Advertisement

ಅಸ್ತಿತ್ವವಾದಿ ಹೋರಾಟಗಳನ್ನು ಚಲನಚಿತ್ರಗಳಲ್ಲಿ ಸೆರೆಹಿಡಿದ ಸತ್ಯಜಿತ್ ರೇ : ಮನು ಚಕ್ರವರ್ತಿ

08:07 PM Dec 04, 2021 | Team Udayavani |

ಮಣಿಪಾಲ : ಮಾಸ್ಟರ್ ಫಿಲ್ಮ್ ಮೇಕರ್ ಸತ್ಯಜಿತ್ ರೇ ಅವರು ಜಾಗತೀಕರಣದಿಂದ ಉದ್ಭವಿಸುವ ಸಮಸ್ಯೆಗಳ ಬಗ್ಗೆ ‘ಭವಿಷ್ಯ’ವೆನಿಸುವಂತ ಮಾತುಗಳನ್ನಾಡಿ ಮಧ್ಯಮ ವರ್ಗದ ‘ಅಸ್ತಿತ್ವವಾದಿ ಹೋರಾಟ’ಗಳನ್ನು ತಮ್ಮ ಅನೇಕ ಚಲನಚಿತ್ರಗಳಲ್ಲಿ ಸೆರೆಹಿಡಿದಿದ್ದಾರೆ ಎಂದು ರಾಷ್ಟ್ರೀಯ ಸ್ವರ್ಣ ಕಮಲ ಪ್ರಶಸ್ತಿ ವಿಜೇತ ಚಲನಚಿತ್ರ ವಿಮರ್ಶಕ ಪ್ರೊ.ಎನ್ ಮನು ಚಕ್ರವರ್ತಿ ಹೇಳಿದರು.

Advertisement

ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ (GCPAS) ಸತ್ಯಜಿತ್ ರೇ ಜನ್ಮ ಶತಮಾನೋತ್ಸವದ ಅಂಗವಾಗಿ ಆಯೋಜಿಸಿದ್ದ ರೇ ಸ್ಮರಣಾರ್ಥ ಉಪನ್ಯಾಸದಲ್ಲಿ ಪ್ರೊ.ಚಕ್ರವರ್ತಿ ಮಾತನಾಡುತ್ತಿದ್ದರು. ಸತ್ಯಜಿತ್ ರೇ ಅವರ ಮಹಾನಗರ್, ನಾಯಕ್, ಪ್ರತಿಧ್ವನಿ, ಸೀಮಾಬಧ್ ಮುಂತಾದ ಅನೇಕ ಚಲನಚಿತ್ರಗಳಲ್ಲಿ ಬಂಡವಾಳಶಾಹಿ ಜಾಗತೀಕರಣದ ಸ್ವರೂಪವನ್ನು ಉಲ್ಲೇಖಿಸಿದ್ದಾರೆ ಎಂದರು.

ರೇ ಅವರ ಚಲನಚಿತ್ರವೊಂದರ ಸಂಭಾಷಣೆಯನ್ನು ಉಲ್ಲೇಖಿಸಿದ ಅವರು- ಮನುಷ್ಯ ಚಂದ್ರನ ಮೇಲೆ ಪಾದಾರ್ಪಣೆ ಮಾಡಿರುವುದಕ್ಕಿಂತಲೂ, ನ್ಯಾಯ ಮತ್ತು ಸಮಾನತೆ ಪ್ರಜ್ಞೆಯ ಉಗಮವೇ ಆಧುನಿಕ ಯುಗದ ಉನ್ನತ ಸಾಧನೆ ಎಂದು ರೇ ನಂಬಿದ್ದರು. ರೇ ಅವರ ಮಹಿಳಾ ಪಾತ್ರಗಳು ಗಟ್ಟಿತನದ ಮತ್ತು ವಿಭಿನ್ನ ಪಾತ್ರಗಳು; ವಾಸ್ತವವಾಗಿ, ಪ್ರಬಲ ಪುರುಷವಾದಿ ನಿರೂಪಣೆಗಿಂತ ಭಿನ್ನವಾದವು ಎಂದು ಹೇಳಿದರು.

ರಾಜಾರಾಮ್ ಮೋಹನ್ ರಾಯ್, ಈಶ್ವರ ಚಂದ್ರ ವಿದ್ಯಾ ಸಾಗರ್ ಮತ್ತು ಗುರುದೇವ್ ರವೀಂದ್ರನಾಥ ಠಾಗೋರ್ ಮತ್ತು ಮಹಾತ್ಮ ಗಾಂಧಿಯವರ ಬೌದ್ಧಿಕ ಪರಂಪರೆಯನ್ನು ಮೈಗೂಡಿಸಿಕೊಂಡ ರೇ ವಸಾಹತುಶಾಹಿ, ರಾಷ್ಟ್ರೀಯತೆ, ಮಹಿಳೆಯರು, ಶಿಕ್ಷಣ, ಆಧುನಿಕತೆ, ಯುದ್ಧ ಮತ್ತು ಶಾಂತಿ ಇತ್ಯಾದಿಗಳ ಬಗ್ಗೆ ತಮ್ಮದೇ ಅಭಿಪ್ರಾಯಗಳನ್ನು ರೂಪಿಸಿಕೊಂಡಿದ್ದರು. ಅವರ ಘರೆ ಬೈರೆ, ಶತ್ರಂಜ್ ಕೆ ಕಿಲಾಡಿ ಮುಂತಾದ ಚಿತ್ರಗಳಲ್ಲಿ ಅವು ಪ್ರತಿಬಿಂಬಿತವಾಗಿದೆ ಎಂದರು.

ಅಮಾನವೀಯ ಜಾಗತೀಕರಣ ಪ್ರಕ್ರಿಯೆಯಲ್ಲಿ ಸಿದ್ಧ ಪಾಲುದಾರರಾಗುತ್ತಿರುವವರನ್ನು ಟೀಕಿಸಿದ ಪ್ರೊ.ಚಕ್ರವರ್ತಿ, ರೇ ಚಲನಚಿತ್ರಗಳ ಮೂಲಕ ಅವರ ಅಭಿಪ್ರಾಯವನ್ನು ಉದಾಹರಿಸಿ, ಶೋಷಿತರ ದುಃಖದ ಭಾರದ ಶ್ರೀಮಂತಿಕೆ ಸಲ್ಲದು ಎಂದು ಹೇಳಿದರು.

Advertisement

ಇದನ್ನೂ ಓದಿ : 3 ವರ್ಷದ ಹಿಂದೆ ಜೀವಾವಧಿ ಶಿಕ್ಷೆಗೆ ಗುರಿಯಾಗಿ ತಪ್ಪಿಸಿಕೊಂಡಿದ್ದ ಅಪರಾಧಿ ಸೆರೆ

ಇದಕ್ಕೂ ಮುನ್ನ ಮಾತನಾಡಿದ ಜಿಸಿಪಿಎಎಸ್ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ, ರೇ ತಮ್ಮ ಕಾಲದ ನೈಜತೆಯನ್ನು ‘ವಾಸ್ತವಿಕತೆಯನ್ನು’ ಸಿನಿಮೀಯ ವಿಧಾನದಲ್ಲಿ ಸೆರೆಹಿಡಿದು, ಮಹಾನ್ ಚಲನಚಿತ್ರ ನಿರ್ದೇಶಕರಾಗಿ ಹೊರಹೊಮ್ಮಿ, ಅಭಿಜಾತ ಕೃತಿಗಳನ್ನು ನಿರ್ಮಿಸಿದ್ದಾರೆ ಎಂದರು.

ಪ್ರೊ ಫಣಿರಾಜ್ ಮಾತನಾಡಿ ರೇ ತಮ್ಮ ಮಾನವತಾವಾದ ಮತ್ತು ಆಧುನಿಕತಾವಾದದೊಂದಿಗೆ ಸಮಕಾಲೀನರಾಗಿ ಉಳಿದಿದ್ದಾರೆ ಎಂದು ಹೇಳಿದರು.

ಮನಸ್ವಿನಿ ಶ್ರೀರಂಗಂ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಚಲನಚಿತ್ರ ಲೇಖಕಿ ಮೈಥಿಲಿ ರಾವ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next