Advertisement

ಅರ್ಥಶಾಸ್ತ್ರವನ್ನು ಜನಸಾಮಾನ್ಯರಿಗೆ ಅರ್ಥವಾಗುವಂತೆ ಬರೆಯುವ ಶಕ್ತಿ ಪ್ರೊ.ಚಿಂತಾಮಣಿಯವರಿಗಿದೆ

08:20 PM Sep 07, 2021 | Team Udayavani |

ಚಾಮರಾಜನಗರ:  ಅರ್ಥಶಾಸ್ತ್ರದಂತಹ ಸಂಕೀರ್ಣ ವಿಷಯವನ್ನು ಜನಸಾಮಾನ್ಯರಿಗೂ ಸುಲಭವಾಗಿ ಅರ್ಥವಾಗುವಂತೆ ಬರೆಯುವ ಶಕ್ತಿ ಪ್ರೊ. ಆರ್.ಎಂ.ಚಿಂತಾಮಣಿಯವರಿಗೆ ಸಿದ್ಧಿಸಿದೆ ಎಂದು ಹಿರಿಯ ಅರ್ಥಶಾಸ್ತ್ರಜ್ಞ, ನಿವೃತ್ತ ಪ್ರಾಧ್ಯಾಪಕ ಪ್ರೊ. ಸಿ.ಕೆ. ರೇಣುಕಾರ್ಯ ಶ್ಲಾಘಿಸಿದರು.

Advertisement

ನಗರದ ವರ್ತಕರ ಭವನದಲ್ಲಿ ಮಂಗಳವಾರ ಪ್ರೊ. ಚಿಂತಾಮಣಿಯವರ ಅಭಿಮಾನಿ ಬಳಗ ಏರ್ಪಡಿಸಿದ್ದ ಚಿಂತಾಮಣಿ ಅವರು ಬರೆದ ವಿದ್ಯಮಾನ ಮತ್ತು ಆರ್ಥ ಚಿಂತನ ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಚಿಂತಾಮಣಿಯವರು ಅಧ್ಯಾಪಕರಾಗಿ, ಬರಹಗಾರರಾಗಿ ಚಿರಪರಿಚಿತರು. ಸ್ನೇಹಜೀವಿ, ವಿಶ್ವಾಸಿ ಪ್ರಾಮಾಣಿಕ ವ್ಯಕ್ತಿ. ಅಧ್ಯಯನ, ಚಿಂತನೆ, ಬರವಣಿಗೆಗೆ 24 ಗಂಟೆಗಳನ್ನೂ ಮೀಸಲಿಟ್ಟಿದ್ದಾರೆ. ಜನ ಸಾಮಾನ್ಯರು ಅರ್ಥಶಾಸ್ತ್ರವನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ಜಿಎಸ್‌ಟಿ, ಡೀಮಾನಟೈಸೇಷನ್ ಇಂಥ ವಿಷಯಗಳು ಕ್ಲಿಷ್ಟಕರ. ಇವನ್ನು ಜನರಿಗೆ ಅರ್ಥವಾಗುವಂತೆ ವಿಶ್ಲೇಷಣೆ ಮಾಡುವ ಶಕ್ತಿ ಅವರಿಗಿದೆ.ಅವರ ಬಿಡಿ ಲೇಖನಗಳು ಈಗ ಪುಸ್ತಕ ರೂಪದಲ್ಲಿ ಬಂದಿರುವುದು ಆಸಕ್ತರಿಗೆ ಅನುಕೂಲಕರವಾಗಿದೆ ಎಂದರು.

ಚಿಂತಾಮಣಿಯವರಿಗಿರುವ ಆಳವಾದ ಜ್ಞಾನ, ದೇಶದ ಬಗ್ಗೆ, ಜನಸಾಮಾನ್ಯರ ಬಗ್ಗೆ ಇರುವ ಕಾಳಜಿ ಮೆಚ್ಚುವಂಥದ್ದು. ಜನ ಸಾಮಾನ್ಯರ ಬದುಕು ಹಸನಾಗಬೇಕು ಎಂಬುದು ಅವರ ಆಶಯವಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ :ಇರುವೆಯ ಹಲ್ಲಿನ ರಹಸ್ಯ ಬಯಲು! ಸತುವಿನ ಅಣುಗಳಿಂದಲೇ ಇರುವೆಗೆ ಸೂಪರ್‌ ಪವರ್‌

Advertisement

ದೇಶದಲ್ಲಿ ಉತ್ಪತ್ತಿಯಾಗುವ ಸಂಪತ್ತು, ವರಮಾನ ಸಮಾನವಾಗಿ ಹಂಚಿಕೆಯಾಗದಿದ್ದರೆ ದೇಶ ಪ್ರಗತಿ ಹೊಂದಿದೆ ಎಂದು ಹೇಳಲು ಸಾಧ್ಯವಿಲ್ಲ. ನಮ್ಮಲ್ಲಿ ಸಾಕಷ್ಟು ಸಂಪತ್ತು, ಮಾನವ ಸಂಪನ್ಮೂಲಗಳಿವೆ. ಆದರೆ ಅದರ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ ಎಂದು ರೇಣುಕಾರ್ಯ ವಿಷಾದಿಸಿದರು.

ಕೃತಿಗಳ ಕರ್ತೃ ಪ್ರೊ. ಚಿಂತಾಮಣಿ ಮಾತನಾಡಿ, ಚಾಮರಾಜನಗರ ನನಗೆ ಮತ್ತು ನನ್ನ ಕುಟುಂಬಕ್ಕೆ ಸಾಕಷ್ಟು ಕೊಟ್ಟಿದೆ ಎಂದು ಭಾವುಕರಾದರು. ಚಾಮರಾಜನಗರದಿಂದ ತಮಿಳುನಾಡಿನ ಮೆಟ್ಟುಪಾಳ್ಯಂಗೆ ರೈಲ್ವೆ ಮಾರ್ಗ ಮುಂದುವರೆಯಬೇಕು ಎಂಬುದು ನನ್ನ ಮಹತ್ವಾಕಾಂಕ್ಷೆ. ಇದನ್ನು ಮುಂದಿನ ಪೀಳಿಗೆಯವರಾದರೂ ಈಡೇರಿಸಬೇಕು ಎಂದು ಅವರು ಆಶಿಸಿದರು.

ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಸಮಾರಂಭ ಉದ್ಘಾಟಿಸಿ ಮಾತನಾಡಿ, ಅರ್ಥಶಾಸ್ತ್ರವು ಶ್ರೀಸಾಮಾನ್ಯನಿಂದ ಮೊದಲುಗೊಂಡು ರಾಜನವರೆಗೆ ನೇರ ಪರಿಣಾಮ ಬೀರುತ್ತದೆ. ಅರ್ಥಶಾಸ್ತ್ರಜ್ಞನಿಗೆ ಸಾಮಾಜಿಕ ಕಳಕಳಿ ಜೊತೆಗೆ ಒಳಮುಖ ಇರಬೇಕು. ಚಿಂತಾಮಣಿ ಅವರು ಕಳೆದ 50 ವರ್ಷಗಳಿಂದ ಚಿಂತನೆ ಅಧ್ಯಯನದ ಮೂಲಕ ಸಮಾಜಕ್ಕೆ ಸೇವೆ ಸಲ್ಲಿಸಿದ್ದಾರೆ ಎಂದರು.

ಅಭಿಮಾನಿ ಬಳಗದ ಅಧ್ಯಕ್ಷ ಬಿ.ವಿ. ವೆಂಕಟನಾಗಪ್ಪಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಎ ಡಿಸಿಲ್ವ, ಕೆ. ವೆಂಕಟರಾಜು, ವೆಂಕಟರಮಣಸ್ವಾಮಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next