Advertisement

ಆಸ್ತಿ ನೋಂದಣಿ ಇನ್ನು ಬಲು ಸುಲಭ: ದಲ್ಲಾಳಿಗಳ ಹಾವಳಿಗೆ ಬ್ರೇಕ್

01:13 AM Feb 01, 2023 | Team Udayavani |

ಮಂಗಳೂರು: ಆಸ್ತಿ ನೋಂದಣಿಗೆ ಸಂಬಂಧಿಸಿ ಇರುವ ತೊಡಕುಗಳನ್ನು ನಿವಾರಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಪಡಿಸಲಾದ “ಕಾವೇರಿ-2′ ತಂತ್ರಾಂಶವನ್ನು ಅನುಷ್ಠಾನಗೊಳಿಸಲು ರಾಜ್ಯ ಸರಕಾರ ಸಿದ್ಧತೆ ನಡೆಸಿದ್ದು, ಮಂಗಳೂರು ತಾಲೂಕು ಸಹಿತ ರಾಜ್ಯದ 6 ಸಬ್‌ ರಿಜಿಸ್ಟ್ರಾರ್‌ ಕಚೇರಿಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ಬರಲಿದೆ.

Advertisement

ಪ್ರಕ್ರಿಯೆಗಳು ಸಂಪೂರ್ಣ ಆನ್‌ಲೈನ್‌ ಮೂಲಕವೇ ನಡೆಯುವುದರಿಂದ ದಲ್ಲಾಳಿಗಳ ಹಾವಳಿ, ಭ್ರಷ್ಟಾಚಾರಕ್ಕೆ ಕಡಿವಾಣ ಬೀಳುವ ನಿರೀಕ್ಷೆ ಇದೆ.
ರಾಜ್ಯ ಸರಕಾರದ ಇ- ಆಡಳಿತ ಇಲಾಖೆಯ ಅಧೀನ ಸಂಸ್ಥೆ “ಸೆಂಟರ್‌ ಫಾರ್‌ ಸ್ಮಾರ್ಟ್‌ ಗವರ್ನೆನ್ಸ್‌’ ಸಂಸ್ಥೆ ಕಾವೇರಿ -2 ತಂತ್ರಾಂಶ ಅಭಿವೃದ್ಧಿ ಪಡಿಸಿದ್ದು, ರಾಜ್ಯ ಮಟ್ಟದಲ್ಲಿ ಚಿಂಚೋಳಿ ಯಲ್ಲಿ ಫೆ. 1ರಂದು ಪ್ರಾಯೋಗಿಕ ಜಾರಿಗೆ ಸಿದ್ಧತೆ ನಡೆದಿದೆ. ಮಂಗಳೂರು ತಾಲೂಕು ಕಚೇರಿ ಯಲ್ಲಿ ಫೆಬ್ರವರಿ ಎರಡನೇ ವಾರ ಜಾರಿಯಾಗಲಿದೆ.

ಪಾಸ್‌ಪೋರ್ಟ್‌ ಕಚೇರಿ ಮಾದರಿ ಯಲ್ಲಿ ಸೇವೆ ಲಭ್ಯವಾಗಲಿದೆ. ಸಾರ್ವಜನಿಕರಿಗೆ ಸೇವೆಯನ್ನು ಮತ್ತಷ್ಟು ಮನದಟ್ಟು ಮಾಡುವ ನಿಟ್ಟಿನಲ್ಲಿ ಕಂದಾಯ ಇಲಾಖೆಯು ತನ್ನ ಯೂಟ್ಯೂಬ್‌, ವೆಬ್‌ಸೈಟ್‌, ಫೇಸ್‌ಬುಕ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಆಸ್ತಿ ನೋಂದಣಿ ಕುರಿತ ವೀಡಿಯೋ ದೃಶ್ಯಗಳ ಮೂಲಕ ಮಾಹಿತಿ ಒದಗಿಸಲಿದೆ.

ನೇರ ವ್ಯವಹಾರ
“ಕಾವೇರಿ-2′ ಕೇಂದ್ರೀಕೃತ (ರಾಜ್ಯ ದತ್ತಾಂಶ ಕೋಶ) ಸರ್ವರ್‌ ವ್ಯವಸ್ಥೆಯನ್ನು ಹೊಂದಿರಲಿದ್ದು, ಇಲ್ಲಿ ನೋಂದಣಿ ಮಾತ್ರವಲ್ಲದೆ ಬಳಿಕ ಅಗತ್ಯ ದಾಖಲೆಗಳನ್ನು ಪಡೆಯುವುದು ಕೂಡ ಸುಲಭ. ಸದ್ಯ ಆಸ್ತಿ ನೋಂದಣಿಗೆ ಜನಸಾಮಾನ್ಯರು ದಾಖಲೆಗಳನ್ನು ವಕೀಲರು ಅಥವಾ ಏಜೆಂಟರ ಮೂಲಕ ಮುಂದ್ರಾಕ, ನೋಂದಣಿ ಶುಲ್ಕ ಪಾವತಿಸಿ, ನಿಗದಿತ ದಿನ ಹಾಗೂ ಸಮಯಕ್ಕಾಗಿ ವಾರಗಟ್ಟಲೆ ಕಾಯಬೇಕಾಗುತ್ತದೆ. ಆದರೆ ಈ ತಂತ್ರಾಂಶ¨ದಲ್ಲಿ ಹಾಗಿಲ್ಲ. ಓದು ಬರಹ ಬಲ್ಲ, ಸಾಮಾನ್ಯವಾಗಿ ಆನ್‌ಲೈನ್‌ ಮೂಲಕ ವ್ಯವಹಾರಗಳನ್ನು ಬಲ್ಲವರು ತಾವಿರುವಲ್ಲಿಂದಲೇ ಕಾವೇರಿ -2 ತಂತ್ರಾಂಶದಲ್ಲಿ ದಾಖಲೆಗಳನ್ನು ಅಪ್‌ಲೋಡ್‌ ಮಾಡಬಹುದು.

ನೋಂದಣಿಗೆ ಸಂಬಂಧಿಸಿ ಋಣ ಭಾರ ಪ್ರಮಾಣ ಪತ್ರ, ದೃಢೀಕೃತ ನಕಲುಗಳನ್ನು ಕೂಡ ಮೊಬೈಲ್‌ ಮೂಲಕ ಪಡೆಯಬಹುದು. ವಿವಾದ ರಹಿತ ಆಸ್ತಿಗಳನ್ನು ವಕೀಲರ ಸಹಾಯವಿಲ್ಲದೆ ನೇರವಾಗಿ ನೋಂದಣಿ ಮಾಡುವ ಅವಕಾಶ ಲಭ್ಯವಾಗಲಿದೆ. ಕಂದಾಯ ಇಲಾಖೆಯಿಂದ ರಾಜ್ಯ ಮಟ್ಟದ ಸಹಾಯವಾಣಿ ಕೂಡ ಕಾರ್ಯಾಚರಿಸಲಿದೆ.

Advertisement

ಆಸ್ತಿ ನೋಂದಣಿಗೆ ಸಂಬಂಧಿಸಿ ಖರೀದಿದಾರ ಸಂಬಂಧಿತ ದಾಖಲೆಗಳನ್ನು ಆನ್‌ಲೈನ್‌ ಅಪ್‌ಡೇಟ್‌ ಹಾಗೂ ಮುಂದ್ರಾಂಕ ಶುಲ್ಕ ಪಾವತಿಯ ಬಳಿಕ ಎರಡನೇ ಹಂತದಲ್ಲಿ ಸಬ್‌ ರಿಜಿಸ್ಟ್ರಾರ್‌ ಕಚೇರಿಯಲ್ಲಿ ಸಲ್ಲಿಸಲಾದ ಕಡತಗಳ ಪರಿಶೀಲನೆ, ನೋಂದಣಿ ಶುಲ್ಕದ ತಪಾಸಣೆ ನಡೆಯಲಿದೆ. ಬಳಿಕ ಸಬ್‌ ರಿಜಿಸ್ಟ್ರಾರ್‌ ಕಚೇರಿಯಲ್ಲಿ ನೋಂದಣಿಗೆ ನಿಗದಿತ ದಿನಾಂಕ ಮತ್ತು ಸಮಯದ ಬಗ್ಗೆ ಮೊಬೈಲ್‌ ಸಂದೇಶ ಸಂಬಂಧಪಟ್ಟವರಿಗೆ ದೊರೆಯಲಿದೆ. ಈ ನಿಗದಿತ ಸಮಯಕ್ಕೆ ಸರಿಯಾಗಿ ಸಂಬಂಧಪಟ್ಟವರು ಸಬ್‌ ರಿಜಿಸ್ಟ್ರಾರ್‌ ಕಚೇರಿಯಲ್ಲಿ ಹಾಜರಿದ್ದು, ಪ್ರಕ್ರಿಯೆ 15ರಿಂದ 20 ನಿಮಿಷಗಳಲ್ಲಿ ಕೊನೆಗೊಳ್ಳಲಿದೆ. ನೋಂದಣಿಯಾದ ದಾಖಲೆಗಳು ಡಿಜಿ ಲಾಕರ್‌ನಲ್ಲಿಯೂ ಲಭ್ಯವಾಗುವ ಕಾರಣ ಸಾರ್ವಜನಿಕರು ದೃಢೀಕೃತ ದಾಖಲೆಯ ಪ್ರತಿಗಾಗಿ ಅರ್ಜಿ ಸಲ್ಲಿಸುವ ಅಗತ್ಯವಿರುವುದಿಲ್ಲ. ಉಪ ನೋಂದಣಾಧಿಕಾರಿಯ ಡಿಜಿಟಲೀಕೃತ ಸಹಿಯುಳ್ಳ ದಾಖಲೆಗಳ ಪ್ರತಿಯನ್ನು ಡಿಜಿಲಾಕರ್‌ ಮೂಲಕ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ಮಂಗಳೂರು ತಾಲೂಕು ಕಚೇರಿಯ ಸಬ್‌ ರಿಜಿಸ್ಟ್ರಾರ್‌ ಕಚೇರಿಯಲ್ಲಿ “ಕಾವೇರಿ -2′ ತಂತ್ರಾಂಶ ಅನುಷ್ಠಾನಕ್ಕೆ ಸಿದ್ಧತೆ ನಡೆಯುತ್ತಿದೆ. ಫೆಬ್ರವರಿ 2ನೇ ವಾರದಲ್ಲಿ ಆರಂಭದ ನಿರೀಕ್ಷೆ ಇದೆ. ಇದು ಆಸ್ತಿ ನೋಂದಣಿದಾರರ ಪಾಲಿಗೆ ಅತ್ಯಂತ ಉತ್ತಮ ವ್ಯವಸ್ಥೆಯಾಗಿದ್ದು, ಯಾವುದೇ ರೀತಿ ಮಧ್ಯವರ್ತಿಗಳಿಗೆ ಅವಕಾಶ ಇರುವುದಿಲ್ಲ.
– ಬಶೀರ್‌ ಅಹ್ಮದ್‌, ಸಬ್‌ ರಿಜಿಸ್ಟ್ರಾರ್‌, ಮಂಗಳೂರು ತಾ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next