Advertisement
ಟು-ಸ್ಟ್ರೋಕ್ ಆಟೋಗಳನ್ನು ಗುಜರಿಗೆ ಹಾಕುವ ಚಾಲಕರಿಗೆ ಹೊಸ ಆಟೋ ಖರೀದಿಗೆ ಈ ಹಿಂದೆ 30 ಸಾವಿರ ರೂ. ಸಬ್ಸಿಡಿ ನೀಡಲಾಗುತ್ತಿತ್ತು. ಆದರೆ, ಇದಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಪರಿಣಾಮ ಯೋಜನೆ ನನೆಗುದಿಗೆ ಬಿದ್ದಿತ್ತು. ಈಗ ಅದನ್ನು ಒಂದೂವರೆ ಲಕ್ಷ ರೂ.ಗೆ ಹೆಚ್ಚಿಸಲು ಚಿಂತನೆ ನಡೆದಿದ್ದು, ಈ ಸಂಬಂಧ ಸಾರಿಗೆ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಆದರೆ, ಹೊಸಆಟೋ ಕಡ್ಡಾಯವಾಗಿ ವಿದ್ಯುತ್‌ಚಾಲಿತ (ಎಲೆಕ್ಟ್ರಿಕ್) ಆಗಿರಬೇಕು ಎಂದೂ ಹೇಳಿದೆ. ಇದಲ್ಲದೆ, ಉಳಿದ ಆಟೋ ಚಾಲಕರಿಗೂ ಇನ್ನೆರಡು ಆಫರ್‌ಗಳನ್ನು ಸರ್ಕಾರ ನೀಡಲು ನಿರ್ಧರಿಸಿದೆ. ಆ ಪೈಕಿ ಒಂದು ಪ್ರಸ್ತುತ ಇರುವ ಎಲ್‌ಪಿಜಿ ಆಧಾರಿತ ನಾಲ್ಕು ಸ್ಟ್ರೋಕ್ ಆಟೋಗಳನ್ನು ಎಲೆಕ್ಟ್ರಿಕ್ ಆಟೋ ಗಳಾಗಿ ಪರಿವರ್ತಿಸಲು 1 ಲಕ್ಷ ಹಾಗೂ ಹೊಸದಾಗಿ ಎಲೆಕ್ಟ್ರಿಕ್ ಆಟೋಗಳನ್ನು ಖರೀದಿಸುವವರಿಗೆ 1.25 ಲಕ್ಷ ರೂ. ಸಬ್ಸಿಡಿ ನೀಡಲು ಪ್ರಸ್ತಾವನೆ ಸಲ್ಲಿಕೆಯಾಗಿದೆ.
Related Articles
Advertisement
ಈ ಬಾರಿ ಚಾಲಕರ ಮನವೊಲಿಸಿಯೇ ಸಬ್ಸಿಡಿ ನಿಗದಿಪಡಿಸಲಾಗಿದ್ದು, ಗೊಂದಲ ಅಥವಾ ನೀರಸ ಪ್ರತಿಕ್ರಿಯೆಗೆ ಅವಕಾಶ ಇರುವುದಿಲ್ಲ’ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ವಿಶ್ವಾಸ ವ್ಯಕ್ತಪಡಿಸಿದರು. ಹಿಂದೆ ನಗರದಲ್ಲಿನ ಸುಮಾರು 20 ಸಾವಿರ ಟು-ಸ್ಟ್ರೋಕ್ ಆಟೋಗಳನ್ನು ಗುಜರಿಗೆ ಹಾಕುವ ಗುರಿ ಹೊಂದಲಾಗಿತ್ತು. ಇದಕ್ಕೆ ಬದಲಾಗಿ 30 ಸಾವಿರ ರೂ. ಸಬ್ಸಿಡಿ ನೀಡಲಾಗುತ್ತಿತ್ತು. ಇದಕ್ಕಾಗಿ ಪೀಣ್ಯ, ಗೊರಗುಂಟೆಪಾಳ್ಯ, ನೆಲಮಂಗಲದಲ್ಲಿ ಗುಜರಿ ಘಟಕಗಳನ್ನು ತೆರೆದು, ಮೊದಲ ವರ್ಷ ಸಬ್ಸಿಡಿಗಾಗಿ 30 ಕೋಟಿ ರೂ. ಮೀಸಲಿಟ್ಟಿತ್ತು. ಆದರೆ, ಬೆರಳೆಣಿಕೆಯಷ್ಟು ಮಾತ್ರ ಆಟೋ ಚಾಲಕರು ಇದಕ್ಕಾಗಿ ಮುಂದೆಬಂದಿದ್ದರು. ಹೀಗಾಗಿ, ಆ ಯೋಜನೆಯೇ ನಂತರದಲ್ಲಿ ಗುಜರಿ ಸೇರಿತ್ತು.
ಸಬ್ಸಿಡಿ ವಿಧಾನ ಸರಳವಾಗಲಿ: ಪರಿಸರ ಸ್ನೇಹಿ ದೃಷ್ಟಿಯಿಂದ ಸರ್ಕಾರದ ಕ್ರಮ ಸ್ವಾಗತಾರ್ಹ. ಆದರೆ, ಅದು ನೀಡುವ ಸಬ್ಸಿಡಿ ಪಡೆಯಲು ಫಲಾನುಭವಿಗಳು ಹರಸಾಹಸ ಮಾಡಬೇಕಾಗುತ್ತದೆ. ಅಷ್ಟಕ್ಕೂ ಆ ಹಣ ಆಟೋ ತಯಾರಿಕೆ ಅಥವಾ ವಿತರಕನಿಗೆ ಹೋಗುತ್ತದೆ. ಉಳಿದ ಹಣ ತೆಗೆದುಕೊಂಡು ಹೋದಾಗ, ಫಲಾನುಭವಿಗೆ ಹೊಸ ಆಟೋ ಸಿಗುತ್ತದೆ. ಇದು ಸರಿಯಾದ ಕ್ರಮ ಅಲ್ಲ. ಸೌಲಭ್ಯ ಪಡೆಯುವ ವಿಧಾನ ಸರಳವಾಗಿರಬೇಕು. ನೇರವಾಗಿ ಫಲಾನುಭವಿ ಖಾತೆಗೆ ಜಮೆ ಆಗಬೇಕು. ಇದು ಹಂತ-ಹಂತವಾಗಿ ಹಾಗೂ ಪಾರದರ್ಶಕವಾಗಿ ಇದು ನಡೆಯಬೇಕು ಎಂದು “ನಮ್ಮ ಆಟೋ’ ಪ್ರಾಜೆಕ್ಟ್ ಮ್ಯಾನೇಜರ್ ಮಂಜು ಮೆನನ್ ತಿಳಿಸುತ್ತಾರೆ.
-ವಿಜಯಕುಮಾರ್ ಚಂದರಗಿ