ಮಂಗಳೂರು: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ ಆರೋಪದ ಮೇಲೆ 2009ರಲ್ಲಿ ಲೋಕಾಯುಕ್ತ ಪೊಲೀಸರಿಂದ ದಾಳಿಗೆ ಒಳಗಾಗಿ ಮಂಗಳೂರು ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಶಿಕ್ಷೆಗೆ ಒಳಗಾಗಿದ್ದ ಪ್ರಕರಣವನ್ನು ಉಚ್ಚ ನ್ಯಾಯಾಲಯ ಖುಲಾಸೆಗೊಳಿಸಿ ಆದೇಶ ಮಾಡಿದೆ.
ಬೆಳ್ತಂಗಡಿ ಪೊಲೀಸ್ ವೃತ್ತ ನಿರೀಕ್ಷಕರಾಗಿದ್ದ ಗಂಗಿ ರೆಡ್ಡಿ ಅವರ ಮೇಲೆ 2009ರ ಆ. 27ರಂದು ಆಗಿನ ಲೋಕಾಯುಕ್ತ ಡಿವೈಎಸ್‌ಪಿ ಸದಾನಂದ ವರ್ಣೇಕರ್ ಮತ್ತು ಅವರ ತಂಡ ದಾಳಿ ನಡೆಸಿ ಹಲವು ದಾಖಲೆಗಳನ್ನು ವಶಪಡಿಸಿ ಕೇಸು ದಾಖಲಿಸಿತ್ತು. ವೇತನ ಆದಾಯ ಹೊರತುಪಡಿಸಿ 19 ಲ.ರೂ. ಹೆಚ್ಚಿನ ಆಸ್ತಿ ಪತ್ತೆಯಾದ ಬಗ್ಗೆ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ಪೂರ್ಣಗೊಳಿಸಿದ ಲೋಕಾಯುಕ್ತ ಡಿವೈಎಸ್‌ಪಿ ಎಂ. ವಿಟಲ್‌ದಾಸ್ ಪೈ ಅವರು ಗಂಗಿ ರೆಡ್ಡಿ ವಿರುದ್ದ ಆರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಲೋಕಾಯುಕ್ತ ವಿಶೇಷ ನ್ಯಾಯಾಲಯ ಆರೋಪ ಸಾಬೀತಾಗಿದೆ ಎಂದು ಅವರಿಗೆ 4 ವರ್ಷ ಸಾದಾ ಸಜೆ ಮತ್ತು 5 ಲ.ರೂ. ದಂಡ ವಿಧಿಸಿ 2020ರಲ್ಲಿ ಆ. 27ರಲ್ಲಿ ತೀರ್ಪು ನೀಡಿತ್ತು. ಆದರೆ ಕೃಷಿ ಆದಾಯ, ಊರಿನಲ್ಲಿರುವ ಕಟ್ಟಡಗಳ ಬಾಡಿಗೆ, ಕುಟುಂಬದ ಆದಾಯದಲ್ಲಿ ದೊರೆತ ಚಿನ್ನ ಮಾರಾಟದ ಹಣದ ಲೆಕ್ಕಾಚಾರವನ್ನು ಲೋಕಾಯುಕ್ತ ನ್ಯಾಯಾಲಯ ತನಿಖೆ ವೇಳೆ ಪರಿಗಣಿಸಿರಲಿಲ್ಲ ಎಂಬ ಅಂಶವನ್ನು ಹೈಕೋರ್ಟ್ ಮಾನ್ಯ ಮಾಡಿ ಶಿಕ್ಷೆಯನ್ನು ರದ್ದುಗೊಳಿಸಿದೆ. ಗಂಗಿರೆಡ್ಡಿ ಅವರ ಪರವಾಗಿ ಪರಮೇಶ್ವರ ಎನ್. ಹೆಗ್ಡೆ , ಜಿನೇಂದ್ರ ಅವರು ವಾದ ಮಂಡಿಸಿದ್ದರು.