ಬೆಂಗಳೂರು: ಪಾಲಿಕೆ ವ್ಯಾಪ್ತಿಯ ಎಂಟು ವಲಯಗಳಲ್ಲಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಟಾಪ್ 20 ಆಸ್ತಿ ಮಾಲೀಕರ ಪಟ್ಟಿಯನ್ನು ಬಿಬಿಎಂಪಿಯ ಕಂದಾಯ ವಿಭಾಗದ ಅಧಿಕಾರಿಗಳು ಸಿದ್ಧಪಡಿಸಿಕೊಂಡಿದ್ದಾರೆ. ಪ್ರತಿ ವಲಯದ ಪ್ರಮುಖ 20 ಆಸ್ತಿ ಮಾಲೀಕರಿಂದಲೇ ಪಾಲಿಕೆಗೆ 52.20 ಕೋಟಿ ರೂ. ಮೊತ್ತ ಬಾಕಿ ಬರಬೇಕಾಗಿದೆ. ಈ ಮೊತ್ತವನ್ನು ಪಾಲಿಕೆ ವಸೂಲಿ ಮಾಡಿದರೆ ತನ್ನ ತ್ತೈಮಾಸಿಕ ಆಡಳಿತಾತ್ಮಕ ವೆಚ್ಚವನ್ನು ಸರಿದೂಗಿಸಬಹುದಾಗಿದೆ.
ಪಾಲಿಕೆ ಸಿದ್ಧಪಡಿಸಿಕೊಂಡಿರುವ ಪಟ್ಟಿಯಲ್ಲಿ ಪೊಲೀಸ್ ಕ್ವಾಟ್ರಸ್, ಕರ್ನಾಟಕ ರಾಜ್ಯ ರಸ್ಥೆ ಸಾರಿಗೆ ನಿ. (ಕೆಎಸ್‌ಆರ್‌ಟಿಸಿ), ಬೆಂಗಳೂರು ಮಹಾನಗರ ಸಾರಿಗೆ ನಿಗಮ (ಬಿಎಂಟಿಸಿ), ಭಾರತೀಯ ಆಹಾರ ನಿಗಮ, ಇಂಡಿಯನ್ ಆಯಿಲ್ ಕಾರ್ಪೊರೇಷನ್, ಮಾನ್ಯತಾ ರಿಯಾಲಿಟಿ, ಜಿಲ್ಲಾ ಶಸಸ್ತ್ರ ಪೊಲೀಸ್ ಮೀಸಲು ಪಡೆ ಅಗ್ರ ಸ್ಥಾನದಲ್ಲಿದ್ದು, ಇವುಗಳಿಂದಲೇ ಪಾಲಿಕೆಗೆ ಕೋಟ್ಯಂತರ ರೂ. ಬಾಕಿ ಇದೆ. ಈ ಬಗ್ಗೆ ಪಾಲಿಕೆಯ ಅಧಿಕಾರಿಗಳು ಸಂಬಂಧ ಪಟ್ಟ ಸಂಸ್ಥೆ ಗಳಿಗೆ ನೋಟಿಸ್ ನೀಡಿ ಕೈ ತೊಳೆದುಕೊಂಡಿದ್ದಾರೆ.
ಪಾಲಿಕೆಗೆ ಒಟ್ಟು ಅಂದಾಜು 1,450 ಕೋಟಿ ರೂ. (ಬಡ್ಡಿ ಮತ್ತು ಅಸಲು ಸೇರಿ) ಬಾಕಿಯಿದ್ದು, ಇದರಲ್ಲಿ ಪ್ರಮುಖ 20 ಆಸ್ತಿ ತೆರಿಗೆ ಬಾಕಿ ಮೊತ್ತವನ್ನು ಆದ್ಯತೆಯ ಮೇಲೆ ವಸೂಲಿ ಮಾಡಲಾಗುವುದು ಎಂದು ಪಾಲಕೆಯ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಆಸ್ತಿ ಮಾಲೀಕರು ಕಳೆದ 10 ವರ್ಷ ಗಳಿಂದಲೂ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದರೂ ಪಾಲಿಕೆ ನೋಟಿಸ್ ನೀಡುವುದನ್ನು ಬಿಟ್ಟು ಮುಂದಕ್ಕೆ ಸಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅತಿ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವವರ ಮೇಲೆ ಪಾಲಿಕೆ ಯಾವ ಕ್ರಮ ಕೈಗೊಳ್ಳಬೇಕು ಎಂಬ ಪ್ರಶ್ನೆ ಎದ್ದಿದೆ.
10 ವರ್ಷಗಳಿಂದಲೂ ನೋಟಿಸ್: ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಕೆಲವು ಮಾಲೀಕರಿಗೆ ಪಾಲಿಕೆಯ ಅಧಿಕಾರಿಗಳು ಕಳೆದ 10 ವರ್ಷ ಗಳಿಂದಲೂ ನೋಟಿಸ್, ವಾರೆಂಟ್ ಜಾರಿ ಮಾಡುತ್ತಿದ್ದಾರೆ. ಆದರೆ, ಆಸ್ತಿ ಮಾಲೀಕರು ಪಾಲಿಕೆಯ ನೋಟಿಸ್‌ಗಳಿಗೆ ಕ್ಯಾರೇ ಎನ್ನುತ್ತಿಲ್ಲ. ಪಾಲಿಕೆಯ ಅಧಿಕಾರಿಗಳು ತೆರಿಗೆ ಬಾಕಿ ಉಳಿಸಿಕೊಂಡಿರುವ ಸಂಸ್ಥೆಗಳಿಂದ ಚರ ಆಸ್ತಿ ವಶಪಡಿಸಿಕೊಂಡು ಬಿಸಿ ಮುಟ್ಟಿಸುವ ಕೆಲಸ ಮಾಡಿಲ್ಲ. ಆಸ್ತಿ ಮಾಲೀಕರು ನೋಟಿಸ್‌ಗೆ ಸ್ಪಂದಿಸದೆ ಅಸಲು ಮತ್ತು ಬಡ್ಡಿ ಉಳಿಸಿಕೊಂಡಿದ್ದಾರೆ.
ಒಂದೆಡೆ ಆಸ್ತಿ ಮಾಲೀಕರಿಂದ ತೆರಿಗೆ ಸಂಗ್ರಹ ಮಾಡುವುದು ಸವಾಲಾಗಿದ್ದರೆ, ಇನ್ನೊಂದೆಡೆ ಸರ್ಕಾರಿ ಹಾಗೂ ಪ್ರತಿಷ್ಠಿತ ಸಂಸ್ಥೆಗಳು ಪಾಲಿಕೆಗೆ ಆಸ್ತಿ ತೆರಿಗೆ ಪಾವತಿ ಮಾಡುತ್ತಿಲ್ಲ. ಇದೂ ಪಾಲಿಕೆಯ ಅಧಿಕಾರಿಗಳಿಗೆ ಕಬ್ಬಿಣದ ಕಡಲೆಯಾಗಿದೆ. ಇನ್ನು ಕೆಲವು ಸಂಸ್ಥೆಗಳು ಈಗಾಗಲೇ ದಿವಾಳಿಯಾಗಿದ್ದು, ಮುಚ್ಚಲ್ಪಟ್ಟಿವೆ. ಇದರಿಂದಲೂ ಪಾಲಿಕೆಗೆ ಕೋಟ್ಯಂತರ ರೂ. ಬಾಕಿ ಇದೆ.
ವಲಯ ಪ್ರಸಕ್ತ ವರ್ಷ ಒಟ್ಟು ಬಾಕಿ (ಕೋಟಿ ರೂ.ಗಳಲ್ಲಿ)
ಮಹದೇವಪುರ 2.84 14.27
ಬೊಮ್ಮನಹಳ್ಳಿ 1.01 3.53
ಪೂರ್ವ 1.34 5.82
ಯಲಹಂಕ 38.68 (ಲಕ್ಷ) 1.79
ರಾಜರಾಜೇಶ್ವರಿ ನಗರ 3.17 12.42
ದಕ್ಷಿಣ 2.05(ಲಕ್ಷ) 18 (ಲಕ್ಷ)
ಪಶ್ಚಿಮ 2.13 8.96
ದಾಸರಹಳ್ಳಿ 10 (ಲಕ್ಷ) 5.23
ಒಟ್ಟು 8.88 52.20
ಈಗಾಗಲೇ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಆಸ್ತಿ ಮಾಲೀಕರಿಗೆ ನೋಟಿಸ್ ನೀಡಲಾಗುತ್ತಿದ್ದು, ವಾರೆಂಟ್ ಸಹ ಜಾರಿ ಮಾಡಲಾಗುವುದು. ವಾರೆಂಟ್ ಜಾರಿ ಮಾಡಿದ ಮೇಲೂ ಆಸ್ತಿ ತೆರಿಗೆ ಪಾವತಿ ಮಾಡದೆ ಇದ್ದಲ್ಲಿ, ಆಸ್ತಿ ಮಾಲೀಕರ ಚರ ಆಸ್ತಿ (ಪಿಠೊಪಕರಣ)ಯನ್ನು ಜಪ್ತಿ ಮಾಡಲಾಗುವುದು.
-ಬಸವರಾಜ್, ವಿಶೇಷ ಆಯುಕ್ತ (ಕಂದಾಯ), ಬಿಬಿಎಂಪಿ
* ಹಿತೇಶ್ ವೈ