ಧಾರವಾಡ: ರಜೆ ಕೇಳಿದಕ್ಕಾಗಿ ಡಿಪೋ ಮ್ಯಾನೇಜರ್ ನಿಂದ ಹಲ್ಲೆಗೊಳಗಾಗಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಂಡಕ್ಟರ್ ಮಂಜುನಾಥ ಉಪ್ಪೇರಿ ಅವರನ್ನು ವಾಯವ್ಯ ಸಾರಿಗೆ ವ್ಯವಸ್ಥಾಪಕ ನಿರ್ದೇಶಕ ಪ್ರಭು ನಾಯಕ ಹಾಗೂ ಅಧ್ಯಕ್ಷ ಸದಾನಂದ ಡಂಗನವರ ಮಂಗಳವಾರ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ಜಿಲ್ಲಾಸ್ಪತ್ರೆಗೆ ತೆರಳಿ ಮಂಜುನಾಥ ಜೊತೆ ಘಟನೆ ಕುರಿತು ಮಾಹಿತಿ ಪಡೆದ ಇಬ್ಬರೂಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ, ಸೂಕ್ತ ಚಿಕಿತ್ಸೆ ನೀಡುವಂತೆ ಜಿಲ್ಲಾಸ್ಪತ್ರೆ ವೈದ್ಯರಿಗೆ ಸೂಚನೆ ನೀಡಿದರು. ತಪ್ಪು ಮಾಡಿದವರ ವಿರುದ್ದ ಕ್ರಮ ಕೈಗೊಳ್ಳುವುದಾಗಿ ಹಲ್ಲೆಗೊಳಗಾಗಿರುವ ಮಂಜುನಾಥನಿಗೆ ಭರವಸೆ ನೀಡಿದರು.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ವಾಯವ್ಯ ಸಾರಿಗೆ ವ್ಯವಸ್ಥಾಪಕ ನಿರ್ದೇಶಕ ಪ್ರಭು ನಾಯಕ್, ನಾನು ಈಗಷ್ಟೇ ಅಧಿಕಾರ ವಹಿಸಿಕೊಂಡಿದ್ದು, ಈ ಬಗ್ಗೆ ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಳ್ಳುತ್ತೇನೆ. ಈ ರೀತಿಯ ಘಟನೆ ಮುಂದಿನ ದಿನಗಳಲ್ಲಿ ಮರುಕಳಿಸದಂತೆ ಆಡಳಿತದಲ್ಲಿ ಸುಧಾರಣೆ ತರಲು ಪ್ರಯತ್ನಿಸುವುದಾಗಿ ಹೇಳಿದರು.
ರಜೆ ಕೇಳಿದ ಮಾತ್ರಕ್ಕೆ ಕಂಡಕ್ಟರ್ ಕೈ ಮುರಿಯುವ ರೀತಿ ಹಲ್ಲೆ ಮಾಡಿದ್ದು ತಪ್ಪು. ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ, ಡಿಪೋ ಮ್ಯಾನೇಜರ್ ವಿರುದ್ಧ 2-3 ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಸದಾನಂದ ಡಂಗನವರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
ಸಚಿವರ ಮನೆಯಲ್ಲಿ ಸಭೆ: ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಬಳಿಕ ಸಚಿವರ ಮನೆಗೆ ತೆರಳಿದ ನಾಯಕ ಮತ್ತು ಡಂಗನವರ ಸಚಿವರೊಂದಿಗೆ ಚರ್ಚಿಸಿದ್ದು, ಈ ವೇಳೆ ಸಚಿವ ವಿನಯ ಕುಲಕರ್ಣಿ, ಹಲ್ಲೆ ಮಾಡಿರುವ ಡಿಪೋ ಮ್ಯಾನೇಜರ್ ದೀಪಕ ಜಾಧವ ಅವರನ್ನು ಅಮಾನತು ಮಾಡುವಂತೆ ಸೂಚಿಸಿದ್ದಾರೆ.
ಇದಕ್ಕೆ ಸ್ಪಂದಿಸಿದ ಪ್ರಭು ನಾಯಕ, ಶೀಘ್ರವೇ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಈ ಕುರಿತು “ಉದಯವಾಣಿ’ಯೊಂದಿಗೆ ಮಾತನಾಡಿದ ವಾಯವ್ಯ ಸಾರಿಗೆ ಸಂಸ್ಥೆ ನಿರ್ದೇಶಕ ಮನೋಜ ಕರ್ಜಗಿ, ಡಿಪೋ ಮ್ಯಾನೇಜರ್ ವಿರುದ್ಧ ಕ್ರಮ ಶತಸಿದ್ಧ. ಇದರಲ್ಲಿ ಎರಡು ಮಾತಿಲ್ಲ.
ಆದರೆ ಕಾನೂನಾತ್ಮಕವಾಗಿ ಅಮಾನತು ಮಾಡಲು ಕೆಲ ಪ್ರಕ್ರಿಯೆಗಳು ಆಗಬೇಕಿದ್ದು, ಅದಕ್ಕಾಗಿ ತಯಾರಿ ನಡೆದಿದೆ. ಈಗಂತೂ ದೀಪಕ ಜಾಧವ ಅವರನ್ನು ಡಿಪೋದಲ್ಲಿ ಕಾರ್ಯ ಮಾಡದಂತೆ, ವರ್ಗಾವಣೆ ಮಾಡಲು ಸೂಚಿಸಿದ್ದು, ಈ ಬಗ್ಗೆ ವರದಿ ಬಂದ ಬಳಿಕ ಅಮಾನತು ಮಾಡಲು ನಿರ್ಧರಿಸಲಾಗಿದೆ.
ಸ್ಟಾಫ್ ಆ್ಯಂಡ್ ವರ್ಕರ್ಸ್ ಯೂನಿಯನ್ ಅವರೊಂದಿಗೆ ಚರ್ಚಿಸಿ, ಕ್ರಮ ಕೈಗೊಳ್ಳುವ ಭರವಸೆ ನೀಡಲಾಗಿದೆ. ಈಗಾಗಲೇ ಈ ಕುರಿತಂತೆ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದ್ದಾರೆ.