Advertisement

ಮಾಸ್ತಿ ವೆಂಕಟೇಶ್‌ ಅಯ್ಯಂಗಾರ್‌ ದೇಶದ ಆಸ್ತಿ; ಎಚ್‌.ಎಸ್‌.ಪುಟ್ಟಸೋಮಪ್ಪ

06:11 PM Jul 15, 2022 | Team Udayavani |

ಹೊಳೆನರಸೀಪುರ: ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ಮಾಸ್ತಿ ವೆಂಕಟೇಶ್‌ ಅಯ್ಯಂಗಾರ್‌ ಇವರು ಕೇವಲ ಕನ್ನಡದ ಆಸ್ತಿಯಲ್ಲದೆ ದೇಶದ ಆಸ್ತಿಯಾಗಿದ್ದರು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎಚ್‌.ಎಸ್‌.ಪುಟ್ಟಸೋಮಪ್ಪ ತಿಳಿಸಿದರು.

Advertisement

ಪಟ್ಟಣದ ದಿವಂಗತ ವೀರಪ್ಪನವರ ಮಗ ವೈ.ವಿ.ಚಂದ್ರಶೇಖರ್‌ ಮನೆಯಲ್ಲಿ ಮಂಗಳವಾರ ಸಂಜೆ ಹಮ್ಮಿಕೊಂಡಿದ್ದ ದಿ.ಮಾಸ್ತಿವೆಂಕಟೇಶ್‌ ಅಯ್ಯಂಗಾರ್‌ ಇವರ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಜೊತೆಗೆ, ಕವಿಗಳಿರಬಹುದು, ಕನ್ನಡದಲ್ಲಿ ವಿಶೇಷ ಸ್ಥಾನಮಾನವನ್ನು ಗಳಿಸಿ ಶ್ರೇಷ್ಠವಾದ ಸಾಧನೆ ಮಾಡಿರುವಂತಹ ವ್ಯಕ್ತಿಗಳನ್ನು ಗುರುತಿಸಿ, ಗೌರವಿಸಿ ಅವರನ್ನು ಪ್ರತಿ ತಿಂಗಳು ಅವರ ವಿಚಾರಧಾರೆಗಳನ್ನು ಸ್ಮರಿಸುವ ಕೆಲಸ ಕಸಾಪ ಹಮ್ಮಿಕೊಂಡಿರುವುದು ಸಂತಸದ ವಿಷಯ. ಪ್ರತಿ ತಿಂಗಳೂ ಸಹ ಒಂದು ಗಂಟೆ ಸಾಹಿತ್ಯಾಸಕ್ತರು ಒಂದೆಡೆ ಸೇರಿ ಅವರ ಸಾಧನೆಗಳನ್ನು ಸ್ಮರಿಸಿಕೊಂಡಾಗ ನಮಗೂ ಸಂತಸ ಆಗುವುದರ ಜೊತೆಗೆ ಅಂತಹವರ ಆತ್ಮಕ್ಕೆ ತೃಪ್ತಿಯಾಗುವುದಲ್ಲದೆ ಪರಿಷತ್ತಿನ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದರು.

ಕನ್ನಡ ಸಾರಸ್ವತ ಲೋಕದ ಕಣ್ಣು: ಅಧ್ಯಕ್ಷತೆ ವಹಿಸಿದ್ದ ಆರ್‌.ಬಿ.ಪುಟ್ಟೇಗೌಡ ಮಾತನಾಡಿ, ಇಂದಿನ ಸಭೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿರುವವರು ಕಾರ್ಯಕ್ರಮ ದಲ್ಲಿ ಭಾಗವಹಿಸಿರುವುದು ಪ್ರಮುಖ ಅಂಶ ಎಂದು ತಿಳಿಸುತ್ತಾ ಮುಂದಿನ ದಿನಗಳಲ್ಲಿ ಹೋಬಳಿ ಘಟಕದ ಮೂಲಕ ಪ್ರತಿ ಹಳ್ಳಿಗಳಿಗೂ ಸಾಹಿತ್ಯ ಸೇವೆ ಕೊಂಡೊಯ್ಯಲಾಗುವುದರ ಜೊತೆಗೆ ಹೆಚ್ಚು ಸದಸ್ಯರುಗಳನ್ನು ನೋಂದಣಿ ಮಾಡಿಸುವುದಾಗಿ ತಿಳಿಸಿದರು. ಗೌರವ ಕಾರ್ಯದರ್ಶಿ ಕೆ. ಶಿವಕುಮಾರಾಚಾರಿ ಪ್ರಾಸ್ತಾವಿಕ ನುಡಿ ಗಳನ್ನಾಡುತ್ತಾ ಮಾಸ್ತಿಯವರು ಕನ್ನಡ ಸಾರಸ್ವತ ಲೋಕದ ಕಣ್ಣಿದ್ದ ಹಾಗೆ. ಅಂತಹವರ ಕುರಿತು ಒಂದು ವಿಚಾರ ಸಂಕಿರಣವನ್ನು ಮಾಡ್ತಾ ಇದ್ದೇವೆ.

ಜಯಂತಿ ಆಚರಣೆ ಜೂನ್‌ ಮಾಹೆಯಲ್ಲಿ ಮಾಡಲು ಸಾಧ್ಯವಾಗದ ಕಾರಣ ಅವರು ಮಾಡಿದ ಕನ್ನಡ ಸೆವೆಯನ್ನು ಗುರುತಿಸಿ ಈ ದಿನ ಆ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದರು. ಸಮಾರಂಭದಲ್ಲಿ ಹಿರಿಯ ಸಾಹಿತಿಗಳಾದ ನಾಗೇಶ್‌ ಕೌಂಡಿನ್ಯ ಮಾಸ್ತಿವೆಂಕಟೇಶ್‌ ಅಯ್ಯಂಗಾರ್‌ ಇವರ ಕೃತಿಗಳ ಬಗ್ಗೆ ಮಾತನಾಡಿದರು.

ಸಮ್ಮೇಳನದ ಮಾಜಿ ಅಧ್ಯಕ್ಷ ಗುಂಜೇವು ಅಣ್ಣಾಜಪ್ಪ, ಕಸಾಪ ಮಾಜಿ ಅಧ್ಯಕ್ಷ ಬಾ.ರಾ. ಸುಬ್ಬರಾಯ, ತಾಪಂ ಮಾಜಿ ಅಧ್ಯಕ್ಷೆ ಕೆ.ಚಂದ್ರಮತಿ, ಭಾರತ ಸೇವಾ ದಳದ ತಾಲೂಕು ಅಧ್ಯಕ್ಷ ಜಗನ್ನಾಥ್‌, ಪುರಸಭೆಯ ಮಾಜಿ ಸದಸ್ಯೆ ಲಕ್ಷ್ಮೀನಾಗರಾಜ್‌, ರೋಟರಿ ಮಾಜಿ ಅಧ್ಯಕ್ಷ ಶಿವಕುಮಾರ್‌, ಎಲೆಕ್ಟ್ರಾನಿಕ್ಸ್‌ ಉಪಕರಣಗಳ ರಿಪೇರಿ ಸಂಘದ ಅಧ್ಯಕ್ಷ ಮುರಳೀಧರ ಗುಪ್ತ ಇನ್ನು ಮುಂತಾದವರಿದ್ದರು.

Advertisement

ಕಾರ್ಯಕ್ರಮದಲ್ಲಿ ಲಕ್ಷ್ಮೀನಾಗರಾಜ್‌ ಇವರ ಪ್ರಾರ್ಥನೆಯೊಂದಿಗೆ ಚಾಲನೆ ಗೊಂಡಿತು. ಕೆ.ಶಿವಕುಮಾರಾಚಾರಿ ಕಾರ್ಯಕ್ರಮ ನಿರೂಪಿಸಿದರು. ಗೌರವ ಕಾರ್ಯದರ್ಶಿ ಮಂಜುನಾಥ ಗುಪ್ತ ಸ್ವಾಗತಿಸಿ, ಕೋಶಾಧ್ಯಕ್ಷ ಎಚ್‌.ಟಿ.ನರಸಿಂಹ ಶೆಟ್ಟಿ ವಂದಿಸಿದರು.

ಜಿಲ್ಲಾಧಿಕಾರಿಯಾಗಿಯೂ ಕಾರ್ಯನಿರ್ವಹಿಸಿದ್ದ ಮಾಸ್ತಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಳ್ಳಿ ಮೈಸೂರು ಪಿಯು ಕಾಲೇಜಿನ ಪ್ರಾಂಶುಪಾಲಾರದ ಎಚ್‌.ಎಸ್‌. ಪ್ರಭುಶಂಕರ್‌ ಮಾತನಾಡಿ, ಮಾಸ್ತಿಯವರು ಎರಡು ಶತಮಾನಗಳನ್ನು ಕಂಡ ವರು. ಇವರು 1891ಜೂನ್‌ 6ರಲ್ಲಿ ಕೋಲಾರ ಜಿಲ್ಲೆ, ಮಾಲೂರು ತಾಲೂಕಿನ ಮಾಸ್ತಿ ಗ್ರಾಮದಲ್ಲಿ ರಾಮಸ್ವಾಮಿ ಅಯ್ಯಂಗಾರ್‌ ಮತ್ತು ತಿರುಮಲಾಂಬ ದಂಪತಿಗಳ ಮಗನಾಗಿ ಜನಿಸಿದರು.

ಮೂಲತಃ ತಮಿಳಿನವರು. ಕಡು ಬಡತನದಲ್ಲೇ ತಮ್ಮ ವಿದ್ಯಾಭ್ಯಾಸವನ್ನು ಉನ್ನತ ಮಟ್ಟದವರೆಗೂ ತಲುಪಿ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುವುದರ ಜೊತೆಗೆ ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿದ ಶ್ರೇಷ್ಠ ಕವಿಯಾಗಿದ್ದವರು. ಇವರು ಸಣ್ಣಕಥೆ ಗಳ ಜನಕ ಅಂತಲೂ ಪ್ರಸಿದ್ಧಿ ಪಡೆದು ಇವರು ಬರೆದ ಚಿಕ್ಕವೀರ ರಾಜೇಂದ್ರ ಕೃತಿಗೆ 1983ರಲ್ಲಿ ಜ್ಞಾನಪೀಠ ಪ್ರಶಸ್ತಿ ಲಭಿಸಿತ್ತು.

ನಾಲ್ಕು ಸಣ್ಣಕಥೆಗಳ ಸಂಪುಟವನ್ನು ಹೊರತರುವುದರ ಜೊತೆಗೆ ಇವರು ಬರೆದ ನಾಟಕ ಕಾಕನಕೋಟೆ ಹೆಚ್ಚು ಪ್ರಸಿದ್ಧಿ ಪಡೆಯುತ್ತದೆ. 1929ರಲ್ಲಿ ಬೆಳಗಾವಿಯಲ್ಲಿ ನಡೆದ 15ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಸೇವೆ ಸಲ್ಲಿಸಿ 1986 ಜೂನ್‌ 6ರಲ್ಲಿ ದೈವಾದೀನರಾದರು ಎಂದು ತಿಳಿಸಿದರು. ಇಂತಹವರ ಸಾಧನೆ ಸ್ಮರಿಸುವುದು ಕಸಾಪ ಕರ್ತವ್ಯ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next