Advertisement

ನೂತನ ಆಡಳಿತಸೌಧ ನಿರ್ಮಾಣಕ್ಕೆ ಪ್ರಸ್ತಾವನೆ

06:29 PM Aug 11, 2022 | Team Udayavani |

ಮೊಳಕಾಲ್ಮೂರು: ರಾಜ್ಯದಲ್ಲಿ 144 ತಾಲೂಕು ಸೌಧಗಳಿದ್ದು, ಹೊಸದಾಗಿ 64 ತಾಲೂಕು ಸೌಧಗಳನ್ನು ಘೋಷಣೆ ಮಾಡಲಾಗಿದೆ. 51 ತಾಲೂಕಿನಲ್ಲಿ ಸೌಧಗಳನ್ನು ನಿರ್ಮಿಸಬೇಕಾಗಿದ್ದು, ರಾಜ್ಯದಲ್ಲಿ ಇನ್ನೂ 20ರಿಂದ 30 ತಾಲೂಕು ಆಡಳಿತಸೌಧ ನಿರ್ಮಾಣಕ್ಕೆ ಹಣ ಮಂಜೂರಾತಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಕಂದಾಯ ಸಚಿವ ಆರ್‌. ಅಶೋಕ್‌ ಹೇಳಿದರು.

Advertisement

ಪಟ್ಟಣದ ತಾಲೂಕು ಆಡಳಿತಸೌಧದ ಆವರಣದಲ್ಲಿ ನೂತನ ಆಡಳಿತಸೌಧ ಹಾಗೂ 70 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅಧಿಕಾರಿಗಳು ಜನರನ್ನು ಅಲೆದಾಡಿಸದೆ ಸರ್ಕಾರದ ಸವಲತ್ತು ಕಲ್ಪಿಸಿಕೊಡಬೇಕು. ರಾಜ್ಯದ 14 ಜಿಲ್ಲೆಗಳ 161 ತಾಲೂಕುಗಳಲ್ಲಿ ಪ್ರವಾಹ ಪರಿಸ್ಥಿತಿ ಇದೆ. 17,750 ಮನೆಗಳು ಹಾನಿ, 1,37,000 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಬಿಜೆಪಿ ಸರ್ಕಾರ ಬಂದಾಗಿನಿಂದಲೂ ಬರಗಾಲ ಇಲ್ಲ. ಬಹುತೇಕ ಬರಪೀಡಿತ ಪ್ರದೇಶಗಳಲ್ಲಿ ಕೆರೆ ಕಟ್ಟೆಗಳು ತುಂಬಿ ಹರಿಯುತ್ತಿವೆ ಎಂದರು.

ದೇಶಕ್ಕೆ ಪ್ರಧಾನಿ ಮೋದಿ ಹಾಗೂ ರಾಜ್ಯದಲ್ಲಿ ಬಿ.ಎಸ್‌. ಯಡಿಯೂರಪ್ಪ ಮಾರ್ಗದರ್ಶನ ಇರುವವರೆಗೂ ಯಾರೇನೂ ಮಾಡಲಾಗದು. ಕಾಂಗ್ರೆಸ್‌ ನುಗ್ಗೆ ಮರದಂತಿದ್ದು ತ್ವರಿತವಾಗಿ ಮುರಿದು ಬೀಳಲಿದೆ. ಮನೆಯೊಂದು ಮೂರು ಬಾಗಿಲಿನಂತಿದೆ. ಮನೆ ಹಾನಿಗೆ ಪರಿಹಾರಕ್ಕೆ 95 ಸಾವಿರ ರೂ. ಬದಲಾಗಿ ಮನೆ ನಿರ್ಮಾಣಕ್ಕೆ 5 ಲಕ್ಷ ರೂ. ನೀಡಲಾಗುವುದು. ಬೆಳೆ ಪರಿಹಾರಕ್ಕೆ 6,800 ರೂ. ಬದಲಾಗಿ ಪ್ರಸ್ತುತ 13,800 ರೂ., ಬಹುವಾರ್ಷಿಕ ಮಳೆಗೆ 15 ಸಾವಿರ ರೂ. ಬದಲಾಗಿ 28 ಸಾವಿರ ರೂ. ಪರಿಹಾರ ನೀಡಲಾಗುತ್ತಿದೆ. ಕಳೆದ ಬಾರಿ ರಾಜ್ಯದಲ್ಲಿ ಮಳೆ ಬಂದಾಗ 2,500 ಕೋಟಿ ರೂ. ಪರಿಹಾರ ನೀಡಲಾಗಿತ್ತು ಎಂದರು.

ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಮಾತನಾಡಿ, ನುಡಿದಂತೆ ನಡೆಯುವ ಬಿಜೆಪಿ ಸರ್ಕಾರ ಕ್ಷೇತ್ರದಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಮತ್ತು ತುಂಗಭದ್ರ ಕುಡಿಯುವ ನೀರಿನ ಯೋಜನೆಗಳನ್ನು ಜಾರಿಗೊಳಿಸಿದೆ. ಕ್ಷೇತ್ರದಲ್ಲಿ ಹೆಣ್ಣುಮಕ್ಕಳಿಗೆ ಸ್ವಸಹಾಯ ಗುಂಪುಗಳಿಗೆ ಸಹಾಯಧನ, ಒಳಕ್ರೀಡಾಂಗಣ, ಪತ್ರಕರ್ತರ ಭವನ ನಿರ್ಮಾಣ, ಜಲಜೀವನ್‌ ಮಿಷನ್‌ ಯೋಜನೆಯಿಂದ ಕುಡಿಯುವ ನೀರಿನ ಸೌಲಭ್ಯ ಸೇರಿದಂತೆ ಸುಮಾರು 70 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು.

ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ, ಶುದ್ಧ ಕುಡಿಯುವ ನೀರು, ಜಲಜೀವನ್‌ ಮಿಷನ್‌ ಅಡಿಯಲ್ಲಿ ಕುಡಿಯುವ ನೀರು, ಬಿಇಒ ಕಚೇರಿ ನಿರ್ಮಾಣ, ಪತ್ರಕರ್ತರ ಭವನ ನಿರ್ಮಾಣ, ಊರು ಬಾಗಿಲು ನಿರ್ಮಾಣ, ಕೋತಲಗೊಂದಿ ಕೆರೆಯಿಂದ ಕುಡಿಯುವ ನೀರು ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಕೆಎಸ್‌ ಆರ್‌ಟಿಸಿ ಬಸ್‌ ನಿಲ್ದಾಣ ನಿರ್ಮಿಸಲಾಗುವುದೆಂದು ಭರವಸೆ ನೀಡಿದರು.

Advertisement

ಕಾರ್ಯಕ್ರಮದಲ್ಲಿ ಜಿಲ್ಲಾಧಿ ಕಾರಿ ಕವಿತಾ ಎಸ್‌. ಮನ್ನೀಕೇರಿ, ತಹಶೀಲ್ದಾರ್‌ ಟಿ. ಸುರೇಶ್‌ಕುಮಾರ್‌, ತಾಪಂ ಕಾರ್ಯನಿರ್ವಹಣಾಧಿಕಾರಿ ಕೆ.ಒ. ಜಾನಕಿರಾಮ್‌, ಬಿಇಒ ಸಿ.ಎಸ್‌. ವೆಂಕಟೇಶ್‌, ಪಶು ಇಲಾಖೆಯ ಡಾ| ರಂಗಪ್ಪ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯಪಾಲ್‌, ಮಂಡಲಾಧ್ಯಕ್ಷ ಡಾ| ಪಿ.ಎಂ. ಮಂಜುನಾಥ, ನಾಯಕನಹಟ್ಟಿ ಮಂಡಲಾಧ್ಯಕ್ಷ ರಾಮ ರೆಡ್ಡಿ, ನಗರಾಧ್ಯಕ್ಷ ಕಿರಣ್‌ ಗಾಯಕವಾಡ್‌, ಪಪಂ ಅಧ್ಯಕ್ಷ ಪಿ. ಲಕ್ಷ್ಮಣ, ಉಪಾಧ್ಯಕ್ಷೆ ಶುಭಾ ಪೃಥ್ವಿರಾಜ್‌, ಸ್ಥಾಯಿ ಸಮಿತಿ ಅಧ್ಯಕ್ಷೆ ಸವಿತಾ, ಸದಸ್ಯರಾದ ಟಿ.ಟಿ. ರವಿಕುಮಾರ್‌, ತಿಪ್ಪೇಸ್ವಾಮಿ, ಬಿ.ಎನ್‌. ಮಂಜಣ್ಣ, ರೂಪಾ, ಲಕ್ಷ್ಮೀದೇವಿ, ಕೆಡಿಪಿ ಸದಸ್ಯರಾದ ಸರ್ವಮಂಗಳ ಚಂದ್ರು, ಶಾಂತಾರಾಂ ಬಸಾಪತಿ, ತಿಪ್ಪೇಸ್ವಾಮಿ ಮೊದಲಾದವರು ಭಾಗವಹಿಸಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next