Advertisement

ಪ್ರಾಪರ್ಟಿ ಕಾರ್ಡ್‌: ಆಸ್ತಿ ನೋಂದಣಿ ಸರ್ವರ್‌ಗೆ ಜೋಡಿಸಲು ಕ್ರಮ

10:36 PM Apr 27, 2019 | Sriram |

ವಿಶೇಷ ವರದಿ- ಮಹಾನಗರ: ಆಸ್ತಿ ನೊಂದಣಿಗೆ ಪ್ರಾಪರ್ಟಿ ಕಾರ್ಡ್‌ ಕಡ್ಡಾಯ ಮೇ 15ರ ಬಳಿಕ ಮತ್ತೆ ಅನುಷ್ಟಾನಕ್ಕೆ ಬರುವ ಸಾಧ್ಯತೆಯ ಹಿನ್ನೆಲೆಯಲ್ಲಿ ಪ್ರಾಪರ್ಟಿಕಾರ್ಡ್‌ ಸರ್ವರ್‌ನ್ನು ಮಂಗಳೂರು ತಾಲೂಕಿನ ಆಸ್ತಿ ನೋಂದಣಿ ಕಚೇರಿಗಳ ( ಸಬ್‌ ರಿಜಿಸ್ಟ್ರಾರ್‌) ಸರ್ವರ್‌ಗಳಿಗೆ ಲಿಂಕ್‌ ಮಾಡಲು ಇಲಾಖೆ ಸಿದ್ಧತೆ ನಡೆಸಿದೆ.

Advertisement

ಪ್ರಾಯೋಗಿಕವಾಗಿ ಮೂಲ್ಕಿ ಉಪ ನೋಂದಣಿ ಕಚೇರಿಗೆ ಸರ್ವರ್‌ ಲಿಂಕ್‌ ಮಾಡಿ ವ್ಯವಸ್ಥೆಯ ಕಾರ್ಯನಿರ್ವಹಣೆಯನ್ನು ಪರಿಶೀಲಿಸಲು ನಿರ್ಧರಿಸಲಾಗಿದ್ದು, ಪ್ರಾಯೋಗಿಕ ಅಳವಡಿಕೆಗೆ ಅನುಮತಿ ಕೋರಿ ರಾಜ್ಯ ಭೂಮಾಪನ, ಭೂದಾಖಲೆಗಳು ಮತ್ತು ಸೆಟ್ಲಮೆಂಟ್‌ ಇಲಾಖಾ ಆಯುಕ್ತರಿಗೆ ಜಿಲ್ಲಾಡಳಿತ ಹಾಗೂ ಭೂಮಾಪನ ಇಲಾಖೆಯು ಪತ್ರ ಬರೆದಿದೆ.

ಫೆ. 1ರಿಂದ ಆಸ್ತಿ ನೋಂದಣಿ, ಮಾರಾಟಕ್ಕೆ ಪ್ರಾಪರ್ಟಿ ಕಾರ್ಡ್‌ ಅನ್ನು ಕಡ್ಡಾಯಗೊಳಿಸಲಾಗಿತ್ತು. ಆದರೆ ಪ್ರಾಪರ್ಟಿ ಕಾರ್ಡ್‌ ವಿತರಣೆ ವ್ಯವಸ್ಥೆಯಲ್ಲಿ ಕೆಲವು ಗೊಂದಲಗಳಿಂದಾಗಿ ರಾಜ್ಯ ಭೂಮಾಪನ, ಭೂದಾಖಲೆಗಳು, ಸೆಟ್ಲಮೆಂಟ್‌ ಇಲಾಖಾ ಆಯುಕ್ತ ಮನೀಶ್‌ ಮುದ್ಗೀಲ್‌ ಅವರು ಕಾರ್ಡ್‌ ಕಡ್ಡಾಯವನ್ನು ಮೇ 15ರ ವರೆಗೆ ಮುಂದೂಡಿದ್ದರು. ಈ ಹಿನ್ನೆಲೆಯಲ್ಲಿ ಈ ಹಿಂದಿನಂತೆ ಆವಶ್ಯ ದಾಖಲೆಗಳ ಆಧಾರದಲ್ಲಿ ಆಸ್ತಿ ನೋಂದಣಿ ಕಾರ್ಯ ಮುಂದುವರಿದಿದೆ. ಪ್ರಾಪರ್ಟಿ ಕಾರ್ಡ್‌ ವಿತರಣೆಯಲ್ಲಿ ಇರುವ ಲೋಪಗಳನ್ನು ಪರಿಹರಿಸಿಕೊಂಡು ಮೇ 15ರ ಅನಂತರ ಮತ್ತೆ ಕಡ್ಡಾಯವಾಗುವ ನಿರೀಕ್ಷೆ ಇದೆ.

ಪ್ರಾಯೋಗಿಕ ಪರೀಕ್ಷೆಗೆ ಮನವಿ
ಆಸ್ತಿ ನೋಂದಣಿ ಕಚೇರಿಗಳ ಸರ್ವರ್‌ಗಳಿಗೆ ಪ್ರಾಪರ್ಟಿ ಕಾರ್ಡ್‌ ಸರ್ವರ್‌ ಜೋಡಣೆಯಾದ ಬಳಿಕ ಮಾರಾಟ /ಖರೀದಿ ಜಾಗದ ಪ್ರಾಪರ್ಟಿಕಾರ್ಡ್‌ ನಂಬರ್‌ನ್ನು ನೋಂದಣಿ ಕಚೇರಿಯ ಸರ್ವರ್‌ನಲ್ಲಿ ನಮೂದಿಸಿದರೆ ಅದಕ್ಕೆ ಸಂಬಂಧಪಟ್ಟ ಎಲ್ಲ ದಾಖಲೆಗಳು, ವಿವರಗಳು ಲಭ್ಯವಾಗುತ್ತದೆ. ವಿನಾಯತಿ ಗಡುವು ಮುಕ್ತಾಯಗೊಳ್ಳುವ 15 ದಿನಗಳ ಮೊದಲೇ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸಿದರೆ ಅದರಲ್ಲಿರುವ ಲೋಪಗಳನ್ನು ಮುಂಚಿತವಾಗಿ ಸರಿಪಡಿಸಲು ಸಾಧ್ಯವಾಗುತ್ತದೆ. ಜಿಲ್ಲಾಡಳಿತ ಪ್ರಾಯೋಗಿಕ ಪರೀಕ್ಷೆಗೆ ಅನುಮತಿ ಕೋರಿದೆ.

ಹೊಸ ಸರ್ವರ್‌ಗಳ ಅಳವಡಿಕೆ
ಪ್ರಾಪರ್ಟಿ ಕಾರ್ಡ್‌ ವಿತರಣ ಪ್ರಕ್ರಿಯೆಯನ್ನು ಬೆಂಗಳೂರಿನಲ್ಲಿ ಇಲಾಖೆಯ ಹೊಸ ಸರ್ವರ್‌ಗೆ ಜೋಡಿಸಲಾಗಿದೆ. ಮಂಗಳೂರು ಕಚೇರಿಯಲ್ಲಿ ಕರಡು ಪ್ರಾಪರ್ಟಿ ಕಾರ್ಡ್‌ನ್ನು ಮಾತ್ರ ಮುದ್ರಿಸಿ ಆಸ್ತಿ ಮಾಲಕರಿಗೆ ನೀಡಲು ಅವಕಾಶವಿದೆ. ಆದರೆ ಅಂತಿಮ ಕಾರ್ಡ್‌ ಬೆಂಗಳೂರಿನ ಕೇಂದ್ರ ಸರ್ವರ್‌ನಿಂದಲೇ ಬರಬೇಕು. ಕೇಂದ್ರ ಸರ್ವರ್‌ನಲ್ಲಿ ಸಮಸ್ಯೆಯಿಂದಾಗಿ ಪ್ರಕ್ರಿಯೆಯಲ್ಲಿ ವಿಳಂಬವಾಗುತ್ತಿತ್ತು. ಹೊಸ ಸರ್ವರ್‌ಗೆ ಜೋಡಣೆ ಮಾಡಿರುವುದರಿಂದ ಈ ಸಮಸ್ಯೆ ನಿವಾರಣೆಯಾಗಿದೆ. ಇದೇ ರೀತಿಯಲ್ಲಿ ಮಂಗಳೂರಿನ ಕಚೇರಿಯಲ್ಲೂ ಹೊಸ ಸರ್ವರ್‌ ಅಳವಡಿಸಲಾಗುತ್ತಿದೆ.
ಕಂಪ್ಯೂಟರ್‌ಗಳ ಸಂಖ್ಯೆಯನ್ನು 45ಕ್ಕೇರಿಸಲಾಗಿದೆ. 1 ಹೆಚ್ಚು ಸಾಮರ್ಥ್ಯದ, 3 ಮಧ್ಯಮ ಸಾಮಾರ್ಥ್ಯದ ಸ್ಕಾ ನರ್‌ಗಳು, 5 ಪ್ರಿಂಟರ್‌ಗಳನ್ನು ಅಳವಡಿಸಲಾಗಿದೆ. ಇದಲ್ಲದೆ ಬಹುಮಹಡಿ ವಸತಿ ಸಮುಚ್ಚಯಗಳ ಆಸ್ತಿ ನೋಂದಣಿಯಲ್ಲಿ ಇದ್ದ ಬಹುತೇಕ ಸಮಸ್ಯೆಗಳು ಪರಿಹಾರಗೊಂಡಿವೆ.

Advertisement

ವಿತರಣೆ ಪ್ರಕ್ರಿಯೆ ಇಳಿಕೆಯಾಗಿಲ್ಲ
ಪ್ರಾಪರ್ಟಿ ಕಾರ್ಡ್‌ನ್ನು ಆಸ್ತಿ ನೋಂದಣಿಗೆ ಕಡ್ಡಾಯಗೊಳಿಸಿರುವುದನ್ನು ತಾತ್ಕಾಲಿಕವಾಗಿ ಮುಂದೂಡಿಕೆ ಮಾಡಿದ್ದರೂ ವಿತರಣೆಯಲ್ಲಿ ಇಳಿಕೆ ಆಗಿಲ್ಲ. ದಿನಂಪ್ರತಿ ಸರಾಸರಿ 60 ಪಕ್ಕಾ ಕಾರ್ಡ್‌ಗಳು ಹಾಗೂ ಸುಮಾರು 70ರಷ್ಟು ಕರಡು ಕಾರ್ಡ್‌ಗಳನ್ನು ವಿತರಿಸಲಾಗುತ್ತಿದೆ. ಆದರೆ ಆಸ್ತಿ ದಾಖಲೆಗಳ ಸಂಗ್ರಹದಲ್ಲಿ ಸ್ವಲ್ಪ ಇಳಿಕೆಯಾಗಿದೆ ಎಂದು ಇಲಾಖಾ ಮೂಲಗಳು ತಿಳಿಸಿವೆ. ಎ. 26ರ ವರೆಗೆ ಒಟ್ಟು 26,428 ಪಕ್ಕಾ ಕಾರ್ಡ್‌ಗಳನ್ನು ಹಾಗೂ 39,321 ಕರಡು ಕಾರ್ಡ್‌ಗಳನ್ನು ವಿತರಿಸಲಾಗಿದೆ. 86,333 ಆಸ್ತಿ ದಾಖಲೆಗಳನ್ನು ಸಂಗ್ರಹಿಸಲಾಗಿದ್ದು 86,316 ಆಸ್ತಿ ದಾಖಲೆಗಳನು ಸ್ಕ್ಯಾನ್ ಮಾಡಲಾಗಿದೆ. ನಗರದಲ್ಲಿ ಪ್ರಸ್ತುತ ಒಟ್ಟು 1,53,081 ಆಸ್ತಿಗಳಿವೆ. ಆಸ್ತಿಗಳು ವಿಭಜನೆಗೊಂಡು ಪ್ರತ್ಯೇಕವಾದಂತೆ ಆಸ್ತಿ ಸಂಖ್ಯೆಗಳು ಹೆಚ್ಚುತ್ತಾ ಹೋಗುತ್ತವೆ.

ಪ್ರಾಪರ್ಟಿ ಕಾರ್ಡ್‌ ವಿತರಣೆ ನಿಂತಿಲ್ಲ
ಆಸ್ತಿ ನೊಂದಣಿಗೆ ಪ್ರಾಪರ್ಟಿ ಕಾರ್ಡ್‌ ಕಡ್ಡಾಯ ಗೊಳಿಸಿರುವುದನ್ನು ತಾತ್ಕಾಲಿ ಕವಾಗಿ ಮುಂದೂಡಿದರೂ ವಿತರಣೆ ಕಾರ್ಯದಲ್ಲಿ ಯಾವುದೇ ಪರಿಣಾಮವಾಗಿಲ್ಲ. ಪ್ರಾಪರ್ಟಿ ಕಾರ್ಡ್‌ ಸರ್ವರ್‌ ಅನ್ನು ನೋಂದಣಿ ಕಚೇರಿ ಸರ್ವರ್‌ಗೆ ಲಿಂಕ್‌ ಮಾಡುವ ಕಾರ್ಯ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರಕ್ರಿಯೆಗಳು ಸಾಗಿದೆ.
 - ಪ್ರಸಾದಿನಿ,
ಭೂಮಾಪನ ಇಲಾಖೆ ಸಹಾಯಕ ನಿರ್ದೇಶಕಿ

Advertisement

Udayavani is now on Telegram. Click here to join our channel and stay updated with the latest news.

Next