Advertisement

ಜಾಲತಾಣದಲ್ಲಿ ಪ್ರಚಾರಕ್ಕೆಅನುಮತಿ ಕಡ್ಡಾಯ: ಡಿಸಿ

01:13 PM Apr 10, 2018 | |

ಬಳ್ಳಾರಿ: ವಿಧಾನಸಭೆ ಚುನಾವಣೆ ನಿಮಿತ್ತ ಫೇಸ್‌ಬುಕ್‌, ವಾಟ್ಸ್‌ ಆ್ಯಪ್‌, ಟ್ವೀಟರ್‌, ಯೂಟ್ಯೂಬ್‌ಗಳಂತಹ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ನಡೆಸುವ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸುವವರು ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಮತ್ತು ಕಣ್ಗಾವಲು ಸಮಿತಿಯಿಂದ ಮಾಧ್ಯಮ ಪ್ರಮಾಣೀಕರಣ ಪತ್ರ ಪಡೆಯುವುದು ಕಡ್ಡಾಯ. ಒಂದು ವೇಳೆ ಉಲ್ಲಂಘಿಸಿ ಪ್ರಚಾರ ಮಾಡಿದರೆ, ಚುನಾವಣಾ ನೀತಿ ಸಂಹಿತೆ, ಐಟಿ ಕಾಯ್ದೆ ಉಲ್ಲಂಘನೆಯಡಿ ಸಂಬಂಧಿಸಿದವರ ವಿರುದ್ಧ ಕಠಿಣ
ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ| ವಿ.ರಾಮ್‌ ಪ್ರಸಾತ್‌ ಮನೋಹರ್‌ ಎಚ್ಚರಿಸಿದ್ದಾರೆ.

Advertisement

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಮತ್ತು ಕಣ್ಗಾವಲು ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಕಡ್ಡಾಯವಾಗಿ ಅರ್ಜಿ ನಮೂನೆ-26 ಅಡಿ ತಮ್ಮ ಸಾಮಾಜಿಕ ಜಾಲತಾಣಗಳ ಅಕೌಂಟ್‌ ಮಾಹಿತಿ ನಮೂದಿಸಬೇಕು. ಪಕ್ಷಗಳು ಸಹ ತಮ್ಮ ಅಕೌಂಟ್‌ ನಂಬರ್‌ ಗಳ ಮಾಹಿತಿ ಒದಗಿಸಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಪೋಸ್ಟ್‌ ಮಾಡುವುದಕ್ಕಿಂತ ಮುಂಚೆ ಮಾಧ್ಯಮ ಪ್ರಮಾಣೀಕರಣ ಮತ್ತು ಕಣ್ಗಾವಲು ಸಮಿತಿ (ಎಂಸಿಎಂಸಿ) ಗೆ ಪೋಸ್ಟ್‌ ಮಾಡುವ ವಿನ್ಯಾಸವುಳ್ಳ ಅಂಶ, ಅದಕ್ಕೆ ತಗುಲಿದ ಹಾಗೂ ತಗಲುವ ವೆಚ್ಚ ಸೇರಿದಂತೆ ಇನ್ನೀತರ ಅಂಶಗಳನ್ನು ಸಲ್ಲಿಸಬೇಕು. ಅದನ್ನು ಸಮಿತಿ ಪರಿಶೀಲಿಸಿ ಸಂಖ್ಯೆಯೊಂದನ್ನು ನೀಡಿ ಪ್ರಮಾಣೀಕರಣ ಪ್ರಮಾಣಪತ್ರ ನೀಡಲಿದೆ. ಅದನ್ನು ಮಾತ್ರ ಪ್ರಚಾರ ಮಾಡಬೇಕು. ಅದನ್ನು ಬಿಟ್ಟು ಯಾವುದೇ ಕಾರಣಕ್ಕೂ ಅನುಮತಿ ಪಡೆಯದೇ ಹಾಗೆಯೇ ಪ್ರಚಾರ ಮಾಡಿದ್ದಲ್ಲಿ ಗ್ರೂಪ್‌ ಅಡ್ಮಿನ್‌, ಶೇರ್‌ ಮಾಡಿದವರು ಹಾಗೂ ಅಭ್ಯರ್ಥಿಗಳ ಮೇಲೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಅಡಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿ ಪ್ರಚಾರ ನಡೆಸುವುದನ್ನು ಎಂಸಿಎಂಸಿ ಪರಿಶೀಲನೆ ನಡೆಸಲಿದೆ. ಇದಕ್ಕೆ ಸಂಬಂಧಿಸಿದ ದೂರುಗಳನ್ನು ಜಿಲ್ಲಾ ದೂರು ನಿರ್ವಹಣಾ ಕೋಶಕ್ಕೆ ಸಲ್ಲಿಸಬಹುದಾಗಿದೆ.

ಜಾಹೀರಾತು ಪ್ರಕಟಣೆಗೂ ಪ್ರಮಾಣೀಕರಣ: ರಾಜಕೀಯ ಪಕ್ಷಗಳ ಹಾಗೂ ಅಭ್ಯರ್ಥಿಗಳ ಜಾಹೀರಾತುಗಳು ಮಾಧ್ಯಮಗಳಲ್ಲಿ ಪ್ರಕಟಣೆ ಮಾಡುವುದಕ್ಕಿಂತ ಮುಂಚೆ ಪ್ರಮಾಣೀಕರಣ ಪತ್ರ ಕಡ್ಡಾಯ. ಹಾಗೆಯೇ ಪ್ರಕಟಿಸಿದ್ದಲ್ಲಿ ಅಭ್ಯರ್ಥಿಯ ಖರ್ಚುವೆಚ್ಚಕ್ಕೆ ಆ ಜಾಹೀರಾತಿನ ಹಣ ಸೇರಿಸುವುದರ ಜತೆಗೆ ಅವರ ಮೇಲೆ ಹಾಗೂ ಪತ್ರಿಕೆಯ ಮೇಲೆ ನೀತಿ ಸಂಹಿತೆ ಉಲ್ಲಂಘನೆ ಅಡಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಎಂಸಿಎಂಸಿ ಉಪಸಮಿತಿ ಸ್ಥಾಪನೆ: ಅಭ್ಯರ್ಥಿಗಳು, ರಾಜಕೀಯ ಪಕ್ಷಗಳ ಜಾಹೀರಾತು ಪ್ರಮಾಣೀಕರಣಕ್ಕೆ ಸಂಬಂದಿಸಿದಂತೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ವಿಧಾನಸಭಾ ಕ್ಷೇತ್ರವಾರು ರಿಟರ್ನಿಂಗ್‌ ಆಫಿಸರ್‌ ನೇತೃತ್ವದಲ್ಲಿ ಎಂಸಿಎಂಸಿ ಉಪಸಮಿತಿ ಸ್ಥಾಪಿಸಲು ಡಿಸಿ ರಾಮ್‌ ಪ್ರಸಾತ್‌ ಸೂಚಿಸಿದರು.

Advertisement

ಕೂಡಲೇ ಎಲ್ಲ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳು ಎಂಸಿಎಂಸಿ ಉಪಸಮಿತಿ ರಚಿಸಬೇಕು. ಅಲ್ಲಿ ಶಿರಸ್ತೆದಾರ್‌ ದರ್ಜೆಯ ಸಿಬ್ಬಂದಿಯೊಬ್ಬರನ್ನು ನೋಡಲ್‌ ಅಧಿಕಾರಿ ಮತ್ತು ಇಬ್ಬರು ಸಿಬ್ಬಂದಿ ನಿಯೋಜಿಸಬೇಕು. ತಮ್ಮ ವಿಧಾನಸಭಾ ಕ್ಷೇತ್ರದಲ್ಲಿರುವ ಕೇಬಲ್‌ಚಾನಲ್‌ಗ‌ಳ ಮೇಲೆ ಹದ್ದಿನ ಕಣ್ಣಿಟ್ಟು ಪೇಯ್ಡ ನ್ಯೂಸ್‌ ಪರಿಶೀಲಿಸಿ, ಜಿಲ್ಲಾ ಎಂಸಿಎಂಸಿ ಸಮಿತಿಗೆ ಪ್ರತಿನಿತ್ಯ ವರದಿ ನೀಡಬೇಕು ಎಂದು ಹೇಳಿದರು.

ಎಂಸಿಎಂಸಿ ಸಮಿತಿಯ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದರು. ಜಿಲ್ಲಾ ಎಂಸಿಎಂಸಿ ಸಮಿತಿ ನೋಡಲ್‌ ಅಧಿಕಾರಿ ಬಿ.ಕೆ. ರಾಮಲಿಂಗಪ್ಪ, ಸಮಿತಿ ಸದಸ್ಯ ಡಿಯುಡಿಸಿ ಎಇಇ ಬಿ.ಕಾಳಪ್ಪ, ಡಿಯುಡಿಸಿ ವ್ಯವಸ್ಥಾಪಕ ಚಂದ್ರನಾಯಕ, ಪತ್ರಕರ್ತರಾದ ವೀರಭದ್ರಗೌಡ, ಎನ್‌.ಎಸ್‌. ಸುಭಾಷ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next