ಕಲಕೇರಿ : ಪ್ರತಿಯೊಬ್ಬರೂ ಧರ್ಮ ಕಾರ್ಯ ಮಾಡಿ ಸನ್ಮಾರ್ಗದಲ್ಲಿ ನಡೆದಾಗ ಮಾತ್ರ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಮುಂಡರಗಿ ಜಗದ್ಗುರು ನಾಡೋಜ ಡಾ| ಅನ್ನದಾನೀಶ್ವರ ಮಹಾಶಿವಯೋಗಿಗಳು ಹೇಳಿದರು.
ಪಟ್ಟಣದ ಪಂಚರಂಗ ಸಂಸ್ಥಾನ ಗದ್ದುಗೆ ಮಠದ ಆವರಣದಲ್ಲಿ ನಡೆದ ಗುರು ಮಡಿವಾಳೇಶ್ವರ ಶಿವಾಚಾರ್ಯರ 5ನೇ ವರ್ಷದ ಪಟ್ಟಾಧಿಕಾರ ಮಹೋತ್ಸವ ಪ್ರಯುಕ್ತ ಏರ್ಪಡಿಸಿದ್ದ ಶಿವಶರಣೆ ಗುಡ್ಡಾಪುರ ದಾನಮ್ಮದೇವಿ ಪುರಾಣ ಮಹಾ ಮಂಗಲೋತ್ಸವ, ಧರ್ಮಸಭೆ, ಶ್ರೀಗಳ ಬೆಳ್ಳಿ ತುಲಾಭಾರ, ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ವಿಜಯಪುರ ಚಾಣಕ್ಯ ಕರಿಯರ್ ಅಕಾಡೆಮಿ ಅಧ್ಯಕ್ಷ ಎನ್.ಎಂ. ಬಿರಾದಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬರೂ ಜೀವನದಲ್ಲಿ ಭಾವಶುದ್ಧಿ, ವಿಚಾರಶುದ್ಧಿ, ವಾಕ್‌ಶುದ್ಧಿ ಮತ್ತು ಕ್ರಿಯಾಶುದ್ಧಿ ಇಟ್ಟುಕೊಂಡು ನಡೆದಾಗ ಮಾತ್ರ ಯಶಸ್ಸು ಸಾಧ್ಯ. ಇಂತಹ ಮನಸ್ಥಿತಿ ನಿರ್ಮಿಸುವಲ್ಲಿ ಮಠ-ಮಾನ್ಯಗಳ ಪಾತ್ರ ದೊಡ್ಡದು ಎಂದರು.
ಸಿಂದಗಿ ಪ್ರಭುಸಾರಂಗದೇವ ಶಿವಾಚಾರ್ಯರು, ಕಲಕೇರಿ ಹಿರೇಮಠದ ಸಿದ್ಧರಾಮ ಶಿವಾಚಾರ್ಯರು ಮಾತನಾಡಿ, ಪಂ. ಪುಟ್ಟರಾಜ ಕವಿ ಗವಾಯಿಗಳ ಬೆಳ್ಳಿ ತುಲಾಭಾರ ಮಾಡಿದ್ದನ್ನು ಸ್ಮರಿಸಿ ಇದು ರಾಜ್ಯದಲ್ಲಿ ನಡೆದ ಎರಡನೇ ಬೆಳ್ಳಿ ತುಲಾಭಾರ. ಭಕ್ತರ ಶಕ್ತಿ ಮತ್ತು ಶ್ರದ್ಧೆ ಇದು ತೋರಿಸುತ್ತದೆ. ಭಕ್ತರ ಶಕ್ತಿಯೇ ಮಠದ ಶಕ್ತಿಯಾಗಿದ್ದು, ಗುರುವಿನಲ್ಲಿ ಅಚಲ ಭಕ್ತಿ ಇಟ್ಟು ನಡೆದಾಗ ಬದುಕು ಸುಂದರವಾಗುತ್ತದೆ ಎಂದರು.
ಹಿರೂರಿನ ಜಯಸಿದ್ದೇಶ್ವರ ಶಿವಾಚಾರ್ಯರು, ಕೆಸರಟ್ಟಿಯ ಶಂಕರಲಿಂಗ ಗುರುಪೀಠದ ಸೋಮಲಿಂಗ ಮಹಾರಾಜರು, ಕಾಂಗ್ರೆಸ್ ಧುರೀಣ ಬಿ.ಎಸ್. ಪಾಟೀಲ ಯಾಳಗಿ, ಜೆಡಿಎಸ್ ಮುಖಂಡ ರಾಜುಗೌಡ ಪಾಟೀಲ ಕುದರಿಸಾಲೋಡಗಿ ಮಾತನಾಡಿದರು. ಸಾಧಕರಿಗೆ ಸತ್ಕಾರ: ಬೆಳಗ್ಗೆ 1008 ಮುತ್ತೆ$çದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಮಠದ ವತಿಯಿಂದ ಸತ್ಕರಿಸಲಾಯಿತು. ಕಲಕೇರಿ ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ ಸದ್ಭಕ್ತರು ದಾನವಾಗಿ ಕೊಟ್ಟಿರುವ ಬೆಳ್ಳಿಯಿಂದ ಶ್ರೀ ಗುರು ಮಡಿವಾಳೇಶ್ವರ ಶಿವಾಚಾರ್ಯರ ಬೆಳ್ಳಿ ತುಲಾಭಾರ ವಿಜೃಂಭಣೆಯಿಂದ ಜರುಗಿತು.
ಇದೇ ವೇಳೆ ಕಲಕೇರಿ ಗ್ರಾಪಂ ನೂತನ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು ಶ್ರೀಗಳಿಗೆ ಬೆಳ್ಳಿ ಖಡ್ಗ ನೀಡಿ ಗೌರವಿಸಿದರು. ಕಾರ್ಯಕ್ರಮದ ಪ್ರಾರಂಭದಲ್ಲಿ ದೀಪಾ ಮೂಲಿಮನಿ ಮತ್ತು ಅನನ್ಯ ಹಡಪದ ಭರತನಾಟ್ಯ ಪ್ರಸ್ತುತಪಡಿಸಿದರು. ಈ ವೇಳೆ ಕೆರೂಟಗಿಯ ಶಿವಬಸವ ಶ್ರೀ, ಕೊಕಟನೂರಿನ ಮಡಿವಾಳೇಶ್ವರ ಶ್ರೀ, ಕಲಬುರಗಿ ರೋಜಾ ಹಿರೇಮಠದ ಕೆಂಚಬಸವ ಶ್ರೀ, ರಟಕಲ್‌ದ ರೇವಣಸಿದ್ದ ಶ್ರೀ, ಪಂ. ರಾಜಗುರು ಗುರುಸ್ವಾಮಿ ಕಲಕೇರಿ, ಚಬನೂರಿನ ರಾಮಲಿಂಗಯ್ಯ ಸ್ವಾಮಿಗಳು, ಕೋರವಾರ ಚೌಕಿಮಠದ ಮುರುಘೇಂದ್ರ ಶ್ರೀ, ನೀಲೂರ ಹಿರೇಮಠದ ಶರಣಯ್ಯ ಸ್ವಾಮಿಗಳು, ವಡವಡಗಿ ನಂದಿಮಠದ ವೀರಸಿದ್ಧ ಮಹಾಸ್ವಾಮಿಗಳು, ಸಾಹೇಬಗೌಡ ಪಾಟೀಲ ಸಾಸನೂರ, ಗುತ್ತಿಗೆದಾರ ಶಂಕರಗೌಡ ಬಿರಾದಾರ ಇತರರಿದ್ದರು.