Advertisement

ಶಾಲಾ ಕಾಲೇಜುಗಳಲ್ಲಿ ಪ್ರತಿಭಟನೆಗೆ ನಿಷೇಧ

10:27 AM Feb 29, 2020 | mahesh |

ಕೇರಳದ ಶಾಲಾ ಕಾಲೇಜುಗಳಲ್ಲಿ ಇನ್ನು ಮುಷ್ಕರ, ರ್ಯಾಲಿ, ಧರಣಿ, ಘೇರಾವ್‌ ಆದಿಯಾಗಿ ಯಾವುದೇ ತೆರನಾದ ಪ್ರತಿಭಟನೆ ನಡೆಸುವುದನ್ನು ನಿಷೇಧಿಸಿ ಹೈಕೋರ್ಟ್‌ ಆದೇಶ ಹೊರಡಿಸಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದಲ್ಲಿ ಕೇರಳದ ಮಟ್ಟಿಗೆ ಹೈಕೋರ್ಟ್‌ ನೀಡಿರುವ ಈ ತೀರ್ಪು ನಿಜಕ್ಕೂ ಐತಿಹಾಸಿಕ. ಇನ್ನು ದೇಶವ್ಯಾಪಿ ಯಾಗಿ ಈ ತೀರ್ಪನ್ನು ಪರಿಗಣಿಸುವುದಾದಲ್ಲಿ ವಿದ್ಯಾರ್ಥಿಗಳ ಆದ್ಯತೆ ಏನಾಗಿರಬೇಕು ಎಂಬುದನ್ನು ಇದು ಸ್ಪಷ್ಟಪಡಿಸಿದೆ . ಮಾತ್ರವಲ್ಲದೆ ರಾಜಕೀಯ ಪಕ್ಷಗಳಿಗೂ ಒಂದಿಷ್ಟು ಬಿಸಿ ಮುಟ್ಟಿಸಿದೆ.

Advertisement

ಕೇರಳದಲ್ಲಿ ಪ್ರತಿಭಟನೆ, ಧರಣಿ, ಮುಷ್ಕರಗಳು ಸಾಮಾನ್ಯವಾಗಿದ್ದು ಪ್ರತಿನಿತ್ಯ ಎಂಬಂತೆ ಒಂದಲ್ಲ ಒಂದು ಹೋರಾಟಗಳು ನಡೆಯುತ್ತಲೇ ಇರುತ್ತವೆ. ಈ ಪ್ರತಿಭಟನೆಗಳಿಗೆ ಯಾವುದಾದರೂ ಪಕ್ಷಗಳಿಗೆ ಸೇರಿದ ವಿದ್ಯಾರ್ಥಿ ಸಂಘಟನೆಗಳು ಅಥವಾ ಯುವ ಘಟಕಗಳು ಬೆಂಬಲ ನೀಡುವುದು ಸರ್ವೇಸಾಮಾನ್ಯ. ಈ ಕಾರಣದಿಂದಾಗಿ ಪದೇಪದೆ ಶಾಲಾಕಾಲೇಜುಗಳ ದೈನಂದಿನ ಶೈಕ್ಷಣಿಕ ಚಟುವಟಿಕೆಗಳ ಮೇಲೆ ನೇರ ಪರಿಣಾಮ ಬೀಳುತ್ತಿರುತ್ತದೆ. ಕೆಲವೊಂದು ಬಾರಿ ಈ ಪ್ರತಿಭಟನೆಗಳು ವಾರಗಟ್ಟಲೇ ನಡೆಯುವುದರಿಂದ ಶಾಲಾಕಾಲೇಜುಗಳನ್ನು ಈ ಅವಧಿಯಲ್ಲಿ ಮುಚ್ಚಲೇ ಬೇಕಾದ ಪರಿಸ್ಥಿತಿ ಬಂದೊದಗುತ್ತದೆ. ಇದರಿಂದಾಗಿ ಸರಕಾರಿ ಮತ್ತು ಅರೆಸರಕಾರಿ ಶಿಕ್ಷಣ ಸಂಸ್ಥೆಗಳಿಗಂತೂ ಆಯಾಯ ಶೈಕ್ಷಣಿಕ ವರ್ಷದ ಪಠ್ಯಕ್ರಮಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವುದೇ ಒಂದು ಹರಸಾಹಸ.

20ಕ್ಕೂ ಅಧಿಕ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳು ಸಲ್ಲಿಸಿದ ಅರ್ಜಿಗಳ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್‌ ಪೀಠ ಈ ತೀರ್ಪನ್ನು ನೀಡಿದೆ. ಶಿಕ್ಷಣ ವ್ಯಕ್ತಿಯ ಮೂಲಭೂತ ಹಕ್ಕಾಗಿದ್ದು ಪ್ರತಿಭಟನೆಗಳ ನೆಪದಲ್ಲಿ ವಿದ್ಯಾರ್ಥಿಯ ಹಕ್ಕನ್ನು ಯಾರೂ ಕಸಿದುಕೊಳ್ಳುವಂತಿಲ್ಲ. ಅಷ್ಟು ಮಾತ್ರವಲ್ಲದೆ ಮುಷ್ಕರದ ನೆಪದಲ್ಲಿ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಶೈಕ್ಷಣಿಕ ವಾತಾವರಣ ವನ್ನು ಕೆಡಿಸಿ, ವಿದ್ಯಾರ್ಥಿಗಳ ಅಧ್ಯಯನಕ್ಕೆ ತಡೆಯೊಡ್ಡುವುದು ಸರಿಯಲ್ಲ. ಒಂದು ವೇಳೆ ಯಾವುದೇ ಸಂಘಟನೆಗಳು ಅಥವಾ ಕಾರ್ಯಕರ್ತರು ಇಂಥ ಕೃತ್ಯಗಳಲ್ಲಿ ತೊಡಗಿಕೊಂಡರೆ ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಆದೇಶ ನೀಡಿದೆ.

ಶಿಕ್ಷಣ ಸಂಸ್ಥೆಗಳಿರುವುದು ವಿದ್ಯಾರ್ಥಿಗಳ ಅಧ್ಯಯನಕ್ಕಾಗಿಯೇ ಹೊರತು ಮುಷ್ಕರ, ಪ್ರತಿಭಟನೆ ನಡೆಸಲು ಅಲ್ಲ. ಶಾಲಾಕಾಲೇಜುಗಳಲ್ಲಿ ಯಾವುದೇ ತೆರನಾದ ಪ್ರತಿಭಟನೆ ನಡೆಸಿದಲ್ಲಿ ಜಿಲ್ಲಾ ಶಿಕ್ಷಣಾಧಿಕಾರಿ ತಪ್ಪಿತಸ್ಥ ವಿದ್ಯಾರ್ಥಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಅಷ್ಟು ಮಾತ್ರವಲ್ಲದೆ ಅಗತ್ಯಬಿದ್ದಲ್ಲಿ ಶಿಕ್ಷಣಸಂಸ್ಥೆಯ ಆವರಣದಲ್ಲಿ ಶಾಂತಿ ಕಾಯ್ದುಕೊಳ್ಳಲು ಪೊಲೀಸರ ನೆರವನ್ನೂ ಪಡೆಯಬಹುದು ಎಂದು ಹೈಕೋರ್ಟ್‌ ತನ್ನ ತೀರ್ಪಿನಲ್ಲಿ ತಿಳಿಸಿದೆ.

ಇದೇ ವೇಳೆ ಸಾಮಾಜಿಕ, ರಾಜಕೀಯ ಸಹಿತ ಯಾವುದೇ ವಿಚಾರಗಳ ಬಗ್ಗೆ ಶಾಲಾಕಾಲೇಜುಗಳ ಆಡಳಿತ ಮಂಡಳಿಗಳ ಅಧಿಕೃತ ಒಪ್ಪಿಗೆ ಪಡೆದು ಶಿಕ್ಷಣ ಸಂಸ್ಥೆಗಳ ಆವರಣದೊಳಗೆ ಶಾಂತಿಯುತ ಚರ್ಚೆ, ಪರಸ್ಪರ ಸಮಾಲೋಚನೆ, ವಿಚಾರ ವಿನಿಮಯ ಮಾಡಿಕೊಳ್ಳಬಹುದು ಎಂದು ನ್ಯಾಯಾಧೀಶರು ಸ್ಪಷ್ಟಪಡಿಸಿದ್ದಾರೆ. ಆದರೆ ಇವು ಚರ್ಚೆಯ ಮೇರೆಯನ್ನು ಮೀರಿ ಪ್ರತಿಭಟನೆಯ ಹಾದಿ ತುಳಿಯುವ ಹಂತಕ್ಕೆ ಬರಬಾರದು ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.

Advertisement

ಕೇಂದ್ರ ಸರಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ದೇಶಾದ್ಯಂತ ಹಲವಾರು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರತಿಭಟನೆಗಳು ನಡೆದಿರುವ ಬೆನ್ನಲ್ಲೇ ಕೇರಳ ಹೈಕೋರ್ಟ್‌ ಈ ಐತಿಹಾಸಿಕ ತೀರ್ಪನ್ನು ನೀಡಿದೆ. ತಿಂಗಳುಗಳ ಹಿಂದೆಯಷ್ಟೇ ದಿಲ್ಲಿಯ ಜೆಎನ್‌ಯುನಲ್ಲಿ ಶುಲ್ಕ ಹೆಚ್ಚಳವನ್ನು ವಿರೋಧಿಸಿ ವಿದ್ಯಾರ್ಥಿಗಳು ನಡೆಸಿದ ಹಿಂಸಾತ್ಮಕ ಪ್ರತಿಭಟನೆ, ಜಾಮೀಯಾದಲ್ಲಿ ನಡೆದ ಪ್ರತಿಭಟನೆ ಹಾಗೂ ದೇಶದ ವಿವಿಧ ರಾಜ್ಯಗಳ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ವಿವಿಧ ರಾಜಕೀಯ ಪಕ್ಷಗಳ ಅಂಗ ಸಂಘಟನೆಗಳ ನೇತೃತ್ವದಲ್ಲಿ ನಡೆದ ಪ್ರತಿಭಟನೆಗಳು ದೇಶದ ಶೈಕ್ಷಣಿಕ ವ್ಯವಸ್ಥೆ ಮತ್ತು ವಿದ್ಯಾರ್ಥಿಗಳ ಆದ್ಯತೆಯ ಬಗೆಗೆ ಮರು ಚಿಂತನೆ ನಡೆಸಲೇಬೇಕಾದ ಅನಿವಾರ್ಯತೆ ಸೃಷ್ಟಿಸಿವೆ. ಇವೆಲ್ಲದರ ಹಿನ್ನೆಲೆಯಲ್ಲಿ ಕೇರಳ ಹೈಕೋರ್ಟ್‌ನ ಈ ತೀರ್ಪು ಮಹತ್ವವನ್ನು ಪಡೆದುಕೊಂಡಿದೆ.

ಶಿಕ್ಷಣ ಸಂಸ್ಥೆಗಳೇನಿದ್ದರೂ ಅಧ್ಯಯನಕ್ಕಾಗಿಯೇ ಹೊರತು ರಾಜಕೀಯ ಚಟುವಟಿಕೆಗಳನ್ನು ನಡೆಸಲು ಅಲ್ಲ ಎಂದು ಈ ಹಿಂದೆಯೂ ಹಲವು ನ್ಯಾಯಾಲಯಗಳು ಕಿವಿಮಾತು ಹೇಳಿದ್ದರೂ ಇದನ್ನು ಯಾವುದೇ ರಾಜಕೀಯ ಪಕ್ಷ ಅಥವಾ ಸರಕಾರಗಳು ಗಂಭೀರವಾಗಿ ಪರಿಗಣಿಸಿರಲಿಲ್ಲ. ಈ ಕಾರಣದಿಂದಾಗಿ ದೇಶದ ಹಲವು ರಾಜ್ಯಗಳಲ್ಲಿ ಶಿಕ್ಷಣ ಸಂಸ್ಥೆಗಳು ಕಿಡಿಗೇಡಿಗಳು ಮತ್ತು ದುಷ್ಕರ್ಮಿಗಳ ಅಡ್ಡೆಗಳಾಗಿ ಪರಿವರ್ತನೆಗೊಳ್ಳುತ್ತಲೇ ಬಂದಿವೆ. ಇವೆಲ್ಲವುಗಳಿಗೆ ಕಡಿವಾಣ ಹಾಕುವ ದಿಸೆಯಲ್ಲಿ ಕೇರಳ ಹೈಕೋರ್ಟ್‌ನ ಈ ತೀರ್ಪು ಪ್ರಾಥಮಿಕ ಹೆಜ್ಜೆ ಎನ್ನಬಹುದು.

ಹೈಕೋರ್ಟ್‌ನ ಆದೇಶಕ್ಕೆ ಕೇರಳದ ವಿವಿಧ ಪಕ್ಷಗಳ ವಿದ್ಯಾರ್ಥಿ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಅಷ್ಟು ಮಾತ್ರವಲ್ಲದೆ ಆಡಳಿತಾರೂಢ ಎಲ್‌ಡಿಎಫ್ ಸರಕಾರ ಕೂಡಾ ಹೈಕೋರ್ಟ್‌ನ ಆದೇಶದ ಬಗೆಗೆ ಕಾನೂನು ತಜ್ಞರೊಂದಿಗೆ ಚರ್ಚಿಸಿ ಶೀಘ್ರವೇ ಮೇಲ್ಮನವಿ ಸಲ್ಲಿಸುವ ಸುಳಿವನ್ನೂ ಕೂಡಾ ನೀಡಿದೆ. ಇದು ದೇಶದ ನ್ಯಾಯಾಂಗ ಪ್ರಕ್ರಿಯೆಯಲ್ಲಿ ಸಹಜವಾದರೂ ಹೈಕೋರ್ಟ್‌ ಸದ್ಯ ನೀಡಿರುವ ತೀರ್ಪು ವಿದ್ಯಾರ್ಥಿಗಳ ಆದ್ಯತೆ ಮತ್ತು ವಿದ್ಯಾರ್ಥಿಗಳನ್ನು ತನ್ನ ಕೈಗೊಂಬೆಗಳನ್ನಾಗಿ ಬಳಸಿಕೊಳ್ಳುವ ರಾಜಕೀಯ ಪಕ್ಷಗಳಿಗೆ ಒಂದಿಷ್ಟು ಬಿಸಿ ಮುಟ್ಟಿಸಿರುವುದು ಸುಳ್ಳಲ್ಲ.

Advertisement

Udayavani is now on Telegram. Click here to join our channel and stay updated with the latest news.

Next