Advertisement

ಅಭ್ಯರ್ಥಿಗಳ ಪ್ರಚಾರ; ಮತದಾರರಿಗೆ ಅಭಿವೃದ್ಧಿಯೇ ಮೂಲ ಮಂತ್ರ

10:48 PM Nov 06, 2019 | Team Udayavani |

ಮಹಾನಗರ: ಮಹಾನಗರ ಪಾಲಿಕೆ ಚುನಾವಣೆ ಮತದಾನಕ್ಕೆ ಇನ್ನು ಕೇವಲ ಐದು ದಿನವಷ್ಟೇ ಬಾಕಿ ಉಳಿದಿದ್ದು, ಅಭ್ಯರ್ಥಿಗಳ ಚುನಾವಣ ಪ್ರಚಾರದ ಭರಾಟೆ ಕೂಡ ಜೋರಾಗಿದೆ.

Advertisement

ಇನ್ನೇನು ನಾಲ್ಕು ದಿನದಲ್ಲಿ ಬಹಿರಂಗ ಚುನಾವಣ ಪ್ರಚಾರಕ್ಕೂ ತರೆಬೀಳುತ್ತದೆ. ಅತ್ತ ಚುನಾವಣ ಕಣದಲ್ಲಿರುವ ಸ್ಪರ್ಧಾಳುಗಳ ಸ್ಪಷ್ಟ ಚಿತ್ರಣ ದೊರೆಯುತ್ತಿದ್ದಂತೆ, ಪ್ರತಿಯೊಂದು ಪಕ್ಷದ ಅಭ್ಯರ್ಥಿಯು ತಮ್ಮ ವಾರ್ಡ್‌ ಮಟ್ಟದಲ್ಲಿ ಮತ ಬೇಟೆಯ ಕಸರತ್ತು ಚುರುಕುಗೊಳಿಸಿದ್ದಾರೆ. ಪ್ರತೀ ಬೂತ್‌, ವಾರ್ಡ್‌ ಮಟ್ಟದಲ್ಲಿ ಪ್ರಚಾರದ ಕಾರ್ಯ ಗರಿಗೆದರಿದೆ. ಪಾಲಿಕೆ ಚುನಾವಣೆಯಲ್ಲಿ ಈ ಬಾರಿ ವಾರ್ಡ್‌ಗಳಲ್ಲಿ ಅಭ್ಯರ್ಥಿಗಳ ಪ್ರಚಾರದ ಕಾವು, ನಗರಾಡಳಿತ ಚುನಾವಣೆ ಬಗ್ಗೆ ಮತದಾರರ ನಾಡಿಮಿಡಿತ ಹೇಗಿದೆ ಎಂದು ತಿಳಿಯುವ ಪ್ರಯತ್ನವನ್ನು ಬುಧವಾರದಿಂದ ನಗರದ ವಾರ್ಡ್‌ಗಳಲ್ಲಿ “ಸುದಿನ’ ತಂಡವು ಸುತ್ತಾಟದ ಮೂಲಕ ಮಾಡಿದೆ.

ನಮ್ಮ ತಂಡ ಮೊದಲು ಭೇಟಿ ಮಾಡಿದ್ದು, ಶಿವಬಾಗ್‌ ವಾರ್ಡ್‌ಗೆ. ಈ ವಾರ್ಡ್‌ನಲ್ಲಿ ಬಿಜೆಪಿ, ಕಾಂಗ್ರೆಸ್‌ ಅಭ್ಯರ್ಥಿಗಳು ನೇರ ಸ್ಪರ್ಧೆಯಲ್ಲಿದ್ದಾರೆ. ವಿಶೇಷ ಎಂಬಂತೆ ಈ ಎರಡೂ ಪಕ್ಷದ ಕಾರ್ಯಕರ್ತರು ಇದೇ ವಾರ್ಡ್‌ನ ಅಕ್ಕ ಪಕ್ಕದ ಮನೆಗಳಲ್ಲಿ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದರು. ವಾರ್ಡ್‌ 5ನೇ ಕ್ರಾಸ್‌ ಬಳಿ ಬಿಜೆಪಿ ಅಭ್ಯರ್ಥಿ ಪರ ಶಾಸಕ ವೇದವ್ಯಾಸ ಕಾಮತ್‌ ಸಹಿತ ಪಕ್ಷದ ಕಾರ್ಯಕರ್ತರು ಭರದಿಂದ ಪ್ರಚಾರದಲ್ಲಿ ತೊಡಗಿದ್ದರು. ಮನೆ ಮನೆ ಭೇಟಿ ಮಾಡಿ, ತಮ್ಮ ಪಕ್ಷದ ಪರವಾಗಿ ಮತ ಚಲಾಯಿಸುವಂತೆ ಮನವೊಲಿಸುತ್ತಿದ್ದ ದೃಶ್ಯ ಕಂಡುಬಂತು.

ಇದೇ ವಾರ್ಡ್‌ನ 2ನೇ ಕ್ರಾಸ್‌ನಲ್ಲಿ ಕಾಂಗ್ರೆಸ್‌ ಪರವಾಗಿ ಜಿಲ್ಲಾ ಯುವ ಘಟದ ಅಧ್ಯಕ್ಷ ಮಿಥುನ್‌ ರೈ ನೇತೃತ್ವದಲ್ಲಿ ಕಾರ್ಯಕರ್ತರು ಮನೆ-ಮನೆ ಭೇಟಿ ಪ್ರಚಾರದಲ್ಲಿ ತೊಡಗಿದ್ದರು. ಪಾಲಿಕೆಯ ಈ ಹಿಂದಿನ ಆಡಳಿತಾವಧಿಯ ಸಾಧನೆ, ಅಭಿವೃದ್ಧಿ ಕಾರ್ಯಗಳು, ಕಾಂಗ್ರೆಸ್‌ ಸಾಧನೆಗಳನ್ನು ಮನೆ ಮಂದಿಯಲ್ಲಿ ಹಂಚಿಕೊಳ್ಳುತ್ತಾ ಮತದಾನ ಮಾಡುವಂತೆ ಪ್ರೇರೇಪಿಸುತ್ತಿದ್ದರು.

ಬಳಿಕ 40ನೇ ಕೋರ್ಟ್‌ ವಾರ್ಡ್‌ನತ್ತ ನಮ್ಮ ತಂಡ ತೆರಳಿದ್ದು, ಈ ವಾರ್ಡ್‌ನಲ್ಲಿ ಸಿಪಿಎಂ ಪಕ್ಷದ ಅಭ್ಯರ್ಥಿ ಸುನಿಲ್‌ ಕುಮಾರ್‌ ಬಜಾಲ್‌ ಅವರು ಮನೆ-ಮನೆ ಭೇಟಿ ಮತ ಪ್ರಚಾರದಲ್ಲಿ ತೊಡಗಿ ರುವುದು ಕಂಡುಬಂತು. ಈ ವಾರ್ಡ್‌ನಲ್ಲಿ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಪಕ್ಷದ ಅಭ್ಯರ್ಥಿಗಳು ನೇರ ಸ್ಪರ್ಧಿ ಸುತ್ತಿದ್ದು, ಜೆಡಿಎಸ್‌ ಅಭ್ಯರ್ಥಿಗಳು ಇನ್ನೂ ಮತ ಪ್ರಚಾರಕ್ಕೆ ಬರಲಿಲ್ಲ ಎನ್ನುತ್ತಾರೆ ಸ್ಥಳೀಯರು. ಈ ಬಾರಿ ಕೋರ್ಟ್‌ ವಾರ್ಡ್‌ನಿಂದ ಕೆಲವು ಭಾಗಗಳು ಪಕ್ಕದ ಸೆಂಟ್ರಲ್‌ ವಾರ್ಡ್‌ಗೆ ಸೇರ್ಪಡೆಯಾಗಿವೆ. ಅಲ್ಲದೆ ಕಳೆದ ಬಾರಿಯ ಚುನಾವಣೆಯಲ್ಲಿ ಈ ವಾರ್ಡ್‌ನಲ್ಲಿ ಅತೀ ಕಡಿಮೆ (ಶೇ.47.88) ಮತದಾನವಾಗಿತ್ತು. ಇದೇ ಕಾರಣಕ್ಕೆ ಅಭ್ಯರ್ಥಿಗಳು ಪ್ರತಿಯೊಂದು ಮನೆಮನಗೆ ತೆರಳಿ, ಫ್ಲ್ಯಾಟ್‌ಗಳಿಗೆ ತೆರಳಿ ಸಾರ್ವಜನಿಕರಲ್ಲಿ ಮತದಾನಕ್ಕೆ ಬರುವಂತೆ ಪ್ರೇರೇಪಿಸುತ್ತಿರುವುದು ಕಂಡು ಬಂತು.

Advertisement

ಅಭಿವೃದ್ಧಿಗೆ ನಮ್ಮ ಪ್ರಾಶಸ್ತ್ಯ
ಕೋರ್ಟ್‌ ವಾರ್ಡ್‌ನ ಮತದಾರ ಗಣೇಶ್‌ ಅವರು “ಸುದಿನ’ಕ್ಕೆ ಪ್ರತಿಕ್ರಿಯಿಸಿ “ಈ ವಾರ್ಡ್‌ ನಲ್ಲಿ ಮೂರು ಮಂದಿ ಪ್ರಮುಖ ಪಕ್ಷದ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಜೆಪಿ, ಕಾಂಗ್ರೆಸ್‌, ಸಿಪಿಎಂ ಅಭ್ಯರ್ಥಿಗಳು ಮತಯಾಚನೆಗೆ ಮನೆಗೆ ಬಂದಿದ್ದಾರೆ. ನಾವು ಕಾರ್ಯಕರ್ತರ ಮುಖ ನೋಡಿ ಮತ ಹಾಕುವುದಿಲ್ಲ. ಬದಲಾಗಿ, ಅಭಿವೃದ್ಧಿಗೆ ನಮ್ಮ ಪ್ರಾಶಸ್ತ್ಯ’ ಎನ್ನುತ್ತಾರೆ.

ಕೊಡಿಯಾಲಬೈಲ್‌ ವಾರ್ಡ್‌ನಲ್ಲಿಯೂ ಮತ ಬೇಟೆ ಜೋರಾಗಿದೆ. ಈ ವಾರ್ಡ್‌ನಲ್ಲಿ ಕಾಂಗ್ರೆಸ್‌, ಬಿಜೆಪಿ ಮತ್ತು ಪಕ್ಷೇತರರು ಕಣದಲ್ಲಿದ್ದು, ಕಾಂಗ್ರೆಸ್‌ನ ಪ್ರಕಾಶ್‌ ಬಿ. ಸಾಲ್ಯಾನ್‌ ಬೆಂಬಲಿಗರು ಬಾಳಿಗಾ ಸ್ಟೋರ್‌ ಬಳಿ ಮತಯಾಚನೆಯಲ್ಲಿ ತೊಡಗಿದ್ದರು. ಇನ್ನು ಬಿಜೆಪಿ ಪಕ್ಷದ ಅಭ್ಯರ್ಥಿಗಳು ಈ ವಾರ್ಡ್‌ ನ ಇತರೇ ಭಾಗಗಳಲ್ಲಿ ಮತ ಯಾಚನೆಯಲ್ಲಿ ತೊಡಗಿದ್ದರು.

“ರಡ್ಡ್ ಪಕ್ಷದಕ್‌ಲ್‌ ಇಲ್ಲಡೆ ಬತ್ತ್ದ್‌ ಓಟ್‌ ಕೇಂಡೆರ್‌. ಯಾನ್‌ ವಾ ಪಕ್ಷದ ಪರಲಾ ಇಜ್ಜಿ. ಏರೆ ಅಭಿವೃದ್ಧಿ ಮಲ್ಪೇರ್‌ ಆಕ್ಲೆಗ್‌ ಎನ್ನ ಓಟ್‌.’ (ಎರಡು ಪಕ್ಷದ ಮಂದಿ ಮನೆ ಬಂದು ಮತ ಕೇಳಿದ್ದಾರೆ. ನಾನು ಯಾವ ಪಕ್ಷದ ಪರವೂ ಇಲ್ಲ. ಯಾರು ಅಭಿವೃದ್ಧಿ ಪರವಾಗಿದ್ದಾರೋ ಅವರಿಗೆ ನನ್ನ ಓಟು) ಎಂದು “ಸುದಿನ’ಕ್ಕೆ ಪ್ರತಿಕ್ರಿಯಿಸಿದ್ದು ಕೊಡಿಯಾಲಬೈಲ್‌ ವಾರ್ಡ್‌ನ ಮತದಾರೊಬ್ಬರು.

ಭರವಸೆ ಮಹಾಪೂರ
ಮನೆ ಮನೆಗೆ ಮತಯಾಚನೆಗೆ ಬರುವಂತಹ ಎಲ್ಲ ಪಕ್ಷಗಳ ಮುಖಂಡರಿಂದ ವಾರ್ಡ್‌ ನ ಮಂದಿಗೆ ಭರವಸೆಯ ಮಹಾಪೂರವನ್ನೇ ಹರಿಸುತ್ತಿದ್ದಾರೆ. ಮನೆ ಮಂದಿ ಮೂಲ ಸಮಸ್ಯೆಗಳ ಬಗ್ಗೆ ಹೇಳಿದರೆ, ಗೆದ್ದರೆ ಖಂಡಿತವಾಗಿಯೂ ಪ್ರಾಶಸ್ತ್ಯ ನೀಡುತ್ತೇವೆ ಎಂಬ ಭರವಸೆ ನೀಡುತ್ತಿದ್ದಾರೆ.

 ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next