Advertisement

ಎಲ್ಲಾ ಸೌಲಭ್ಯ ನೀಡಿದರೂ ಎಸ್ಸೆಸ್ಸೆಲ್ಸಿಯಲ್ಲಿ ಕಳಪೆ ಫ‌ಲಿತಾಂಶ ಏಕೆ?

03:26 PM Sep 13, 2020 | Suhan S |

ತಿ.ನರಸೀಪುರ: ತಾಲೂಕಿನಲ್ಲಿ ಎಲ್ಲಾ ಸೌಲಭ್ಯ ನೀಡಿದರೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕಳಪೆ ಫ‌ಲಿತಾಂಶ ಬಂದಿದೆ. ಶಿಕ್ಷಕರು ಮಕ್ಕಳಿಗೆ ಸರಿಯಾದ ಪಾಠ ಮಾಡದ ಕಾರಣ ಫ‌ಲಿತಾಂಶದಲ್ಲಿ ಇಳಿಮುಖವಾಗಿದೆ. ಈ ವರ್ಷ ಇದು ಪುನರಾವರ್ತನೆಯಾದರೆ ಶಿಸ್ತು ಕ್ರಮ ಜರುಗಿಸುವುದಾಗಿ ಶಾಸಕ ಯತೀಂದ್ರ ಎಚ್ಚರಿಕೆ ನೀಡಿದರು.

Advertisement

ತಾಪಂ ಸಭಾಂಗಣದಲ್ಲಿ ನಡೆದ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸ್ವಾಮಿ ಪ್ರಗತಿ ಮಂಡಿಸುವ ವೇಳೆ, ತಾಲೂಕಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಿ ಗ್ರೇಡ್‌ ಪಡೆದಿರುವುದಕ್ಕೆ ಟೀಕೆಗೆ ಗುರಿಯಾಗಬೇಕಾಯಿತು. ಕೋವಿಡ್ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು 100 ದಿನಗಳ ಕಾಲ ಶಾಲೆಯಿಂದ ಹೊರಗುಳಿದ ಕಾರಣ ಫ‌ಲಿತಾಂಶದಲ್ಲಿ ಸ್ವಲ್ಪ ಇಳಿಮುಖವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸ್ವಾಮಿ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಪಂ ಸಾಯಿ ಸಮಿತಿ ಅಧ್ಯಕ್ಷ ಟಿ.ಎಚ್‌.ಮಂಜುನಾಥ್‌. “ಎಲ್ಲದಕ್ಕೂ ಕೊರೊನಾ ನೆಪ ಹೇಳಬೇಡಿ. ಹುಣಸೂರು ಎ ಗ್ರೇಡ್‌ ಹಾಗು ಎಚ್‌.ಡಿ.ಕೋಟೆ ಬಿ ಗ್ರೇಡ್‌ ಪಡೆದಿವೆ. ಅಲ್ಲಿ ಕೊರೊನಾ ಇರಲಿಲ್ಲವೇ’ ಎಂದು ಪ್ರಶ್ನಿಸಿದರು.

ಈ ವೇಳೆ ಮಧ್ಯೆ ಪ್ರವೇಶಿದ ಯತೀಂದ್ರ, ಕೋವಿಡ್ ನಡುವೆಯೂ ಬೇರೆ ತಾಲೂಕಿನಲ್ಲಿ ಉತ್ತಮ ಫ‌ಲಿತಾಂಶ ಬಂದಿವೆ. ಅನುದಾನ ರಹಿತ ಶಾಲೆಗಳಲ್ಲಿ ಶೇ.74 ಫ‌ಲಿತಾಂಶ ಲಭಿಸಿದೆ. ಆದರೆ ಎಲ್ಲಾ ಸೌಲಭ್ಯ ನೀಡಿಯೂ ಕಳಪೆ ಫ‌ಲಿತಾಂಶ ಬಂದರೆ ಏನರ್ಥ ಎಂದು ಪ್ರಶ್ನಿಸಿದರು. ವೈದ್ಯರು ಜನಪ್ರತಿನಿಧಿಗಳ ಕರೆ ಸ್ವೀಕರಿಸದೇ ಉದಾಸೀನ ತೋರುತ್ತಿದ್ದಾರೆ ಎಂದು ಟಿ.ಎಚ್‌.ಮಂಜುನಾಥ್‌ ದೂರಿದ ಹಿನ್ನೆಲೆಯಲ್ಲಿ ಶಾಸಕರು ಪ್ರತಿಕ್ರಿಯಿಸಿ, ಜನಪ್ರತಿನಿಧಿಗಳ ಕರೆ ಗಳನ್ನು ಸ್ವೀಕರಿಸಿ ಮಾತನಾಡುವಷ್ಟು ಸೌಜನ್ಯವನ್ನು ಅಧಿಕಾರಿಗಳು ಬೆಳೆಸಿಕೊಳ್ಳಬೇಕು ಎಂದು ತಾಕೀತು ಮಾಡಿದರು.

ಈ ಸಂದರ್ಭದಲ್ಲಿ ಇಲಾಖೆಯ ಪ್ರಗತಿ ವರ ಮಂಡಿಸಿದ ತಾಲೂಕು ಆರೋಗ್ಯಾಧಿಕಾರಿ ಡಾ. ರವಿಕುಮಾರ್‌, ತಾಲೂಕಿನಲ್ಲಿ ಈ ವರೆಗೆ 688 ಪಾಸಿಟಿವ್‌ ಕೇಸ್‌ಗಳು ಬಂದಿದ್ದು, ಈ ಪೈಕಿ 510 ಮಂದಿ ಗುಣಮುಖರಾಗಿದ್ದಾರೆ. 146 ಸಕ್ರಿಯ ಪ್ರಕರಣಗಳಿದ್ದು, 17 ಸೋಂಕಿತರು ಪಟ್ಟಿದ್ದಾರೆ. ತಾತ್ಕಾಲಿಕವಾಗಿ ತೆರೆದಿರುವ ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ ಈ ವರೆಗೆ 262 ಮಂದಿ ದಾಖಲಾಗಿದ್ದು, ಈಗ 29 ಮಂದಿ ಮಾತ್ರ ಸೋಂಕಿತರಿದ್ದಾರೆ ಎಂದರು.

ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ತನ್ನ ಅಧೀನ ಅಧಿಕಾರಿಯನ್ನು ಸಭೆಗೆ ಕಳುಸಿದ್ದಕ್ಕೆ ಶಾಸಕರಿಬ್ಬರು ಅವರನ್ನೂ ತರಾಟೆಗೆ ತೆಗೆದುಕೊಂಡರು. ಇಬ್ಬರು ಶಾಸಕರು ಬಂದಿದ್ದರೂ ಅಧಿಕಾರಿ ಕುಂಟು ನೆಪ ಹೇಳಿ ತಪ್ಪಿಸಿಕೊಂಡಿದ್ದಾರೆ. ಬೇರೆ ಸಭೆ ಇದ್ದರೆ ಅನುಮತಿ ಪಡೆದು ಹೋಗ ಬೇಕೆನ್ನುವ ಕನಿಷ್ಠ ಸೌಜನ್ಯವೂ ಅವರಿಗಿಲ್ಲವೇ ಎಂದು ಕಿಡಿಕಾರಿದರು. ಈ ವೇಳೆ ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಯ ಪ್ರಗತಿವಿವರ ಮಂಡಿಸಿದರು.

Advertisement

ಸಭೆಯಲ್ಲಿ ತಾಪಂ ಅಧ್ಯಕ್ಷ ಹ್ಯಾಕನೂರು ಉಮೇಶ್‌, ಜಿಪಂ ಸದಸ್ಯ ಜೈಪಾಲ್‌ ಭರಣಿ, ತಾಪಂ ಸದಸ್ಯ ರಮೇಶ್‌, ತಹಶೀಲ್ದಾರ್‌ ಡಿ.ನಾಗೇಶ್‌, ತಾಪಂ ಇಒ ಜೆರಾಲ್ಡ್‌ ರಾಜೇಶ್‌, ಸಿಪಿಐ ಎಂ.ಆರ್‌.ಲವ, ಸಿಡಿಪಿಓ ಬಸವರಾಜು, ಲಕ್ಷ್ಮಣರಾವ್‌, ಪುರಸಭೆ ಮುಖ್ಯಾಧಿಕಾರಿ ಆರ್‌.ಅಶೋಕ್‌, ಪುರಸಭಾ ಸದಸ್ಯ ಸೋಮು ಹಾಗೂ ಅಧಿಕಾರಿಗಳು ಹಾಜರಿದ್ದರು.

ಶಾಸಕರನ್ನೇ ಕರೆಯುತ್ತಿಲ್ಲ? :  ಸಭೆಯಲ್ಲಿ ಶಾಸಕ ಅಶ್ವಿ‌ನ್‌ ಕುಮಾರ್‌ ಮಾತನಾಡಿ, ಶಿಕ್ಷಣ ಇಲಾಖೆ ಅಧಿಕಾರಿಗಳು ಶಾಸಕರ ಗಮನಕ್ಕೂ ತಾರದೆ ಶಾಲಾ ಮಕ್ಕಳಿಗೆ ಪಠ್ಯ ಪುಸ್ತಕ ವಿತರಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. “ರೀ ಸ್ವಾಮಿ ಅವರೇ ನಮ್ಮನ್ನು ಏನು ಅಂತ ತಿಳಿದಿದ್ದೀರಾ?, ನಾವೇನು ಕಳ್ಳೇಪುರಿ ತಿನ್ನಲು ಬರುತ್ತೇವೆಎಂದು ಕೊಂಡಿದ್ದೀರಾ, ಸರ್ಕಾರದ ಕಾರ್ಯಕ್ರಮಕ್ಕೆ ಯಾಕ್ರಿ ಶಾಸಕರನ್ನೇ ಕರೆಯುತ್ತಿಲ್ಲ’ ಎಂದು ಪ್ರಶ್ನಿಸಿದರು. ಇದಕ್ಕೆ ದನಿಗೂಡಿಸಿದ ಯತೀಂದ್ರ, ಜನರ ದುಡ್ಡಿಂದಲೇ ಶಾಲಾ ಮಕ್ಕಳಿಗೆ ಪುಸ್ತಕ ನೀಡಲಾಗುತ್ತಿದೆ. ಇದನ್ನು ಜನಪ್ರತಿನಿಧಿ ಗಳಿಂದಲೇ ಕೊಡಿಸಬೇಕು. ನೀವು ಅಧಿಕಾರಿಗಳೇ ಎಲ್ಲವನ್ನುಮಾಡಿದರೆ ನಾವ್ಯಾಕೇ ಇರೋದು ಎಂದು ತರಾಟೆಗೆ ತೆಗೆದುಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next