Advertisement

ಒಳನಾಡು ಮೀನುಗಾರಿಕೆಗೆ ಉತ್ತೇಜನ: ಸಚಿವ ಅಂಗಾರ

11:04 PM Aug 17, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿ ಒಳನಾಡು ಮೀನುಗಾರಿಕೆಗೆ ಉತ್ತೇಜನ ನೀಡಲು ಕೇಂದ್ರ ಸರಕಾರದ ಮತ್ಸé ಸಂಪದ ಕಾರ್ಯಕ್ರಮದ ಸಹಕಾರದಿಂದ ಸಮಗ್ರ ಕ್ರಿಯಾ ಯೋಜನೆ ರೂಪಿಸಲಾಗಿದೆ ಎಂದು ಮೀನುಗಾರಿಕೆ ಸಚಿವ ಅಂಗಾರ ತಿಳಿಸಿದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯದ ಹಲವೆಡೆ ಮೀನು ಮರಿ ಉತ್ಪಾದನ ಕೇಂದ್ರ ಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು. ಈ ಹಿಂದೆ ತಮಿಳುನಾಡು, ಗುಜರಾತ್‌ ಸೇರಿ ಹೊರ ರಾಜ್ಯಗಳಿಂದ ಮೀನು ಮರಿ ಆಮದು ಮಾಡಿಕೊಳ್ಳಬೇಕಿತ್ತು. ಇದನ್ನು ತಪ್ಪಿಸಿ ರಾಜ್ಯದಲ್ಲೇ ಆಯಾ ಜಿಲ್ಲೆಗಳಲ್ಲಿ ಬೇಡಿಕೆ ಇರುವ ಸ್ಥಳೀಯ ತಳಿಗಳಿಗೆ ಆದ್ಯತೆ ನೀಡಲು ತೀರ್ಮಾನಿಸಲಾಗಿದೆ. ಮೀನು ಮರಿ ಉತ್ಪಾದನ ಕೇಂದ್ರಗಳ ಪುನಶ್ಚೇತನಕ್ಕೂ ಕ್ರಮ ಕೈಗೊಳ್ಳಲಾಗಿದ್ದು, ಪ್ರತೀ ಜಿಲ್ಲೆಯಲ್ಲೂ ಮೀನು ಮರಿ ಉತ್ಪಾದನ ಕೇಂದ್ರ ತೆರೆಯಲಾಗುವುದು ಎಂದು ಹೇಳಿದರು.

ಮೀನುಗಾರಿಕೆ ಅಭಿವೃದ್ದಿ ನಿಗಮದಿಂದ ಮೀನು ಊಟ ಕೇಂದ್ರಗಳನ್ನು ರಾಜ್ಯಾದ್ಯಂತ ತೆರೆಯಲು ಉದ್ದೇಶಿಸಲಾಗಿದ್ದು ಮೀನು ಊಟ ಕೇಂದ್ರ ಅಥವಾ ಮಳಿಗೆಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪಿಸಲು ತೀರ್ಮಾನಿಸಲಾಗಿದೆ ಎಂದರು.

ಕರಾವಳಿಯಲ್ಲಿ ಮಾರುಕಟ್ಟೆಗೆ ಉತ್ತೇಜನ
ಕರಾವಳಿ ಭಾಗದಲ್ಲಿ ಮೀನು ಉತ್ಪಾದನೆಯಾದರೂ ಸೂಕ್ತ ಮಾರುಕಟ್ಟೆ ಇಲ್ಲದಂತಾಗಿದೆ. ಈ ಕೊರತೆ ನೀಗಿಸಲು ಕ್ರಮ ಕೈಗೊಳ್ಳಲಾಗಿದೆ. ಬಂಟ್ವಾಳ, ಸುಳ್ಯ, ಪುತ್ತೂರು, ಸೋಮವಾರ ಪೇಟೆ, ಮಡಿಕೇರಿ ಮಾರ್ಗದಲ್ಲಿ ಪೈಲಟ್‌ ಯೋಜನೆಯಾಗಿ ಮೀನು ಪೂರೈಕೆ ಮಾಡಲು ಯೋಜನೆ ರೂಪಿಸಲಾಗಿದೆ ಎಂದು ಸಚಿವರು ಹೇಳಿದರು.

ದ.ಕ. ಜಿಲ್ಲೆಯಲ್ಲಿ ಔಷಧ ಗುಣವುಳ್ಳ ಕೆಲವು ತಳಿಯ ಮೀನಿಗೆ ಬೇಡಿಕೆ ಇದ್ದು ಇಲಾಖೆ ಅಧಿಕಾರಿಗಳಿಗೆ ಆ ಮೀನು ಮರಿ ಉತ್ಪಾದನೆಗೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಕಡಲ ಅಲೆ ಅಪ್ಪಳಿಸುವುದು ತಪ್ಪಿಸಲು ಉಳ್ಳಾಲದ ಬೆಟ್ಟಂಪಾಡಿ, ಬ್ರಹ್ಮಾವರದ ಮರವಂತೆಯಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ ಎಂದು ಸಚಿವ ಅಂಗಾರ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next