Advertisement

ಕೋವಿಡ್ ಸಾವಿನ ಪ್ರಮಾಣ ತಗ್ಗಿಸಲು ಪರೀಕ್ಷೆ ಹೆಚ್ಚಿಸಿ

02:52 PM Oct 22, 2020 | Suhan S |

ಕೋಲಾರ: ಸಕ್ಕರೆ ಕಾಯಿಲೆ, ಎಚ್‌ಐವಿ, ಕ್ಷಯ, 60 ವರ್ಷ ದಾಟಿದವರು, ಹೃದಯ ಸಂಬಂಧಿ ಕಾಯಿಲೆಗಳು ಇರುವವರನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಿ, ಹೆಚ್ಚಿನ ಕಾಳಜಿ ವಹಿಸುವ ಮೂಲಕ ಸಾವಿನ ಪ್ರಮಾಣ ತಗ್ಗಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಉಮಾಮಹದೇವನ್‌ ತಿಳಿಸಿದರು.

Advertisement

ಜಿಪಂ  ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಜಿಲ್ಲೆಯಲ್ಲಿ ಕೋವಿಡ್‌ ಪಾಸಿಟಿವಿಟಿ ದರದಲ್ಲಿ ಶೇ.3 ರಷ್ಟಿದ್ದು, ರಾಜ್ಯದಲ್ಲಿಯೇ ಅತಿ ಕಡಿಮೆ ಇದ್ದು, ಪ್ರಥಮ ಸ್ಥಾನದಲ್ಲಿದೆ. ಕೋವಿಡ್‌ ತಡೆಯುವಲ್ಲಿ ಅಧಿಕಾರಿಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದೇ ರೀತಿ ಕಾರ್ಯ ನಿರ್ವಹಿಸಿ ಕೋವಿಡ್‌ ಟೆಸ್ಟಿಂಗ್‌ ಹೆಚ್ಚಿಸುವ ಮೂಲಕ ಕೋವಿಡ್‌ -19 ತಡೆಯಬೇಕು ಎಂದರು.

ನರೇಗಾಕಾಮಗಾರಿ ಕೈಗೊಳ್ಳಿ: ಕೋವಿಡ್‌ ಸಂಪರ್ಕಿತರನ್ನು ಪರೀಕ್ಷೆಗೆ ಒಳಪಡಿಸಿ ಹೋಂ ಕ್ವಾರಂಟೈನ್‌ನಲ್ಲಿ ಇಡಬೇಕು. ಮಾಸ್ಕ್ ಧರಿಸಿ, ಸಾಮಾಜಿಕ ಅಂತರಕಾಯ್ದುಕೊಂಡು ಸ್ಯಾನಿಟೈಸರ್‌ ಬಳಸಬೇಕು. ನರೇಗಾ ಯೋಜನೆಯಡಿ ಕಾರ್ಯಗಳನ್ನು ಕೈಗೊಳ್ಳಿ. ಗ್ರಾಮ ಶಿಕ್ಷಣ ಕಾರ್ಯಪಡೆ ರಚಿಸಲಾಗಿದ್ದು, ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ ಶಾಲೆಗೆ ಸೇರಿಸಬೇಕು. ಇವರಿಗೆ ಮೊದಲು ಬ್ರಿಡ್ಜ್ ಕೋರ್ಸ್‌ ಮಾಡಬೇಕು ಎಂದರು.

ಕ್ಯಾಂಪ್‌ಗಳ ಮೂಲಕ ಪರೀಕ್ಷೆ: ಜಿಲ್ಲಾಧಿಕಾರಿ ಸಿ. ಸತ್ಯಭಾಮ ಮಾತನಾಡಿ, ಜಿಲ್ಲೆಯಲ್ಲಿ ಇದುವರೆಗೆ 7,951 ಕೋವಿಡ್‌ ಪ್ರಕರಣ ಕಂಡುಬಂದಿದ್ದು,6,705 ಜನ ಗುಣಮುಖರಾಗಿದ್ದಾರೆ. ಕೋವಿಡ್‌ ದಿಂದ 141 ಜನ ಸಾವನ್ನಪ್ಪಿರುತ್ತಾರೆ. 1105 ಸಕ್ರಿಯ ಪ್ರಕರಣ ಗಳಿವೆ. ಇದರಲ್ಲಿ 38 ಪ್ರಕರಣಗಳಿಗೆ ಐಸಿಯು ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರತಿ ದಿನ ಎಸ್‌ಎನ್‌ಆರ್‌ ಆಸ್ಪತ್ರೆಯಲ್ಲಿಯೇ 900-1000 ಕೋವಿಡ್‌ ಪರೀಕ್ಷೆ ಮಾಡಿಸಲಾಗುತ್ತಿದೆ. ಕ್ಯಾಂಪ್‌ಗಳನ್ನು ಹಾಕಿ ಪರೀಕ್ಷೆನಡೆಸಲಾಗುತ್ತಿದ್ದು, ಕೋವಿಡ್‌ ಕೇರ್‌ ಸೆಂಟರ್‌ಗಳಲ್ಲಿ ಉತ್ತಮ ಸೌಲಭ್ಯ ಕಲ್ಪಿಸಿಕೊಡಲಾಗಿದೆ. ಜಿಲ್ಲೆಯಲ್ಲಿ 2 ಲಕ್ಷ ಎನ್‌ಸಿಡಿ ಪ್ರಕರಣಗಳಿದ್ದು ಎಲ್ಲರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದರು.

ಈಗ ಪಾಸಿಟಿವ್‌ ಕಂಡು ಬಂದ ಮನೆಗಳನ್ನು ಕಂಟೈನ್ಮೆಂಟ್‌ ವ್ಯಾಪ್ತಿ ಎಂದು ಪರಿಗಣಿಸಲಾಗುತ್ತಿದೆ. ಹೋಂಡಾ ಕಂಪನಿ ಅವರು ಸಿಎಸ್‌ಆರ್‌ ನಡಿ ಕೋವಿಡ್‌ ಇರುವವರಿಗೆ ಡಯಾಲಿಸಿಸ್‌ ಮಾಡಲು 18 ಲಕ್ಷ ರೂ. ಮೌಲ್ಯದಮೆನ್‌ನ್ನು ನೀಡುತ್ತಿದ್ದಾರೆಎಂದರು.

Advertisement

ಶೇ.100 ಬಿತ್ತನೆ: ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು, ಶೇ.100 ಬಿತ್ತನೆಯಾಗಿದೆ. ರಸಗೊಬ್ಬರ ದಾಸ್ತಾನು ಅಗತ್ಯಕ್ಕೆ ತಕ್ಕಷ್ಟು ಇದೆ. ಬೆಳೆ ನಷ್ಟಕ್ಕೆ 98 ಲಕ್ಷ ರೂ. ಪರಿಹಾರ ಕೇಳಲಾಗಿದೆ. ಬೆಳೆ ಸಮೀಕ್ಷೆ ಶೇ. 100 ಮುಗಿದಿದೆ. ಜಿಲ್ಲೆಯ 156 ಗ್ರಾಪಂಗಳಲ್ಲಿ 148 ಗ್ರಾಪಂಗಳಿಗೆ ಈಗಾಗಲೇ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಜಾಗ ನೀಡಲಾಗಿದೆ ಎಂದರು.

ಜಿಪಂ ಸಿಇಒ ಎಂ.ಆರ್‌.ರವಿಕುಮಾರ್‌ ಮಾತನಾಡಿ, ನರೇಗಾದಲ್ಲಿ 55,41,000 ಮಾನವ ದಿನಗಳ ಗುರಿ ಇದ್ದು, 40 ಲಕ್ಷ ಮಾನವ ದಿನಗಳ ಕೆಲಸ ಮಾಡಲಾಗಿದೆ. 20 ಖಾಸಗಿ ನರ್ಸರಿಗಳನ್ನು ಗಿಡಗಳ ಪೂರೈಕೆಗೆ ಗುರುತಿಸಲಾಗಿದೆ. ಘನತ್ಯಾಜ್ಯ ವಿಲೇವಾರಿ ಘಟಕಗಳಿಗೆ ಕಸ ಸಂಗ್ರಸಲು ವಾಹನ ಖರೀದಿಗೆ ಕ್ರಮವಹಿಸಲಾಗಿದೆ ಎಂದರು. ಸಭೆಯಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ಜಿಲ್ಲೆ ಗಡಿ ಭಾಗದಲ್ಲಿದ್ದು ತಮಿಳುನಾಡು, ಆಂಧಪ್ರದೇಶದಿಂದ ಜಿಲ್ಲೆಗೆ ಜನ ಬರುತ್ತಾರೆ. ಜಿಲ್ಲೆಯಲ್ಲಿ ಕೋವಿಡ್‌ ದಿಂದ ಇಲ್ಲಿಯವರೆಗೂ 141 ಜನ ಮೃತಪಟ್ಟಿದ್ದಾರೆ. ಗ್ರಾಪಂ ಮಟ್ಟದಲ್ಲಿ ಸ್ಕ್ರೀನಿಂಗ್‌ ಮಾಡಬೇಕು. ಪಂಚಾಯ್ತಿ ಗಳಿಂದ ಹೋಂ ಐಸೋಲೇಷನ್‌ನಲ್ಲಿ ಇರುವವರಿಗೆಕರೆ ಮಾಡಿ ಆರೋಗ್ಯ ವಿಚಾರಿಸಬೇಕು. ಉಮಾ ಮಹದೇವನ್‌, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next