ಹಾವೇರಿ: ರಾಜ್ಯದಲ್ಲಿ ಮದ್ಯ ನಿಷೇಧ ಕಾನೂನು ಜಾರಿಗೆ ತರಬೇಕು ಎಂದು ಒತ್ತಾಯಿಸಿ ಡಿ. 20ರಂದು ನಗರದಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನಾ ಮೆರವಣಿಗೆ ಸಂಘಟಿಸಲಾಗಿದೆ ಎಂದು ಮದ್ಯ ನಿಷೇಧ ಆಂದೋಲನ ಕರ್ನಾಟಕದ ಮುಖಂಡ ಬಸವರಾಜ ಗಬ್ಬೂರ ತಿಳಿಸಿದರು.
ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಪ್ರತಿಭಟನೆ ಹಾಗೂ ಸಮಾವೇಶದ ಕುರಿತು ವಿವರಣೆ ನೀಡಿದರು. ಡಿ. 20ರಂದು ಬೆಳಗ್ಗೆ 11ಕ್ಕೆ ನಗರದ ಶಿವಬಸವಕಲ್ಯಾಣ ಮಂಟಪದಲ್ಲಿ ಸಮಾವೇಶ ನಡೆಯಲಿದೆ. ಸಮಾವೇಶದಲ್ಲಿ ಗದುಗಿನ ತೋಂಟದಾರ್ಯ ಮಠದ ಡಾ| ಸಿದ್ದಲಿಂಗ ಸ್ವಾಮೀಜಿ, ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಸೇರಿದಂತೆ ಜಿಲ್ಲೆಯ ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಭಾಗವಹಿಸುವರು ಎಂದರು.
ಇಂದು ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಹೆಚ್ಚಾಗಲು ಮದ್ಯಪಾನವೇ ಪ್ರಮುಖ ಕಾರಣವಾಗಿದೆ. ಯುವಕರು ದಾರಿ ತಪ್ಪುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಮದ್ಯಪಾನದಿಂದ ಶಾಂತಿಗೆ ಧಕ್ಕೆ ಬರುತ್ತಿದೆ. ಅನೇಕ ಕುಟುಂಬಗಳು ಬೀದಿಪಾಲಾಗುತ್ತಿವೆ. ಆದ್ದರಿಂದ ಸರ್ಕಾರ ರಾಜ್ಯದಲ್ಲಿ ಮದ್ಯಪಾನ ನಿಷೇಧ ಮಾಡಬೇಕು ಎಂದು ಪ್ರತಿಭಟನೆ ಮೂಲಕ ಆಗ್ರಹಿಸಲಾಗುವುದು ಎಂದರು.
ಮದ್ಯ ಮಾರಾಟದಿಂದ ಬಂದ ತೆರಿಗೆ ಹಣದಿಂದಲೇ ಜನಕಲ್ಯಾಣ ಯೋಜನೆಗಳಿಗೆ ಉಪಯೋಗ ಮಾಡಲಾಗುತ್ತಿದೆ ಎಂದು ಸರ್ಕಾರ ಸಬೂಬು ನೀಡಿದರೂ ಅದು ಸಕಾರಣವಲ್ಲ. ಮದ್ಯ ನಿಷೇಧದಿಂದ ರಾಜ್ಯ ಸರ್ಕಾರ 4 ಸಾವಿರ ಕೋಟಿ ರೂ. ತೆರಿಗೆ ಕಳೆದುಕೊಳ್ಳಬಹುದು. ಆದರೆ ಮದ್ಯ ನಿಷೇಧದಿಂದ ಜನರ ಕೈಯಲ್ಲಿ ಅಂದಾಜು 12 ಸಾವಿರ ಕೋಟಿ ರೂ. ಉಳಿಯುತ್ತದೆ. ಈ ಹಣವನ್ನು ಅವರು ಆಹಾರ, ಆರೋಗ್ಯ, ಶಿಕ್ಷಣ, ಮನೆ ವಸ್ತುಗಳನ್ನು ಖರೀದಿಸುತ್ತಾರೆ. ಇದರಿಂದಲೂ ಸರ್ಕಾರಕ್ಕೆ ತೆರಿಗೆ ಬರುತ್ತದೆ. ಗುಜರಾತ ರಾಜ್ಯದಲ್ಲಿ 60 ವರ್ಷಗಳ ಹಿಂದೆಯೇ ಮದ್ಯ ನಿಷೇಧ ಮಾಡಿದ್ದು, ಅದು ಇಂದು ಅಭಿವೃದ್ಧಿಯಲ್ಲಿ ಉಳಿದ ರಾಜ್ಯಗಳಿಗಿಂತ ಮುಂದಿದೆ ಎಂದರು. ಗ್ರಾಮೀಣ ಕೂಲಿಕಾರ್ಮಿಕರ ಸಂಘಟನೆಯ ನಿಂಗಮ್ಮ ಧಾರವಾಡ, ರೇಣುಕಾದೇವಿ ಸಂಸ್ಥೆಯ ನಾಗರತ್ನಾ
ಧಾರವಾಡಕರ, ಶ್ರೀನಿಧಿ ಮಹಿಳಾ ಗ್ರಾಮೀಣಾಭಿವೃದ್ಧಿ ಸಂಘದ ಪ್ರೇಮಲತಾ ಮುದ್ದಿ ಇತರರು ಇದ್ದರು.