Advertisement
ಎಲ್ಲೆಂದರಲ್ಲಿ ಕಸ ಎಸೆಯುವುದಕ್ಕೆ ಕಡಿವಾಣ ಹಾಕಲು ಮಾಡಿದ ಅಭಿಯಾನ ಬಹುತೇಕ ಯಶ ಕಂಡಿದೆ. ಹಲವು ಕ್ರಮಗಳ ಮೂಲಕ ಬ್ಲಾಕ್ ಸ್ಪಾಟ್ ಗಳು ಇಂದು ಉತ್ತಮ ಸ್ಥಳವಾಗಿ ಮಾರ್ಪಟ್ಟಿವೆ. ಆದರೆ ಇದೀಗ ಖಾಲಿ ನಿವೇಶನಗಳು ತಿಪ್ಪೆಗಳಾಗಿ ಮಾರ್ಪಡುತ್ತಿವೆ. ಖಾಲಿ ನಿವೇಶನಗಳು ಸ್ವಚ್ಛಗೊಂಡರೆ ಸ್ವಚ್ಛ ನಗರ ಪರಿಕಲ್ಪನೆ ಯಶಸ್ವಿಯಾಗಲು ಸಾಧ್ಯ ಎಂದು ಪಾಲಿಕೆ ದಿಟ್ಟ ಕ್ರಮಕ್ಕೆ ಮುಂದಾಗಿದೆ. ಖಾಲಿ ನಿವೇಶನಗಳ ಮಾಲೀಕರಿಗೆ ನೋಟಿಸ್ ಜಾರಿ ಮಾಡುತ್ತಿದ್ದು, ಅವರು ಸ್ವಚ್ಛಗೊಳಿಸದಿದ್ದರೆ ಪಾಲಿಕೆಯಿಂದ ಸ್ವಚ್ಛಗೊಳಿಸುವ ಕಾರ್ಯ ನಡೆದಿದೆ. ಈ ಸ್ವಚ್ಛತಾ ಅಭಿಯಾನ ಆಸ್ತಿ ತೆರಿಗೆ ವಂಚಿತರ ಪತ್ತೆಗೆ ಸಹಕಾರಿಯಾಗಿದೆ.
Related Articles
Advertisement
ವಾರ್ಡ್‌ಗೊಬ್ಬ ನೋಡಲ್ ಅಧಿಕಾರಿ:
ಹಿಂದೆಯೂ ಖಾಲಿ ನಿವೇಶನ ಸ್ವಚ್ಛತಾ ಕಾರ್ಯ ನಡೆಯುತ್ತಿತ್ತು. ಆದರೆ ಈ ಬಾರಿಯಷ್ಟು ಕಟ್ಟುನಿಟ್ಟಾಗಿ ಆಗುತ್ತಿರಲಿಲ್ಲ. ಇದೀಗ ಪ್ರತಿ ವಾರ್ಡ್‌ಗೂ ಎ ಹಾಗೂ ಬಿ ದರ್ಜೆ ಪಾಲಿಕೆ ಅಧಿಕಾರಿಗಳನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ. ಪ್ರತಿನಿತ್ಯ ನೋಟಿಸ್ ಜಾರಿ, ನಿವೇಶನ ಸ್ವಚ್ಛತೆ ಅಥವಾ ಪಾಲಿಕೆಯಿಂದ ಸ್ವಚ್ಛತೆ ಕಾರ್ಯ ನಿರ್ವಹಿಸಬೇಕು. ಇದರೊಂದಿಗೆ ಆಸ್ತಿ ತೆರಿಗೆ ವಂಚನೆ ಪ್ರಕರಣಗಳನ್ನು ಪತ್ತೆ ಹಚ್ಚುವ ಕೆಲಸ ಆಗುತ್ತಿದೆ. ಇಂತಹ ಪ್ರಕರಣಗಳನ್ನು ಪತ್ತೆ ಹಚ್ಚಿ ತೆರಿಗೆ ವ್ಯಾಪ್ತಿಗೆ ತಂದರೆ ಪಾಲಿಕೆ ತೆರಿಗೆ ಆದಾಯವೂ ವೃದ್ಧಿಸಲಿದೆ.
ನಿವೇಶನಗಳಿಗೆ ಭೇಟಿ ನೀಡಲು ಅಧಿಕಾರಿಗಳಿಗೆ ಸೂಚನೆ: ಪಾಲಿಕೆ ದಾಖಲೆಯಲ್ಲಿ ಮಾತ್ರ ಖಾಲಿ ನಿವೇಶನ. ಆದರೆ ಕಟ್ಟಡ, ವಾಣಿಜ್ಯ ಕಟ್ಟಡ, ಶೆಡ್ ಸೇರಿದಂತೆ ಇತರೆ ಕಾರ್ಯಗಳಿಗೆ ಬಳಕೆ ಮಾಡಿರುವ ಪ್ರಕರಣಗಳು ಬೆಳಕಿಗೆ ಬರುತ್ತಿದೆ. ಪಾಲಿಕೆ ಆಯುಕ್ತ ಡಾ| ಬಿ. ಗೋಪಾಲಕೃಷ್ಣ ಅವರು ಎಲ್ಲಾ ವಾರ್ಡ್‌ಗಳ ನೋಡಲ್ ಅಧಿಕಾರಿಗಳಿಗೆ ಸೂಚನೆ ನೀಡಿ, ಪಾಲಿಕೆ ದಾಖಲೆ ಪ್ರಕಾರ ಎಲ್ಲಾ ನಿವೇಶನಗಳಿಗೆ ಭೇಟಿ ಕೊಡುವುದು, ಅಲ್ಲಿನ ಚಿತ್ರಣದ ಕುರಿತು ಪರಿಶೀಲನೆ ಮಾಡುವಂತೆ ಕಟ್ಟುನಿಟ್ಟಿನ ಆದೇಶ ಮಾಡಿದ್ದಾರೆ. ಆ ಪ್ರಕಾರ ಅಧಿಕಾರಿಗಳು ಆಸ್ತಿ ತೆರಿಗೆ ವಂಚನೆ ಪ್ರಕರಣಗಳನ್ನು ಪತ್ತೆ ಹಚ್ಚುವ ಕಾರ್ಯಕ್ಕೆ ಮುಂದಾಗಿದ್ದಾರೆ. ತೆರಿಗೆ ವಂಚಿಸಿದರನ್ನು ಪತ್ತೆ ಹಚ್ಚಿದ ನಂತರ ಅವರು ಯಾವಾಗಿನಿಂದ ಕಟ್ಟಡ ನಿರ್ಮಿಸಿದ್ದಾರೆ ಎನ್ನುವ ದಾಖಲೆ ಪತ್ತೆ ನಡೆಸಿದ್ದಾರೆ. ಕಟ್ಟಡಕ್ಕೆ ಪಡೆದ ವಿದ್ಯುತ್, ನೀರಿನ ಸಂಪರ್ಕ ಎಲ್ಲಾ ದಾಖಲೆಗಳನ್ನು ಪಡೆದು ಅಷ್ಟು ವರ್ಷಗಳ ತೆರಿಗೆ ವಸೂಲಿಗೆ ಮುಂದಾಗಲಿದ್ದಾರೆ. ಆಯಾ ಪ್ರದೇಶದ ಬಿಲ್ ಕಲೆಕ್ಟರ್, ಸಿಬ್ಬಂದಿಯಿಂದ ವರದಿ ಪಡೆದು ಎರಡು ತಿಂಗಳಲ್ಲಿ ಪ್ರಕರಣವನ್ನು ಪತ್ತೆ ಹಚ್ಚಿ ತೆರಿಗೆ ವಿಧಿಸುವ ಕಾರ್ಯ ಪೂರ್ಣಗೊಳಿಸುವ ಗುರಿ ಪಾಲಿಕೆ ಹಾಕಿಕೊಂಡಿದೆ. ಪಾಲಿಕೆ ದಾಖಲೆ ಪ್ರಕಾರ ಇರುವ 90 ಸಾವಿರ ನಿವೇಶನಗಳ ವಸ್ತುಸ್ಥಿತಿ ಅರಿಯಲು ಸಮೀಕ್ಷೆ ಕಾರ್ಯಕ್ಕೆ ಪಾಲಿಕೆ ಮುಂದಾಗಿದೆ.
-ಹೇಮರಡ್ಡಿ ಸೈದಾಪುರ