Advertisement

ಮೂಢನಂಬಿಕೆಗಳಿಗೆ ನಿಷೇಧ

10:09 AM Jan 24, 2020 | mahesh |

ಬೆಂಗಳೂರು: ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ರೂಪಿಸಲಾಗಿದ್ದ ವಿವಾದಾತ್ಮಕ ಮೂಢ ನಂಬಿಕೆ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಿ ರಾಜ್ಯದ ಬಿಜೆಪಿ ಸರಕಾರ ಆದೇಶ ಹೊರಡಿಸಿದೆ.

Advertisement

ಆಗಿನ ಕಾಂಗ್ರೆಸ್‌ ಸರಕಾರದ ಅವಧಿಯಲ್ಲಿ ಅಮಾನ ವೀಯ, ದುಷ್ಟ ಪದ್ಧತಿಗಳು, ಮಾಟ ಮಂತ್ರ ಮತ್ತು ವಾಮಾಚಾರ ನಿಯಂತ್ರಿಸುವ ಮಸೂದೆ- 2017ನ್ನು ಜಾರಿಗೊಳಿಸಲು ವಿಧಾನಸಭೆಯಲ್ಲಿ ಅಂಗೀ ಕರಿಸಲಾಗಿತ್ತು.  ಬಿಜೆಪಿ ಸರಕಾರ ಈ ಕಾಯ್ದೆಯನ್ನು ಯಾವುದೇ ಬದಲಾವಣೆಯಿಲ್ಲದೆ 2020ರ ಜ. 4ರಿಂದ ಜಾರಿಗೆ ಬರುವಂತೆ ಅಧಿಸೂಚನೆ ಹೊರಡಿಸಿದ್ದು, ಶೀಘ್ರವೇ ಕರ್ನಾಟಕ ರಾಜ್ಯಪತ್ರ ಹೊರಡಿಸಲಿದೆ.

ಹಿನ್ನೆಲೆ
ರಾಜ್ಯದಲ್ಲಿ ಮಡೆಮಡಸ್ನಾನ ನಿಷೇಧಿಸುವಂತೆ ಪ್ರಗತಿಪರ ಸಂಘಟನೆಗಳು ರಾಜ್ಯ ಸರಕಾರದ ಮೇಲೆ ಒತ್ತಡ ಹೇರಿದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರ ಮಹಾರಾಷ್ಟ್ರ ಮಾದರಿಯಲ್ಲಿ ಮೌಡ್ಯ ನಿಷೇಧ ಕಾಯ್ದೆ ಜಾರಿಗೆ ತರಲು ರಮೇಶ್‌ ಕುಮಾರ್‌ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಅವರ ಸಮಿತಿ ವರದಿ ಆಧಾರದಲ್ಲಿ 2017ರಲ್ಲಿ ಮೂಢ ನಂಬಿಕೆ ನಿಷೇಧ ಕಾಯ್ದೆಯನ್ನು ಜಾರಿಗೆ ತರಲು ವಿಧಾನಸಭೆಯಲ್ಲಿ ಮಂಡಿಸಿ ಒಪ್ಪಿಗೆ ಪಡೆದಿತ್ತು. ಪ್ರಮುಖವಾಗಿ ಈ ಕಾಯ್ದೆಯಲ್ಲಿ ಕೆಲವು ನಂಬಿಕೆ ಗಳನ್ನು ನಿಷೇಧಿಸುವ ಬಗ್ಗೆ ಅಂದು ವಿಪಕ್ಷದಲ್ಲಿದ್ದ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದರು.

ಬಿಜೆಪಿ ಈ ಕಾಯ್ದೆ ಕೇವಲ ಹಿಂದೂ ಧರ್ಮ ವನ್ನು ಮಾತ್ರ ಗುರಿಯಾಗಿಟ್ಟುಕೊಂಡು ಹಿಂದೂ ಧರ್ಮೀಯರ ಆಚರಣೆಗಳನ್ನು ನಿಷೇಧಿಸಲಾಗುತ್ತಿದೆ ಎಂದಿತ್ತು. ಆದರೆ ಕಾಂಗ್ರೆಸ್‌ ಸರಕಾರ ಅದೆಲ್ಲವನ್ನು ಸಮರ್ಥಿಸಿಕೊಂಡು, ಮೂಗು ಚುಚ್ಚುವುದು, ಹಚ್ಚೆ ಹಾಕಿಸುವುದು, ಜ್ಯೋತಿಷ ಹೇಳುವಂಥ ಕೆಲವು ಪದ್ಧತಿಗಳನ್ನು ಕೈಬಿಟ್ಟು ಕಾಯ್ದೆ ಜಾರಿಗೆ ಮುಂದಾಗಿತ್ತು. ಈಗ ಬಿಜೆಪಿ ಸರಕಾರ ಹಿಂದಿನ ಸರಕಾರ ಅವಧಿಯಲ್ಲಿ ವಿಧಾನ ಮಂಡಲದ ಎರಡೂ ಸದನಗಳಲ್ಲಿ ಅಂಗೀಕೃತ ವಾಗಿರುವಂತೆ ಜಾರಿಗೆ ತರಲು ನಿರ್ಧರಿಸಿ, ಅಧಿಕೃತ ಆದೇಶ ಹೊರಡಿಸಿದೆ.

ಏನೇನು ನಿಷೇಧ ?
 ಎಂಜಲೆಲೆಯ ಮೇಲೆ ಉರುಳುವ ಮಡೆಸ್ನಾನ
 ಸಿಡಿ ಹಾಯುವುದು
 ಬೆತ್ತಲೆ ಸೇವೆ
 ಋತುಮತಿಯಾದಾಗ ಮತ್ತು ಗರ್ಭಿಣಿಯನ್ನು ಊರ ಹೊರಗಿಡುವ ಪದ್ಧತಿ
 ವಶೀಕರಣ, ವಾಮಾಚಾರ

Advertisement
Advertisement

Udayavani is now on Telegram. Click here to join our channel and stay updated with the latest news.

Next