ಚಿಕ್ಕಬಳ್ಳಾಪುರ: ರಾಜ್ಯ ಸರ್ಕಾರದಿಂದ 2600 ಕೋಟಿಗೂ ಹೆಚ್ಚು ಅನುದಾನವನ್ನು ಆಹಾರ, ನಾಗರಿಕ ಸರಬರಾಜು ಇಲಾಖೆಗೆ ನೀಡಲಾಗಿದೆ. ಇನ್ಮುಂದೆ ಗ್ರಾಹಕರಿಗೆ ನ್ಯಾಯಬೆಲೆ ಅಂಗಡಿಗಳ ಮೂಲಕ 2 ಕೆ.ಜಿ ಗೋಧಿ ಹಾಗೂ 5 ಕೆ.ಜಿ ಅಕ್ಕಿ ನೀಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಹಾಗೂ ಗ್ರಾಹಕರ ವ್ಯವಹಾರಗಳ ಖಾತೆ ಸಚಿವ ಕೆ.ಗೋಪಾಲಯ್ಯ ತಿಳಿಸಿದರು.
ಚಿಕ್ಕಬಳ್ಳಾಪುರದಲ್ಲಿ ಶನಿವಾರ ಗ್ರಾಹಕರು ವಸ್ತುವಿನ ಬೆಲೆ, ನಿಗದಿತ ಅವಧಿ, ರಸೀದಿ ಪಡೆದುಕೊಳ್ಳುವ ಜೊತೆಗೆ ಗ್ರಾಹಕ ಹಕ್ಕುಗಳ ಬಗ್ಗೆ ಜ್ಞಾನ ಹೊಂದಿರ ಬೇಕೆಂದು ಹಾಗೂ ಗ್ರಾಹಕರ ಹಕ್ಕುಗಳಿಗೆ ಚ್ಯುತಿ ಬಂದಾಗ ಜಿಲ್ಲಾ ಗ್ರಾಹಕರ ವೇದಿಕೆಗೆ ದೂರು ಸಲ್ಲಿಸಿ ಪರಿಹಾರ ಪಡೆದುಕೊಳ್ಳಬೇಕು ಎಂದರು.
ಗ್ರಾಹಕರ ರಕ್ಷಣೆಗಾಗಿ ಸರ್ಕಾರ ಕಾನೂನು ರೂಪಿಸಿ ಹಕ್ಕುಗಳು ಮತ್ತು ಜವಾಬ್ದಾರಿ ನೀಡಿದೆ. ಗ್ರಾಹಕರಿಗೆ ಸುರಕ್ಷತೆ, ವಸ್ತುವಿನ ಬಗ್ಗೆ ಮಾಹಿತಿ, ಆಯ್ಕೆ ಸ್ವಾತಂತ್ರ್ಯ ನೀಡಲಾಗಿದೆ. ಸರಕು ಮತ್ತು ಸೇವೆ ಬಗ್ಗೆ ಸೂಕ್ತ ಮಾಹಿತಿ ನೀಡದೆ ಮೋಸ ಮಾಡಿದರೆ ಗ್ರಾಹಕರು ನ್ಯಾಯಕ್ಕಾಗಿ ಕಾನೂನಾತ್ಮಕ ಹೋರಾಟ ನಡೆಸಬೇಕು ಎಂದರು.
ದೊಡ್ಡ ಶಕ್ತಿ: ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕೆ.ಅಮರ ನಾರಾಯಣ ಮಾತನಾಡಿ, ಸಮಾಜದಲ್ಲಿ ಬದುಕಬೇಕಾದರೆ ಸಂವಿಧಾನ ಒದಗಿಸಿರುವ ಎಲ್ಲಾ ಹಕ್ಕುಗಳ ಬಗೆಗಿನ ಜ್ಞಾನ ಅಗತ್ಯ. ಕೆಲವು ವರ್ಷಗಳ ಹಿಂದೆ ನಮ್ಮಲ್ಲಿ ಗ್ರಾಹಕರ ರಕ್ಷಣೆಗಾಗಿ ಯಾವ ಕಾಯ್ದೆ, ಕಾನೂನುಗಳಾಗಲಿ ಇರಲಿಲ್ಲ. ಗ್ರಾಹಕರ ರಕ್ಷಣಾ ಕಾಯ್ದೆ, ಗ್ರಾಹಕರಿಗೆ ಅಗತ್ಯವಿರುವ ಹಕ್ಕುಗಳನ್ನು ನೀಡಿದೆ. ಸದ್ಯ ಗ್ರಾಹಕ ರಕ್ಷಣಾ ಕಾಯ್ದೆ, ಸಾರ್ವಜನಿಕರ ಪಾಲಿನ ಅತಿ ದೊಡ್ಡ ಶಕ್ತಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ರಿಜಿಸ್ಟ್ರರ್ ಮತ್ತು ಆಡಳಿತಾಧಿಕಾರಿ ರಾಜು ಎನ್., ಅಪರ ಡೀಸಿ ಆರತಿ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಅಧ್ಯಕ್ಷ ಶ್ರೀನಿವಾ ಸಯ್ಯ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕೆ.ಹೆಚ್. ತಮ್ಮೇಗೌಡ, ಜಿಲ್ಲಾ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕ ಸೋಮಶಂಕರಪ್ಪ ಉಪಸ್ಥಿತರಿದ್ದರು.