ಬೆಂಗಳೂರು: ಬಿಬಿಎಂಪಿಗೆ ತಪ್ಪು ಮಾಹಿತಿ ನೀಡಿ ಹಲವು ವರ್ಷಗಳಿಂದ ಆಸ್ತಿ ತೆರಿಗೆ ವಂಚಿಸಿದ ಆಸ್ತಿದಾರರ ವಿರುದ್ಧ ಕ್ರಮಕ್ಕೆ ಟೋಟಲ್ ಸ್ಟೇಷನ್ ಸರ್ವೆ “ಅಸ್ತ್ರ’ ಬಳಸಲು ಅಧಿಕಾರಿಗಳು ಮುಂದಾಗಿದ್ದಾರೆ. ಕಟ್ಟಡಗಳ ಸರ್ವೆ ಟೆಂಡರ್ ಪ್ರಕ್ರಿಯೆ ವಾರದೊಳಗೆ ಪೂರ್ಣಗೊಳ್ಳಲಿದ್ದು, ಸದ್ಯದಲ್ಲೇ ಸರ್ವೆ ಶುರುವಾಗಲಿದೆ.
ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿಯಲ್ಲಿ (ಎಸ್‌ಎಎಸ್) ಆಸ್ತಿ ಮಾಲೀಕರು ಪಾಲಿಕೆಗೆ ಆಸ್ತಿಗಳ ವಿಸ್ತೀರ್ಣದ ಕುರಿತು ತಪ್ಪು ಮಾಹಿತಿ ನೀಡಿ ಕಡಿಮೆ ತೆರಿಗೆ ಪಾವತಿಸುವ ಮೂಲಕ ಪಾಲಿಕೆಗೆ ವಂಚಿಸಿದ್ದಾರೆ. ಆಸ್ತಿ ಮಾಲೀಕರಿಗೆ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಹಲವು ಅವಕಾಶ ನೀಡಿದರೂ ತಿದ್ದಿಕೊಂಡಿಲ್ಲ. ಹೀಗಾಗಿ ಸರ್ವೆ ನಡೆಸಿ ತಪ್ಪು ಮಾಹಿತಿ ನೀಡಿದವರ ವಿರುದ್ಧ ಬಿಬಿಎಂಪಿ ಕ್ರಮ ಕೈಗೊಳ್ಳಲು ಸಜ್ಜಾಗಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಜಿಐಎಸ್ ವ್ಯವಸ್ಥೆ ಮೂಲಕ 19 ಲಕ್ಷ ಆಸ್ತಿಗಳನ್ನು ಗುರುತಿಸಲಾಗಿದೆ. ಬಹುತೇಕ ಆಸ್ತಿಗಳು ಎಸ್‌ಎಎಸ್ ಪದ್ಧತಿಯಲ್ಲಿ ಪಾಲಿಕೆಗೆ ತಪ್ಪು ಮಾಹಿತಿ ನೀಡಿರುವುದು ಬೆಳಕಿಗೆ ಬಂದಿದೆ. ಪ್ರಮುಖವಾಗಿ ಬೃಹತ್ ವಿಸ್ತೀರ್ಣದ ಶಾಪಿಂಗ್ ಮಾಲ್, ಟೆಕ್‌ಪಾರ್ಕ್‌ಗಳು ಹಾಗೂ ವಾಣಿಜ್ಯ ಕಟ್ಟಡಗಳು ತೆರಿಗೆ ವಂಚಿಸಿರುವುದು ಈಗಾಗಲೇ ಹಲವು ಬಾರಿ ಸಾಬೀತಾಗಿದೆ. ಹೀಗಾಗಿ ನಗರದಲ್ಲಿ ಎಲ್ಲ ಮಾಲ್, ಟೆಕ್‌ಪಾರ್ಕ್ ಹಾಗೂ ಬೃಹತ್ ವಾಣಿಜ್ಯ ಕಟ್ಟಡಗಳನ್ನು ಸರ್ವೆ ನಡೆಸಲು ಪಾಲಿಕೆಯ ಅಧಿಕಾರಿಗಳು ತೀರ್ಮಾನಿಸಿದ್ದಾರೆ.
ನಗರದಲ್ಲಿ 40 ಮಾಲ್, 70 ಟೆಕ್‌ಪಾರ್ಕ್ ಮತ್ತು 5 ಸಾವಿರಕ್ಕೂ ಅಧಿಕ ಬೃಹತ್ ವಾಣಿಜ್ಯ ಮತ್ತು ಅಪಾರ್ಟ್‌ಮೆಂಟ್ ಕಟ್ಟಡಗಳನ್ನು ಪಾಲಿಕೆಯ ಅಧಿಕಾರಿಗಳು ಗುರುತಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ಕೂಡಲೇ ಎಲ್ಲ ವಲಯಗಳಲ್ಲಿ ಪ್ರತ್ಯೇಕವಾಗಿ ಟೋಟಲ್ ಸ್ಟೇಷನ್ ಸರ್ವೆ ನಡೆಯಲಿದೆ. ಏಜೆನ್ಸಿಯವರು ಸರ್ವೆ ನಡೆಸಿದ ನಂತರ ನೀಡಲಾಗುವ ವರದಿಯನ್ನು ಆಧರಿಸಿದ ಪಾಲಿಕೆಯ ಅಧಿಕಾರಿಗಳು ತಪ್ಪು ಮಾಹಿತಿ ನೀಡಿದವರ ವಿರುದ್ಧ ಕ್ರಮಕೈಗೊಳ್ಳಲಿದ್ದಾರೆ.
ವಾರದಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣ: ಪಾಲಿಕೆಗೆ ತಪ್ಪು ಮಾಹಿತಿ ನೀಡಿರುವ ಕಟ್ಟಡಗಳನ್ನು ಟೋಟಲ್ ಸ್ಟೇಷನ್ ಸರ್ವೆ ನಡೆಸಲು ಕರೆಯಲಾದ ಟೆಂಡರ್ ಪ್ರಕ್ರಿಯೆ ವಾರದೊಳಗೆ ಪೂರ್ಣಗೊಳ್ಳಲಿದೆ. ಅದಾದ ಕೂಡಲೇ ಪಾಲಿಕೆಯಿಂದ ಗುರುತಿಸಿರುವ ಬೃಹತ್ ಕಟ್ಟಡಗಳ ಸರ್ವೆ ನಡೆಯಲಿದೆ. ಜತೆಗೆ ಸಣ್ಣ ಪುಟ್ಟ ಕಟ್ಟಡಗಳಿಂದಲೂ ಪಾಲಿಕೆಗೆ ಆಗುತ್ತಿರುವ ತೆರಿಗೆ ವಂಚನೆ ತಡೆಯಲು ನಗರದ ಪ್ರಮುಖ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳ ಸಹಕಾರ ಪಡೆಯುವ ಕುರಿತಂತೆ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಚಿಂತನೆ ನಡೆಸಿದೆ.
ಪ್ರತಿ ವಲಯಕ್ಕೆ ಪ್ರತ್ಯೇಕ ಏಜೆನ್ಸಿ
ಬಿಬಿಎಂಪಿ ವತಿಯಿಂದ ಟೋಟಲ್ ಸ್ಟೇಷನ್ ಸರ್ವೆ ನಡೆಸಲು ಎಲ್ಲ ಎಂಟು ವಲಯಗಳಲ್ಲಿ ಪ್ರತ್ಯೇಕ ಏಜೆನ್ಸಿಗಳಿಗೆ ಗುತ್ತಿಗೆ ನೀಡಲು ತೀರ್ಮಾನಿಸಲಾಗಿದೆ. ಸರ್ವೆ ನಡೆಸಲು ಮುಂದಾಗುವ ಎಲ್ಲ ಏಜೆನ್ಸಿಗಳು ಕಾಲ ಕಾಲಕ್ಕೆ ವರದಿಯನ್ನು ಪಾಲಿಕೆಗೆ ಸಲ್ಲಿಸಬೇಕು. ಜತೆಗೆ ತಪ್ಪು ಮಾಹಿತಿ ನೀಡಿರುವ ಕಟ್ಟಡಗಳ ಸಂಪೂರ್ಣ ಮಾಹಿತಿಯನ್ನು ಆಧರಿಸಿ ಬಿಬಿಎಂಪಿ ಅಧಿಕಾರಿಗಳು ಕಟ್ಟಡಗಳಿಗೆ ದಂಡ ವಿಧಿಸಿ ತೆರಿಗೆ ಸಂಗ್ರಹಕ್ಕೆ ಮುಂದಾಗಲಿದ್ದಾರೆ.
ಆಸ್ತಿ ವಿಸ್ತೀಣದ ಕುರಿತು ಪಾಲಿಕೆಗೆ ತಪ್ಪು ಮಾಹಿತಿ ನೀಡಿದವರಿಗೆ ತಪ್ಪು ಸರಿಪಡಿಸಿಕೊಳ್ಳಲು ಅವಕಾಶ ನೀಡಿದರೂ ಅದನ್ನು ಬಳಸಿಕೊಂಡಿಲ್ಲ. ಹೀಗಾಗಿ ತಪ್ಪು ಮಾಹಿತಿ ನೀಡಿದವರ ವಿರುದ್ಧ ಟೋಟಲ್ ಸ್ಟೇಷನ್ ಸರ್ವೆ ನಡೆಸಲಾಗುವುದು. ವಾರದೊಳಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು, ನಗರದಲ್ಲಿನ ಸಣ್ಣ ಪುಟ್ಟ ಆಸ್ತಿಗಳ ಸರ್ವೆಗಾಗಿ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಸಹಕಾರ ಪಡೆಯಲು ಚಿಂತನೆ ನಡೆಸಲಾಗಿದೆ.
-ಎಂ.ಕೆ.ಗುಣಶೇಖರ್, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ
* ವಿಶೇಷ ವರದಿ