ಇಲಾಖೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.-ಡಾ| ಮಧುಸೂದನ ನಾಯಕ್‌ ಜಿಲ್ಲಾ ಸರ್ಜನ್‌, ಜಿಲ್ಲಾಸ್ಪತ್ರೆ ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next