Advertisement

ವೈದ್ಯಕೀಯ ಪ್ರಯೋಗಾಲಯದಲ್ಲಿ ಮೂತ್ರ ಪರೀಕ್ಷೆಗೆ  ಸಂಗ್ರಹಣಾ ವಿಧಾನ

09:04 PM Aug 14, 2021 | Team Udayavani |

ನಮ್ಮ ದೇಹದ ಯೋಗಕ್ಷೇಮವನ್ನು ತಿಳಿಯಲು ವೈದ್ಯಕೀಯ ಪ್ರಯೋಗಾಲಯದಲ್ಲಿ ಮಾಡಲಾಗುವ ಪರೀಕ್ಷೆಗಳಲ್ಲಿ ಮೂತ್ರ ಪರೀಕ್ಷೆಯು ಒಂದು. ಮೂತ್ರವು ಮಾನವ ದೇಹದಿಂದ ಹೊರಹಾಕಲ್ಪಡುವ ದ್ರವ ರೂಪದ ತ್ಯಾಜ್ಯವಾಗಿರುತ್ತದೆ. ಆದರೂ ಇದು ನಮ್ಮ ದೇಹದ ಆರೋಗ್ಯವನ್ನು ತಿಳಿಯುವಲ್ಲಿ ಅಪಾರ ಪ್ರಮಾಣದ ಮಾಹಿತಿಯನ್ನು ಹೊಂದಿದೆ ಮತ್ತು ಹೆಚ್ಚಿನ ಸಂದರ್ಭಗಳಲ್ಲಿ ಇದನ್ನು ಸುಲಭವಾಗಿ ನೋವಿಲ್ಲದೇ ಸಂಗ್ರಹಿಸಬಹುದಾಗಿದೆ. ಆದುದರಿಂದ ಪ್ರಯೋಗಾಲಯದಲ್ಲಿ ನಡೆಸಲಾಗುವ ರೋಗ ನಿರ್ಣಾಯಕದ ಮೊದಲ ಸುತ್ತಿನ ಪರೀಕ್ಷೆಗಳಲ್ಲಿ ಮೂತ್ರ ವಿಶ್ಲೇಷಣಾ ಪ್ರಕ್ರಿಯೆಯು ಅಮೂಲ್ಯ ಪಾತ್ರ ವಹಿಸುತ್ತದೆ. ವೈದ್ಯರು ತಮ್ಮ ಕೂಲಂಕಷವಾದ ಪರೀಕ್ಷೆಯಿಂದ ಕಂಡುಕೊಂಡ ರೋಗದ ಮಾಹಿತಿಯನ್ನು ನಿಖರಪಡಿಸಲು ಮತ್ತು ವಿಶ್ಲೇಷಿಸಲು ಇದು ತುಂಬಾ ಪ್ರಯೋಜನಕಾರಿಯಾಗಿದೆ.

Advertisement

ಪ್ರಯೋಗಾಲಯದ ಉತ್ತಮ ಫ‌ಲಿತಾಂಶ ಪಡೆಯುವಲ್ಲಿ  ಈ ಕೆಳಗಿನವುಗಳು ಬಹಳ ಪ್ರಮುಖವಾಗಿರುತ್ತವೆ:  

  1. ಸಂಗ್ರಹಣೆಗಾಗಿ ಉಪಯೋಗಿಸುವ ಪಾತ್ರೆಗಳು
  • ಗಾಜಿನ ಬಾಟಲ್‌ಗ‌ಳು: ಕೆಲವು ವರುಷಗಳ ಹಿಂದೆ ಅಗಲ ಬಾಯಿಯ ಗಾಜಿನ ಬಾಟಲ್‌ಗ‌ಳನ್ನು ಉಪಯೋಗಿಸಲಾಗುತ್ತಿತ್ತು. ಇದನ್ನು ಸ್ವತ್ಛಗೊಳಿಸಿ, ಒಣಗಿಸಿ ಪುನಃ ಉಪಯೋಗಿಸಲಾಗುತ್ತಿತ್ತು. ಸಂಗ್ರಹಣೆ ಮಾಡುವ ಮೊದಲು ಸೂಕ್ತವಾಗಿ ವ್ಯಕ್ತಿಯ ಹೆಸರು ಮತ್ತಿತರ ಮಾಹಿತಿಗಳನ್ನು ಕಾಳಜಿಯಿಂದ ನಮೂದಿಸಬೇಕು.
  • ಪ್ಲಾಸ್ಟಿಕ್‌ ಅಥವಾ ಕಾಗದಲೇಪಿತ ಸಂಗ್ರಹಣ ಪಾತ್ರೆಗಳು: ಇದನ್ನು ಒಂದು ಸಲ ಮಾತ್ರ ಉಪಯೋಗಿಸಲಾಗುತ್ತದೆ. ಅನಂತರ ಅದನ್ನು ತ್ಯಜಿಸಲಾಗುತ್ತದೆ, ಮರುಬಳಕೆ ಮಾಡಲಾಗದು. ಇದು ವಿವಿಧ ಗಾತ್ರಗಳಲ್ಲಿ ಸೂಕ್ತವಾದ ಮುಚ್ಚಳದೊಂದಿಗೆ ದೊರೆಯುತ್ತದೆ. ಇದರ ಬಳಕೆಯಿಂದ ಸೂಕ್ಷ್ಮಾಣು ಜೀವಿಗಳ ಮಾಲಿನ್ಯವನ್ನೂ ತಡೆಯಬಹುದು.
  • ಪಾಲಿಥೀನ್‌ ಚೀಲಗಳು: ಮುಖ್ಯವಾಗಿ ಶಿಶುಗಳಿಂದ ಸಂಗ್ರಹಣೆ ಮಾಡಲು ಇದನ್ನು ಉಪಯೋಗಿಸುತ್ತಾರೆ. ಮೂತ್ರದ್ವಾರದ ಸುತ್ತಲಿನ ಚರ್ಮಕ್ಕೆ ಇದನ್ನು ಅಂಟಿಸಲಾಗುತ್ತದೆ. ತುಂಬಿದ ಅನಂತರ ಸೂಕ್ತವಾದ ಬಾಟಲಿಗಳಿಗೆ ವರ್ಗಾಯಿಸಿ ಪ್ರಯೋಗಾಲಯಕ್ಕೆ ನೀಡುತ್ತಾರೆ. ಮಕ್ಕಳಲ್ಲಿ ಉಪಯೋಗಿಸಲಾಗುವ ಡಯಾಪರ್‌ಗಳಿಂದ ಯಾವುದೇ ಕಾರಣಕ್ಕೂ ಸಂಗ್ರಹಿಸಬಾರದು.
  1. ಮಾದರಿ ಸಂಗ್ರಹ ವಿಧಾನಗಳು ಮಾದರಿಯನ್ನು ಪಡೆಯುವ ವಿಧಾನಗಳು :

ಸಾಮಾನ್ಯವಾಗಿ ಎಲ್ಲ ಪರೀಕ್ಷೆಗಳಿಗೆ (ಬ್ಯಾಕ್ಟೀರಿಯಾಲಜಿ ಹೊರತು ಪಡಿಸಿ) ಮಿಡಸ್ಟ್ರೀಮ್‌ ಅಂದರೆ, ಸ್ವಲ್ಪ ಮೂತ್ರವನ್ನು ಹೊರಬಿಟ್ಟು ಮಧ್ಯದ ಮೂತ್ರವನ್ನು ನೇರವಾಗಿ ಸ್ವತ್ಛವಾದ ಬಾಟಲ್‌ಗ‌ಳಲ್ಲಿ ಸಂಗ್ರಹಿಸಲು ಸೂಚಿಸಲಾಗುತ್ತದೆ. ಸಂಗ್ರಹಿಸಿದ ತತ್‌ಕ್ಷಣ ಸರಿಯಾದ ಮುಚ್ಚಳದಿಂದ ಮುಚ್ಚಿ ನೇರವಾಗಿ ವಿಳಂಬ ಮಾಡದೇ ಶೇಖರಣ ಸ್ಥಳ ಅಥವಾ ಪ್ರಯೋಗಾಲಯಕ್ಕೆ ನೀಡಬೇಕು.

ವ್ಯಕ್ತಿಯು ಸೇವಿಸುವ ನೀರು, ಆಹಾರ ಮತ್ತು ಭಾಗಶಃ ಆತನ ಚಟುವಟುಕೆಗಳನ್ನು ಅವಲಂಬಿಸಿ ಮೂತ್ರದ ಸಾಂದ್ರತೆಯು ದಿನವಿಡೀ ಬದಲಾಗುತ್ತದೆ. ದಿನದ ವಿವಿಧ ಸಮಯದಲ್ಲಿ ವಿವಿಧ ದ್ರಾವಕಗಳು ಹೆಚ್ಚು ಅಥವಾ ಕಡಿಮೆ ಪ್ರಮಾಣದಲ್ಲಿ ಕಾಣಿಸಿಕೊಳ್ಳಬಹುದು.  ಮೂತ್ರದಲ್ಲಿನ ಸಕ್ಕರೆಯ ಅಂಶವು ಆಹಾರ ಸೇವಿಸಿದ ಬಳಿಕ ಹೆಚ್ಚಾಗುತ್ತದೆ. ಮೂತ್ರಜನಕಾಂಗದ ಸೋಂಕಿನಿಂದ ಬಳಲುತ್ತಿರುವ ವ್ಯಕ್ತಿಯ ಮೂತ್ರದಲ್ಲಿನ ಬ್ಯಾಕ್ಟೀರಿಯಾಗಳ ಸಂಖ್ಯೆಯೂ ದಿನವಿಡೀ ಬದಲಾಗುತ್ತದೆ. ಆದುದರಿಂದ ಪರೀಕ್ಷೆಗೆ ಅನುಗುಣವಾಗಿ ಬೇಕಾದ ಮಾದರಿಯನ್ನು ಸಂಗ್ರಹಿಸಲಾಗುತ್ತದೆ.

ರ್‍ಯಾಂಡಮ್‌(ಯಾವುದೇ ಸಮಯದಲ್ಲಿ) ಮಾದರಿ :

Advertisement

ಈ ಮಾದರಿಯನ್ನು ದಿನದ ಯಾವುದೇ ಸಮಯದಲ್ಲಿ ಸಂಗ್ರಹಿಸಬಹುದು. ಇದು ಎಲ್ಲರಿಗೂ ಅನುಕೂಲಕರವಾದ ಮಾದರಿಯಾಗಿದ್ದು, ಸಾಮಾನ್ಯವಾಗಿ ಮಾಡುವ ರಾಸಾಯನಿಕ ಹಾಗೂ ಸೂಕ್ಷ್ಮದರ್ಶಕ ಪರೀಕ್ಷೆಗಳಿಗೆ ಅತ್ಯಂತ ಉತ್ತಮವಾದ ಮಾದರಿಯಾಗಿದೆ. ಆದಾಗ್ಯೂ ಇದು ದ್ರವ ಸೇವನೆಗೆ ಸರಿಯಾಗಿ ಬದಲಾಗುತ್ತದೆ. ಇದರಿಂದಾಗಿ ಕೆಲವೊಮ್ಮೆ ಕರಗಿರುವ ಪ್ರೊಟೀನ್‌ ಮತ್ತು ಸಕ್ಕರೆಯ ಅಂಶಗಳಲ್ಲಿ ಕೂಡ ಬದಲಾವಣೆ ಕಾಣಬಹುದು.

ಬೆಳಗ್ಗಿನ ಮೊದಲ ಮಾದರಿ

ಬೆಳಗ್ಗೆ ಎದ್ದ ಕೂಡಲೇ ಸಂಗ್ರಹಿಸಲಾಗುವ ಮಾದರಿಯು ಕೆಲವು ಪರೀಕ್ಷೆಗಳಿಗೆ ತುಂಬಾ ಉಪಯುಕ್ತವಾಗಿದೆ. ಈ ಮಾದರಿಯು ಆಮ್ಲಿàಯವಾಗಿದ್ದು, ಕೆಲವು ಕೋಶಗಳು ಉದಾಹರಣೆಗೆ, ಕೆಂಪು ರಕ್ತಕಣ, ಬಿಳಿ ರಕ್ತಕಣ ಮತ್ತು ಕಾಸ್ಟ್‌ಗಳನ್ನು ಸಂರಕ್ಷಿಸುತ್ತದೆ. ನೈಟ್ರೇಟ್‌, ಪ್ರೊಟೀನ್‌ ಮತ್ತು ಸೂಕ್ಷ್ಮದರ್ಶಕದ ಮೂಲಕ ನಡೆಸಲಾಗುವ ಪರೀಕ್ಷೆಗಳಿಗೆ ಇದು ಬಹಳ ಉತ್ತಮವಾದ ಮಾದರಿ. ಆದಾಗ್ಯೂ ಯೂರಿಯಾವನ್ನು ವಿಭಜಿಸುವ ಬ್ಯಾಕ್ಟೀರಿಯಾಗಳಿದ್ದಲ್ಲಿ ಕೋಶಗಳು ನಾಶವಾಗಬಹುದು.

ಬೆಳಗ್ಗಿನ ಎರಡನೇ ಮಾದರಿ

ಈ ಮಾದರಿಯಲ್ಲಿ ಬೆಳಗ್ಗೆ ಎದ್ದ ಕೂಡಲೇ ವಿಸರ್ಜಿಸುವ ಮೂತ್ರವನ್ನು ತ್ಯಜಿಸಲಾಗುತ್ತದೆ ಮತ್ತು ಅನಂತರ ವಿಸರ್ಜಿಸುವ ಮೂತ್ರವನ್ನು ಸಂಗ್ರಹಿಸಲಾಗುತ್ತದೆ. ಇದು ಸಕ್ಕರೆಯ ಪ್ರಮಾಣ ಮತ್ತು ರೂಪುಗೊಂಡ ಕೋಶಗಳ ಬಗ್ಗೆ ಸರಿಯಾದ ಮಾಹಿತಿಯನ್ನು ನೀಡುತ್ತದೆ ಹಾಗೂ ಕೆಲವು ಪರೀಕ್ಷೆಗಳಿಗೆ ತುಂಬಾ ಉಪಯುಕ್ತವಾಗಿದೆ.

ನಿರ್ದಿಷ್ಟ ಸಮಯದ ಮಾದರಿ

ಕೆಲವು ಪರೀಕ್ಷೆಗಳಿಗೆ ನಿದಿಷ್ಟವಾದ ಸಮಯದ ಮಾದರಿಯನ್ನು ಸಂಗ್ರಹಿಸಲಾಗುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ 12 ಅಥವಾ 24 ಗಂಟೆಗಳ ಕಾಲ ಸಂಗ್ರಹಿಸಲಾಗುತ್ತದೆ. ಬೆಳಗ್ಗಿನ ಮೊದಲ ಮಾದರಿಯನ್ನು ತ್ಯಜಿಸಿ ಸಮಯವನ್ನು ನಿರ್ಧರಿಸಿ 12 ಅಥವಾ 24 ಗಂಟೆಗಳ ಕಾಲ ಪ್ರಯೋಗಾಲಯದಿಂದ ಪಡೆದ ಸಂರಕ್ಷಕಗಳನ್ನು ಹಾಕಿದ ದೊಡ್ಡ ಬಾಟಲ್‌ಗ‌ಳಲ್ಲಿ ಸಂಗ್ರಹಿಸಲಾಗುತ್ತದೆ.

  • ಆಹಾರ ಸೇವಿಸಿದ 2 ಗಂಟೆಗಳ ಬಳಿಕ ಸಕ್ಕರೆಯ ಅಂಶವನ್ನು ಪತ್ತೆ ಹಚ್ಚಲು ಈ ಮಾದರಿಯನ್ನು ಸಂಗ್ರಹಿಸಲಾಗುತ್ತದೆ.

ಮಿಡ್‌ಸ್ಟ್ರೀಮ್‌  ಕ್ಲೀನ್‌ ಕ್ಯಾಚ್‌ ಮಾದರಿ :

ಈ ಮಾದರಿಯನ್ನು ಸೂಕ್ಷ್ಮಾಣು ಜೀವಿಗಳ ಪರೀಕ್ಷೆಗಾಗಿ ಬಳಸಲಾಗುತ್ತದೆ. ಇದನ್ನು ಪಡೆಯುವ ವಿಧಾನ ಹೀಗಿದೆ:

ಮೊದಲಿಗೆ ಮೂತ್ರದ್ವಾರದ ಸುತ್ತಲಿನ ಪ್ರದೇಶವನ್ನು ಸಂಪೂರ್ಣವಾಗಿ ಶುದ್ಧೀಕರಿಸಬೇಕು. ಪುರುಷರಲ್ಲಿ ಶಿಶ್ನದ ಮುಂದೊಗಲನ್ನು ಹಿಂದೆ ಸರಿಸಿ ಸಾಬೂನು ಮತ್ತು ನೀರಿನಿಂದ ತೊಳೆದು ಸ್ವಚ್ಛಗೊಳಿಸಬೇಕು. ಹೆಣ್ಣುಮಕ್ಕಳಲ್ಲಿ ಯೋನಿಯನ್ನು ಅಗಲಗೊಳಿಸಿ, ಮುಂಭಾಗದಿಂದ ಹಿಂಭಾಗಕ್ಕೆ ಸಾಬೂನು ಮತ್ತು ನೀರಿನಿಂದ ತೊಳೆದು ಸ್ವಚ್ಛಗೊಳಿಸಬೇಕು. ಮೊದಲ ಮತ್ತು ಕೊನೆಯ ಮೂತ್ರ ತ್ಯಜಿಸಿ ಮಧ್ಯದ ಮೂತ್ರವನ್ನು ಸಂಗ್ರಹಿಸಬೇಕು.

ಕ್ಯಾಥೆಟರ್‌ ಸಂಗ್ರಹ :

ವ್ಯಕ್ತಿಯು ಸ್ವತಂತ್ರವಾಗಿ ಮೂತ್ರವನ್ನು ಸಂಗ್ರಹಿಸಲು ಅಸಾಧ್ಯವಾದಾಗ ಈ ಮೂಲಕ ಸಂಗ್ರಹಿಸುತ್ತಾರೆ.

ಸಂಗ್ರಹಿಸುವಾಗ ಗಮನಿಸಬೇಕಾದ ಇತರ ಅಂಶಗಳು

ಸಾಮಾನ್ಯವಾಗಿ 50 ಎಂ.ಎಲ್‌.ಗಳಷ್ಟು ಮೂತ್ರವನ್ನು ಸಂಗ್ರಹಿಸಬೇಕಾಗುತ್ತದೆ. ಕನಿಷ್ಟ 12 ಎಂ.ಎಲ್‌. ಮೂತ್ರ ಯಾವುದೇ ಪರೀಕ್ಷೆಗೆ ಬೇಕಾಗುತ್ತದೆ. ಸಂಗ್ರಹಿಸಿದ ಕೂಡಲೇ ಬಾಟಲನ್ನು ಮುಚ್ಚಳದಿಂದ ಮುಚ್ಚಿ ತತ್‌ಕ್ಷಣವೇ ಅಥವಾ ಹಾಗೆ ಮಾಡುವುದು ಅಸಾಧ್ಯವಾದಾಗ 1ರಿಂದ 2 ಗಂಟೆಗಳ ಒಳಗೆ ಪ್ರಯೋಗಾಲಯಕ್ಕೆ ನೀಡಬೇಕು.  ವಿಳಂಬವಾದಾಗ ಮಾದರಿಯಲ್ಲಿರುವ ರಾಸಾಯನಿಕ, ಕೋಶಕಣ ಗಳು ಮತ್ತು ಸೂಕ್ಷ್ಮಾಣು ಜೀವಿಗಳ ಸಂಖ್ಯೆಯಲ್ಲಿ ವ್ಯತ್ಯಾಸ ಕಂಡುಬರುತ್ತದೆ. ಇದನ್ನು ತಡೆಗಟ್ಟಲು ಶೈತ್ಯೀಕರಿಸಬೇಕಾಗುತ್ತದೆ ಇಲ್ಲವೇ ಸಂರಕ್ಷಕಗಳನ್ನು ಉಪಯೋಗಿಸಬೇಕಾಗುತ್ತದೆ.  ಮಾದರಿಯನ್ನು 12 ಅಥವಾ 24 ಗಂಟೆಗಳ ಕಾಲ ಸಂಗ್ರಹಿಸಬೇಕಾದಾಗ ಪ್ರಯೋಗಾಲಯದಿಂದ ಕೊಡಲ್ಪಟ್ಟ ಬಾಟಲಿಗಳಲ್ಲಿ ದ್ರವ ರೂಪದ ಸಂರಕ್ಷಕಗಳನ್ನು ಉಪಯೋಗಿಸುತ್ತಾರೆ. ಪ್ರಯೋಗಾಲಯದಿಂದ ಬಾಟಲಿಗಳನ್ನು ತೆಗೆದುಕೊಳ್ಳುವಾಗ ಲೇಬಲನ್ನು ಲಗತ್ತಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ ಮತ್ತು ಪಾಲಿಸಬೇಕಾದ ಅಂಶಗಳನ್ನು ಅವರಿಂದ ತಿಳಿದುಕೊಳ್ಳಿ. ಸಂಗ್ರಹಿಸುವ ಸಮಯದಲ್ಲಿ ಮುಟ್ಟಾಗಿದ್ದಲ್ಲಿ ಇಲ್ಲವೇ ಬಿಳಿಸೆರಗು ಇದ್ದಲ್ಲಿ, ಸರಿಯಾಗಿ ಸ್ವತ್ಛಗೊಳಿಸಿ ಸಂಗ್ರಹಿಸಿ. ಸೂಕ್ಷ್ಮಾಣು ಜೀವಿಗಳ ಪರೀಕ್ಷೆಗಳಿಗೆ ಮಾದರಿಯನ್ನು ಪಡೆಯುವಾಗ ಸೂಕ್ತವಾದ ಮುಂಜಾಗ್ರತೆ ಅನುಸರಿಸಿ.

ಸೂಕ್ತವಾದ ಸಂಗ್ರಹಣೆ : 

ಮೂತ್ರ ಪರೀಕ್ಷೆಯ ಮೊದಲ ಹಂತವೇ ಸಂಗ್ರಹಣೆ. ಮೂತ್ರ ಪರೀಕ್ಷೆಯನ್ನು ಎಷ್ಟೇ ಸಮರ್ಪಕವಾಗಿ ಜಾಗರೂಕತೆಯಿಂದ ಮಾಡಿದರೂ ಸಂಗ್ರಹಣ ಕಾರ್ಯದಲ್ಲಿ ಏನಾದರೂ ವ್ಯತ್ಯಾಸವಾದಲ್ಲಿ ಸರಿಯಾದ ಫ‌ಲಿತಾಂಶವು ದೊರೆಯದೇ ಹೋಗಬಹುದು.  ಪ್ರಯೋಗಾಲಯದ ಪರೀಕ್ಷೆಗಾಗಿ ವ್ಯಕ್ತಿಯು ಸ್ವತಃ ಸಂಗ್ರಹಣೆಯನ್ನು ಮಾಡುವ ಕಾರಣ ಈ ವಿಧಾನಗಳನ್ನು  ತಿಳಿಯುವುದು ಅತೀ ಅಗತ್ಯವಾಗಿದೆ.

ಮೂತ್ರ ಪರೀಕ್ಷೆಯ ಉದ್ದೇಶಗಳು : ಮುಖ್ಯವಾಗಿ ಮೂತ್ರ ಪರೀಕ್ಷೆ ಎರಡು ಉದ್ದೇಶಗಳನ್ನು ಪೂರೈಸುತ್ತದೆ:

ದೇಹದಲ್ಲಿನ ಚಯಾಪಚಯ ಕ್ರಿಯೆ ಮತ್ತು ನಿರ್ನಾಳ ಗ್ರಂಥಿಗಳ ಅಡಚಣೆಗಳನ್ನು ತಿಳಿಯಲು: ನಿರ್ದಿಷ್ಟವಾದ ಕಾಯಿಲೆಗೆ ನಿರ್ದಿಷ್ಟವಾದ ಅಂತಿಮ ಉತ್ಪನ್ನಗಳು ಮೂತ್ರದ ಮೂಲಕ ಹೊರಹಾಕಲ್ಪಡುತ್ತದೆ. ಉದಾಹರಣೆಗೆ, ಮಧುಮೇಹ ಇರುವವರಲ್ಲಿ ಸಕ್ಕರೆಯ ಅಂಶವು ರಕ್ತದಲ್ಲಿ ಹೆಚ್ಚಾಗುತ್ತದೆ ಮತ್ತು ಮೂತ್ರದ ಮೂಲಕವೂ ಹೊರಹಾಕಲ್ಪಡುತ್ತದೆ. ಇದನ್ನು ಮೂತ್ರ ಪರೀಕ್ಷೆಯ ಮೂಲಕ ತಿಳಿಯಬಹುದು.

  1. ಮೂತ್ರಪಿಂಡ ಮತ್ತು ಮೂತ್ರಜನಕಾಂಗಕ್ಕೆ ಸಂಬಂಧಪಟ್ಟ ಇತರ ಕಾಯಿಲೆಗಳನ್ನು ಕಂಡುಕೊಳ್ಳುವುದು. ಉದಾಹರಣೆಗೆ, ಮೂತ್ರಜನಕಾಂಗದ ಸೋಂಕು, ಮೂತ್ರಪಿಂಡದ ಕಾಯಿಲೆ. ದೇಹದಲ್ಲಿನ ದ್ರವ ಮತ್ತು ದ್ರಾವಕಗಳ ಸಂಯೋಜನೆಯ ಸಮತೋಲನವನ್ನು ಕಾಪಾಡುವಲ್ಲಿ ಮೂತ್ರಪಿಂಡವು ಪ್ರಮುಖ ಪಾತ್ರ ವಹಿಸುತ್ತದೆ.  ರೋಗಪೀಡಿತ ಮೂತ್ರಪಿಂಡವು ಇಂತಹ ಕಾರ್ಯಗಳನ್ನು ನಿರ್ವಹಿಸುವುದಿಲ್ಲ. ಹಾಗಾಗಿ ಸಾಮಾನ್ಯವಾಗಿ ಸಣ್ಣ ಪ್ರಮಾಣದಲ್ಲಿ ಹೊರಹಾಕಲ್ಪಡುವ ದ್ರಾವಕಗಳು ಮೂತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತವೆ.  ಇನ್ನು ಕೆಲವು ಸಂದರ್ಭಗಳಲ್ಲಿ ಕೆಂಪು ರಕ್ತ ಕಣ, ಬಿಳಿ ರಕ್ತಕಣ, ಕಾಸ್ಟ್‌ಗಳು ಮತ್ತು ಹರಳುಗಳು ಮೂತ್ರದಲ್ಲಿ ಕಾಣಸಿಗಬಹುದು.

 

ಆಶಾ ಪಾಟೀಲ್‌

ಅಸಿಸ್ಟೆಂಟ್‌ ಪ್ರೊಫೆಸರ್‌ (ಸೆಲೆಕ್ಷನ್‌ ಗ್ರೇಡ್‌)

ಡಾ| ಸರಿತಾ ಕಾಮತ್‌ ಯು.

ಅಸೋಸಿಯೇಟ್‌ ಪ್ರೊಫೆಸರ್‌/ ಹೆಡ್‌

ಮೆಡಿಕಲ್‌ ಲ್ಯಾಬೊರೇಟರಿ ಟೆಕ್ನಾಲಜಿ ವಿಭಾಗ

ಎಂಸಿಎಚ್‌ಪಿ, ಮಾಹೆ, ಮಣಿಪಾಲ

Advertisement

Udayavani is now on Telegram. Click here to join our channel and stay updated with the latest news.

Next