Advertisement

ತೆರಿಗೆ ಬಾಕಿ ತಲೆನೋವು; 10 ಮಹಾನಗರ,176 ಸ್ಥಳೀಯ ಸಂಸ್ಥೆಗಳಿಗೆ 3,200 ಕೋ.ರೂ.ಬಾಕಿ

12:08 AM Oct 10, 2021 | Team Udayavani |

ಬೆಂಗಳೂರು: ಆಸ್ತಿ ತೆರಿಗೆ ಪಾವತಿಗೆ ವಿನಾಯಿತಿ ನೀಡಿ ಎಷ್ಟೇ ಕಾಲಾವಕಾಶ ವಿಸ್ತರಿಸಿದರೂ ಅಷ್ಟೇ… ಕಾಲಮಿತಿಯೊಳಗೆ ಪಾವತಿಸದಿದ್ದರೆ ಅಧಿಕ ಬಡ್ಡಿ ವಿಧಿಸಿ, ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುತ್ತೇವೆ ಎಂದು ನಗರ ಸ್ಥಳೀಯ ಸಂಸ್ಥೆಗಳು ಎಚ್ಚರಿಸಿದರೂ ಅಷ್ಟೇ… ಆಸ್ತಿ ಮಾಲಕರು ಮಾತ್ರ ತೆರಿಗೆ ಕಟ್ಟಲು ಮುಂದೆ ಬರುತ್ತಿಲ್ಲ !

Advertisement

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ, ಮಂಗಳೂರು ಮಹಾ ನಗರಪಾಲಿಕೆ ಸೇರಿದಂತೆ ರಾಜ್ಯದ 10 ಮಹಾನಗರ ಪಾಲಿಕೆಗಳು ಮತ್ತು 176 ನಗರ ಸ್ಥಳೀಯ ಸಂಸ್ಥೆಗಳಿಗೆ ಮೂರು ವರ್ಷಗಳಲ್ಲಿ ಆಸ್ತಿ ಮಾಲಕರಿಂದ 3,200 ಸಾವಿರ ಕೋಟಿ ರೂ. ತೆರಿಗೆ ಪಾವತಿಯಾಗದಿರುವುದೇ ಇದಕ್ಕೆ ಸಾಕ್ಷಿ.

ಇದರ ಪರಿಣಾಮ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪ್ರತೀ ವರ್ಷ ಕೋಟ್ಯಂತರ ರೂ. ಆಸ್ತಿ ತೆರಿಗೆ ಬಾಕಿಯಾಗುತ್ತಿದೆ. ವರ್ಷ ಕಳೆದಂತೆ ಈ ಬಾಕಿ ಬೆಳೆಯುತ್ತಲೇ ಹೋಗುತ್ತದೆ. ಇದು ಸ್ಥಳೀಯ ಆಡಳಿತ ಮತ್ತು ಅಭಿವೃದ್ಧಿ ಮೇಲೆ ನೇರ ಪರಿಣಾಮ ಬೀರುತ್ತಿದೆ.

ಬಿಬಿಎಂಪಿಯಲ್ಲಿ 2018ರಿಂದ 2021ರ ವರೆಗೆ ಒಟ್ಟು 2,269 ಕೋಟಿ ರೂ. ಆಸ್ತಿ ತೆರಿಗೆ ಬಾಕಿ ಇದ್ದರೆ, ರಾಜ್ಯದ ಉಳಿದ 10 ಮಹಾನಗರ ಪಾಲಿಕೆಗಳಾದ ಮಂಗಳೂರು, ಶಿವಮೊಗ್ಗ, ಮೈಸೂರು, ತುಮ ಕೂರು, ದಾವಣಗೆರೆ, ಬಳ್ಳಾರಿ, ವಿಜಯಪುರ, ಹುಬ್ಬಳ್ಳಿ- ಧಾರವಾಡ, ಬೆಳಗಾವಿ ಮತ್ತು ಕಲಬುರಗಿ ಮಹಾನಗರ ಪಾಲಿಕೆಗಳಲ್ಲಿ 3 ವರ್ಷಗಳಲ್ಲಿ 429 ಕೋಟಿ ರೂ. ಹಾಗೂ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್‌ ಸೇರಿ 174 ನಗರ ಸ್ಥಳೀಯ ಸಂಸ್ಥೆ ಗಳಲ್ಲಿ 494 ಕೋಟಿ ರೂ. ಆಸ್ತಿ ತೆರಿಗೆ ಬಾಕಿ ಇದೆ.

ಮೂರು ವರ್ಷಗಳಲ್ಲಿ ಅತೀ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಮಹಾನಗರ ಪಾಲಿಕೆಗಳೆಂದರೆ ಮೈಸೂರು- 204 ಕೋ.ರೂ., ಮಂಗಳೂರು- 68 ಕೋ.ರೂ. ಮತ್ತು ಕಲಬುರಗಿ- 51 ಕೋ.ರೂ. ಆಗಿವೆ.

Advertisement

ಇದನ್ನೂ ಓದಿ:ಲಖೀಂಪುರ ಹಿಂಸೆ: ಆಶಿಷ್‌ ಮಿಶ್ರಾ ಬಂಧನ; ಸತತ 8 ಗಂಟೆ ಎಸ್‌ಐಟಿ ವಿಚಾರಣೆ

25 ಲಕ್ಷ ರೂ.ಗಳಿಗೂ ಅಧಿಕ ತೆರಿಗೆ ಬಾಕಿ

ರಾಜ್ಯದ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲಿ 25 ಲಕ್ಷ ರೂ.ಗಳಿಗೂ ಅಧಿಕ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ 156 ಪ್ರಕರಣಗಳಿವೆ. ಬಿಬಿಎಂಪಿಯಲ್ಲಿ 71 ಪ್ರಕರಣ ಗಳಿದ್ದರೆ, ಉಳಿದ ಮನಪಾಗಳಲ್ಲಿ 85 ಪ್ರಕರಣಗಳಿವೆ.

ಮೈಸೂರು, ತುಮಕೂರು, ಬಳ್ಳಾರಿ, ಹುಬ್ಬಳ್ಳಿ- ಧಾರವಾಡ, ಕಲಬುರಗಿ ಮನಪಾಗಳಲ್ಲಿ 25 ಲಕ್ಷ ರೂ.ಗಳಿಗೆ ಅಧಿಕ ತೆರಿಗೆ ಬಾಕಿಯಾದ 85 ಪ್ರಕರಣ ಇದ್ದು, ಬಾಕಿ ಮೊತ್ತ 58 ಕೋಟಿ ರೂ. ಆಗಿದೆ.

ಆಸ್ತಿ ಮುಟ್ಟುಗೋಲು; ದಂಡಾಸ್ತ್ರ
ಬಿಬಿಎಂಪಿಯಲ್ಲಿ ಆಸ್ತಿ ತೆರಿಗೆ ಬಾಕಿ ಪ್ರಕರಣಗಳಲ್ಲಿ ಮೊದಲು ಶೋಕಾಸ್‌ ನೋಟಿಸ್‌ ನೀಡಿ ಬಳಿಕ ಜಪ್ತಿ ವಾರಂಟ್‌ ಹೊರಡಿಸಲಾಗುತ್ತದೆ. ಇಂತಹ ಪ್ರಕರಣಗಳಲ್ಲಿ 202-21ನೇ ಸಾಲಿನ ವರೆಗೆ ಪ್ರತೀ ತಿಂಗಳು ಶೇ. 2ರಷ್ಟು ಬಡ್ಡಿ, 2021-2ನೇ ಸಾಲಿನಿಂದ ವಾರ್ಷಿಕ ಶೇ. 9ರಷ್ಟು ಬಡ್ಡಿ ವಸೂಲು ಮಾಡಲಾಗುತ್ತದೆ. ಉಳಿದ ಮನಪಾಗಳಲ್ಲಿ ಆಸ್ತಿ ತೆರಿಗೆ ಪಾವತಿಸದಿದ್ದಲ್ಲಿ ಮಾಸಿಕ ಶೇ. 2ರಷ್ಟು ಬಡ್ಡಿ ದರದ ದಂಡದೊಂದಿಗೆ ತೆರಿಗೆ ವಸೂಲಿ ಮಾಡಲಾಗುವುದು, ಬಡ್ಡಿ ವಿಧಿಸಲು ಕಾಯ್ದೆಯಲ್ಲಿ ಅವಕಾಶವಿಲ್ಲ.

-  ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next