ಕಾಪು: ಇನ್ನು ಮುಂದೆ ಎಲ್ಲರಿಗೂ ಜಾತಿ ಪ್ರಮಾಣಪತ್ರ ನೀಡುವ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದರು.
ರಾಜ್ಯದಲ್ಲಿ ಪ್ರಸ್ತುತ ಮೀಸಲಾತಿ ಇರುವವರಿಗೆ ಮಾತ್ರ ಜಾತಿ ಪ್ರಮಾಣಪತ್ರ ನೀಡುವ ವ್ಯವಸ್ಥೆ ಇದೆ. ಇದರಿಂದ ಸಾಮಾನ್ಯ ವರ್ಗ ಮತ್ತು ಸಮು ದಾಯದವರಿಗೆ ವಿವಿಧ ಸವಲತ್ತು ಪಡೆ ಯಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಹಿತ ಸಂಬಂಧಪಟ್ಟವರ ಜತೆಗೆ ವಿಶೇಷ ಸಭೆ ನಡೆಸಲಾಗಿದೆ. ಈ ಕುರಿತು ಸರಕಾರ ಚಿಂತನೆ ನಡೆಸಲಿದೆ ಎಂದು ಕಾಪುವಿನಲ್ಲಿ ನೂತನ ಮಿನಿ ವಿಧಾನಸೌಧ ಉದ್ಘಾಟಿಸಿದ ಸಂದರ್ಭದಲ್ಲಿ ಅವರು ಹೇಳಿದರು.
ಶಾಲೆಗೆ ಮಕ್ಕಳನ್ನು ದಾಖಲಾತಿ ಮಾಡು ವಾಗಲೇ ಅರ್ಜಿಯಲ್ಲಿ ಜಾತಿ ಉಲ್ಲೇಖೀಸಲು ಅವಕಾಶ ಮಾಡಿಕೊಡುವ ಬಗ್ಗೆಯೂ ಚಿಂತನೆ ನಡೆದಿದೆ. ಇದರಿಂದ ಮುಂದೆ ಅದೇ ಸರ್ಟಿಫಿಕೆಟ್ ವಿದ್ಯಾರ್ಥಿಗಳ ಎಲ್ಲ ದಾಖಲೆಗಳಿಗೂ ಪೂರಕವಾಗಲಿದೆ ಎಂದರು.
ಶಿಕ್ಷಕರ ನೇಮಕಾತಿಯ ವೇಳೆ ವಿವಾಹಿತ ಮಹಿಳಾ ಅಭ್ಯರ್ಥಿಗಳು ಪತಿಯ ಆದಾಯ ಪ್ರಮಾಣಪತ್ರ ಸಲ್ಲಿಸಬೇಕಾದ ನಿಯಮಾ ವಳಿ ಜಾರಿಯಲ್ಲಿದ್ದು, ಇದರಿಂದಾಗಿ ವಿವಾಹಿತ ಮಹಿಳೆಯರು ತೊಂದರೆ ಎದುರಿಸುವಂತಾಗಿದೆ. ಪತಿಯ ಆದಾಯ ಪ್ರಮಾಣಪತ್ರದ ಬದಲಾಗಿ ತಂದೆ – ತಾಯಿಯ ಆದಾಯ ಪ್ರಮಾಣ ಪತ್ರವನ್ನೇ ಪರಿಗಣಿಸುವ ನಿಟ್ಟಿನಲ್ಲಿಯೂ ಚಿಂತನೆ ನಡೆಸಲಾಗಿದೆ. ಈ ವಿಚಾರದಲ್ಲಿ ದೇಶದಲ್ಲಿ ಇರುವ ಕಾನೂನನ್ನೇ ರಾಜ್ಯದಲ್ಲೂ ಜಾರಿಗೆ ತರುವಂತೆ ಸರಕಾರಕ್ಕೆ ಶಿಫಾರಸು ಮಾಡಲಾಗಿದೆ ಎಂದರು. ಕಾಪು ಶಾಸಕ ಲಾಲಾಜಿ ಮೆಂಡನ್ ಉಪಸ್ಥಿತರಿದ್ದರು.