ಗದಗ: ಕೋವಿಡ್-19 ಸೋಂಕು ನಿಯಂತ್ರಿಸಲು ಮುಂಜಾಗ್ರತಾ ಕ್ರಮ ವಹಿಸಿ ಅಭಿವೃದ್ಧಿ ಕಾಮಗಾರಿಗಳತ್ತ ಹೆಚ್ಚು ಒತ್ತು ನೀಡಬೇಕು. ಸರ್ಕಾರದಲ್ಲಿ ಹಣಕಾಸಿನ ಸಮಸ್ಯೆ ಇಲ್ಲ. ಆರೋಗ್ಯ ಉಪಕರಣಗಳ ಖರೀದಿಗೆ ಸಂಬಂಧಿಸಿದಂತೆ ಯಾವುದೇ ನಿರ್ಬಂಧವಿಲ್ಲ. ಆದರೆ ಖರೀದಿಯ ಬಗ್ಗೆ ಸರಿಯಾದ ಲೆಕ್ಕ ಇರಬೇಕು ಎಂದು ಕಂದಾಯ ಸಚಿವ ಆರ್. ಅಶೋಕ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲಾಡಳಿತ ಭವನದ ಜಿಪಂ ಸಭಾಂಗಣದಲ್ಲಿ ನಡೆದ ಪ್ರಕೃತಿ ವಿಕೋಪ ಹಾಗೂ ಕಂದಾಯ ಇಲಾಖೆ ಪ್ರಗತಿಪರಿ ಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸದ್ಯ ಕೋವಿಡ್‌ಗೆ ಔಷಧಇಲ್ಲದಿರುವುದರಿಂದ ಪ್ರತಿಯೊಬ್ಬರೂ ಮಾಸ್ಕ್ ಬಳಕೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಸರ್ಕಾರದ ನಿರ್ದೇಶನಗಳು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ಜನನಿಬೀಡ ಪ್ರದೇಶಗಳಲ್ಲಿ
ಕೋವಿಡ್ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಪ್ರವಾಹ ಪೀಡಿತ ಗ್ರಾಮಗಳಲ್ಲಿ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಬೇಕು. ಸಂತ್ರಸ್ತರು ನಿಗದಿತ ಸಮಯದೊಳಗೆ ಮನೆ ನಿರ್ಮಿಸುವಂತೆ ನೋಡಿ ಕೊಳ್ಳಬೇಕು. ಮನೆ ನಿರ್ಮಿಸದವರಿಗೆ ನೋಟಿಸ್ ಜಾರಿ ಮಾಡಿ “ಎ’ ಮತ್ತು “ಬಿ’ ಕೆಟಗೆರಿಯಿಂದ “ಸಿ’ ಕೆಟಗೆರಿಗೆ ತರಲು ಕ್ರಮ ಕೈಗೊಳ್ಳಬೇಕು. ನೆರೆ ಸಂದರ್ಭದಲ್ಲಿ ಹಾನಿಗೊಳಗಾದವರಿಗೆ ಸೂಕ್ತ ಪರಿಹಾರ ಒದಗಿಸಬೇಕು, ನರೇಗಾ ಯೋಜನೆಯಡಿ ರಸ್ತೆ, ಸ್ಮಶಾನಗಳಿಗೆ ಕಾಂಪೌಂಡ್ ನಿರ್ಮಾಣಕ್ಕೆ ಕ್ರಮ ವಹಿಸಲು ಸೂಚಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ್ ಮಾತನಾಡಿ, ಕಳೆದ ವರ್ಷ ಮಲಪ್ರಭಾ ನದಿಗೆ ಅಧಿಕ ಪ್ರಮಾಣದಲ್ಲಿ ನೀರು ಒಮ್ಮೆಲೆ ಹರಿಸಿದ್ದರ ಪರಿಣಾಮವಾಗಿ ತೀವ್ರ ಪ್ರವಾಹ ಉಂಟಾಗಿತ್ತು. ಪ್ರಸಕ್ತ ಸಾಲಿನಲ್ಲಿ ಹಂತ ಹಂತವಾಗಿ ನೀರು ಬಿಟ್ಟಿರುವುದರಿಂದ ನೆರೆಯ ಭೀಕರತೆಯ ಪ್ರಮಾಣ ಕಡಿಮೆ ಇದೆ. ನರಗುಂದ ತಾಲೂಕಿನ ಲಕಮಾಪುರ ಗ್ರಾಮ ಸ್ಥಳಾಂತರಕ್ಕೆ ಮುಖ್ಯಮಂತ್ರಿ ಒಪ್ಪಿಗೆ ನೀಡಿದ್ದು, ಸಮಸ್ಯೆಗಳನ್ನು ಇತ್ಯರ್ಥಗೊಳಿಸಿ ಶೀಘ್ರದಲ್ಲೇ ಸ್ಥಳಾಂತರಿಸಲಾಗುವುದು.ಅಲ್ಲದೇ, ರಾಜ್ಯದ ಇನ್ನುಳಿದ ಜಿಲ್ಲೆಗಳಲ್ಲಿ ಗುಂಟೆವಾರು ಭೂಮಿ ಖರೀದಿಗೆ ಅವಕಾಶವಿದ್ದು, ಗದಗ ಜಿಲ್ಲೆಯಲ್ಲಿಯೂ ಖರೀದಿಗೆ ಅನುಕೂಲ ಮಾಡಿಕೊಡಬೇಕು. ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಕಳೆದ ಸಾಲಿನಲ್ಲಿ 560 ಕೋಟಿ ರೂ. ಬಿಡುಗಡೆಯಾಗಿತ್ತು. ಆದರೆ, ಪ್ರಸಕ್ತ ಸಾಲಿನಲ್ಲಿ 3 ಕೋಟಿ ರೂ. ಮಾತ್ರ ಬಿಡುಗಡೆಯಾಗಿದೆ. ಇನ್ನೂ ಹೆಚ್ಚಿನ ಅನುದಾನ ಬಿಡುಗಡೆಗೊಳಿಸುವಂತೆ ಕೋರಿದರು.
ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಮಾತನಾಡಿ, ಎಲ್ಲ ತಾಲೂಕುಗಳಲ್ಲಿ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸಲಾಗಿದೆ. ತಾಲೂಕು ಆಸ್ಪತ್ರೆಗಳಲ್ಲಿ 50 ಆಕ್ಸಿಜನ್ ಬೆಡ್ ವ್ಯವಸ್ಥೆ ಮಾಡಲಾಗುತ್ತಿದೆ. ಕೋವಿಡ್‌ಗಾಗಿ 5 ಕೋಟಿ ರೂ. ಅನುದಾನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ರಕೃತಿ ವಿಕೋಪದಡಿ ಒಟ್ಟು 12.27 ಲಕ್ಷ ಅನುದಾನವಿದೆ ಎಂದರು.ಅಪರ ಜಿಲ್ಲಾಧಿಕಾರಿ ಎಂ. ಸತೀಶ್ ಕುಮಾರ್ ಮಾತನಾಡಿ 40 ಗ್ರಾಮಗಳಲ್ಲಿ ರುದ್ರಭೂಮಿಗಾಗಿ ಜಮೀನು ಖರೀದಿಗೆ ಅನುದಾನ ಬಿಡುಗಡೆ ಮಾಡುವಂತೆ ಕೋರಲಾಗಿದೆ ಎಂದು ತಿಳಿಸಿದರು.
ಜಿಪಂ ಅಧ್ಯಕ್ಷ ರಾಜೂಗೌಡಕೆಂಚನಗೌಡ್ರ, ಜಿಪಂ ಉಪಾಧ್ಯಕ್ಷೆ ಶೋಭಾ ಮೇಟಿ, ಶಾಸಕ ರಾಮಣ್ಣ ಲಮಾಣಿ, ನಗರಾಭಿವೃದ್ಧಿ ಪ್ರಾಧಿ ಕಾರದ ಅಧ್ಯಕ್ಷ ಸಂಗಮೇಶ ದುಂದೂರ, ಜಿಪಂ ಸಿಇಒ ಡಾ| ಆನಂದ್ ಕೆ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್‌ಎನ್. ಸೇರಿದಂತೆ ಅಧಿ ಕಾರಿಗಳಿದ್ದರು.