Advertisement

ವಿಐಎಸ್‌ಎಲ್‌ ಉಳಿವಿಗೆ ಕೇಂದ್ರಕ್ಕೆ ಪ್ರಸ್ತಾವನೆ: ಸಿಎಂ ಬೊಮ್ಮಾಯಿ

01:27 AM Feb 09, 2023 | Shreeram Nayak |

ಶಿವಮೊಗ್ಗ: “ವಿಐಎಸ್‌ಎಲ್‌ ಕಾರ್ಖಾನೆ ಉಳಿಸಿ’ ಹೋರಾಟ ತೀವ್ರಗೊಂಡ ಬೆನ್ನಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾರ್ಖಾನೆ ಪುನಃಶ್ಚೇತನ ಕುರಿತಂತೆ ಸಭೆ ನಡೆಸಿ ಕೇಂದ್ರ ಸರಕಾರಕ್ಕೆ ಪ್ರಸ್ತಾವ ಸಲ್ಲಿಸುವುದಾಗಿ ಭರವಸೆ ನೀಡಿದ್ದಾರೆ.

Advertisement

ಬುಧವಾರ ಜಿಲ್ಲೆಯಲ್ಲಿ ಪ್ರವಾಸದಲ್ಲಿದ್ದ ಸಂದರ್ಭದಲ್ಲಿ ಅವರು, ವಿಐಎಸ್‌ಎಲ್‌ ಉಳಿಸುವುದಾಗಿ ಕಾರ್ಮಿಕರ ನಿಯೋಗ, ವಿವಿಧ ಸಂಘಟನೆಗಳ ಪ್ರಮುಖರಿಗೆ ವಾಗ್ಧಾನ ನೀಡಿದರು. ಕಾರ್ಖಾನೆಯನ್ನು ಉಳಿಸಿ ಅಭಿವೃದ್ಧಿ ಪಡಿಸಲು ಕೇಂದ್ರ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುತ್ತದೆ.

ಜತೆಗೆ ಕೇಂದ್ರ ಸರಕಾರವೂ ಒಪ್ಪಿಕೊಳ್ಳುವ ವಿಶ್ವಾಸವಿದೆ. ವಿಐಎಸ್‌ಎಲ್‌ ಅತ್ಯಂತ ಮಹತ್ವದ ಕಾರ್ಖಾನೆ. ಜಾಗತೀ ಕರಣದ ಪರಿಣಾಮ ಅನೇಕ ಸಾರ್ವಜನಿಕ ಸಂಸ್ಥೆಗಳು ಮುಚ್ಚಿವೆ. ವಿಐಎಸ್‌ಎಲ್‌ ಕಾರ್ಖಾನೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಪ್ರಯತ್ನದಿಂದ ಉಳಿದಿದೆ ಎಂದರು.

ಕಂಪೆನಿಗಳ ಜತೆಯೂ ಮಾತುಕತೆ
ಕೇಂದ್ರ ಸರಕಾರ ತನ್ನ ಬಂಡವಾಳ ಹಿಂದೆಗೆತ ಯೋಜನೆ ಯಡಿ ಈ ಕಾರ್ಖಾನೆ ಮುಚ್ಚಲು ಮುಂದಾಗಿದೆ. ನಮ್ಮ ರಾಜ್ಯದ ಕಬ್ಬಿಣದ ಅದಿರಿಗೆ ಸಾಕಷ್ಟು ಬೆಲೆ ಇದೆ. ಜಿಂದಾಲ್‌ ಸಂಸ್ಥೆ ಬೃಹತ್‌ ಪ್ರಮಾಣದಲ್ಲಿ ಬೆಳೆದಿರುವಾಗ ವಿಐಎಸ್‌ಎಲ್‌ ಅನ್ನು ಉಳಿಸಲು ನಾವು ಪ್ರಯತ್ನ ಮಾಡುತ್ತೇವೆ. ಮೊದಲು ಮುಚ್ಚುವ ಪ್ರಕ್ರಿಯೆ ತಡೆಯಲು ಪ್ರಯತ್ನಿಸಲಾಗುವುದು. ಬಳಿಕ ಬೇರೆ ಕಂಪೆನಿಗಳೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಹೇಳಿದರು.

ವಿಐಎಸ್‌ಎಲ್‌ ಕಾರ್ಮಿಕರ ಮುಷ್ಕರ ಗಮನದಲ್ಲಿದೆ. ಕಾರ್ಮಿಕರ ನಿಯೋಗವನ್ನು ಭೇಟಿಯಾಗುವೆ. ಜಿಲ್ಲೆಯ ಜನಪ್ರತಿನಿಧಿ ಗಳು ಹಾಗೂ ಇತರರೊಂದಿಗೆ ಚರ್ಚಿಸಿ ಅಂತಿಮ ನಿರ್ಣಯ ಕೈಗೊಳ್ಳಲಾಗುತ್ತದೆ. ಕಾರ್ಖಾನೆ ಉಳಿಸಿಕೊಳ್ಳುವ ವಿಷಯದಲ್ಲಿ ರಾಜಕಾರಣ ಸರಿಯಲ್ಲ, ಕಾರ್ಖಾನೆ ಮತ್ತೆ ಆರಂಭವಾಗಬೇಕು ಹಾಗೂ ಲಾಭದಲ್ಲಿ ಮುನ್ನಡೆಯಬೇಕು ಎಂಬುದು ತಮ್ಮ ಉದ್ದೇಶ. ಈ ನಿಟ್ಟಿನಲ್ಲಿ ಕೆಲಸ ಮಾಡೋಣ ಎಂದು ಮುಖ್ಯಮಂತ್ರಿಗಳು ಹೇಳಿದರು.

Advertisement

ಸಿಎಂಗೆ ಬಿಜೆಪಿ ಸಂಸದರ
ನಿಯೋಗ ಮನವಿ
ವಿಐಎಸ್‌ಎಲ್‌ ಉಳಿಸುವ ಸಂಬಂಧ ಜಿಲ್ಲೆಯ ಎಲ್ಲ ಬಿಜೆಪಿ ಪ್ರತಿನಿ ಧಿಗಳು ಹಾಗೂ ಕಾರ್ಮಿಕರನ್ನೊಳಗೊಂಡ ನಿಯೋಗ ಸಿಎಂ ಬಸವರಾಜ ಬೊಮ್ಮಾಯಿಗೆ ಮನವಿ ಸಲ್ಲಿಸಿತು. ವಿಐಎಸ್‌ಎಲ್‌ ಕಾರ್ಖಾನೆ ಮುಚ್ಚುವ ಪ್ರಕಿಯೆ ತಡೆಯಬೇಕು. ಕಾರ್ಖಾನೆಯನ್ನು ಕುದುರೆಮುಖ ಕಬ್ಬಿಣ ಅದಿರು ಕಂಪೆನಿ ಜತೆ ವಿಲೀನಗೊಳಿಸಬೇಕು ಅಥವಾ ಖಾಸಗಿ ಉಕ್ಕು ಉದ್ಯಮಗಳ ಜಂಟಿ ಇಲ್ಲವೇ ಖಾಸಗಿ ಸಹಭಾಗಿತ್ವದಲ್ಲಿ ಪ್ರಾರಂಭಿಸಲು ಕೋರಬೇಕು. ಇತ್ತೀಚೆಗಿನ ದಿನಗಳಲ್ಲಿ ಕಾರ್ಖಾನೆ ತೆರೆಯಲು ಪರಿಸರ ಇಲಾಖೆ ಅನುಮತಿ ಪಡೆಯುವುದು ಕಷ್ಟ. ಯಾವುದೇ ಕಾರಣಕ್ಕೂ ಮುಚ್ಚಲು ಅವಕಾಶ ಕೊಡದೆ ಕಾರ್ಖಾನೆ ಆಸ್ತಿಯನ್ನು ವಾಪಸ್‌ ಪಡೆದು ಪುನಃಶ್ಚೇತನಗೊಳಿಸಬೇಕು ಎಂದು ಆಗ್ರಹಿಸಲಾಗಿದೆ.

27ಕ್ಕೆ ಪ್ರಧಾನಿ ಮೋದಿ ಉದ್ಘಾಟನೆ
ಫೆ.27ರಂದು ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ, ಶಿಕಾರಿಪುರ-ರಾಣೆಬೆನ್ನೂರು ರೈಲ್ವೆ ಮಾರ್ಗ ಶಂಕು ಸ್ಥಾಪನೆಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದು ಸುಮಾರು 3 ಲಕ್ಷ ಜನ ಸೇರಿಸುವ ನಿರೀಕ್ಷೆ ಇದೆ ಎಂದು ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರು ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next