Advertisement

ಅರ್ಧ ಗಂಟೆಯಲ್ಲೇ ಮುಗಿಯಿತು ಪ್ರಗತಿ ಪರಿಶೀಲನೆ

02:39 PM Jun 07, 2019 | Suhan S |

ಕೊಪ್ಪಳ: ಅಂಗನವಾಡಿ ಮಕ್ಕಳಿಗೆ ಗುಣಮಟ್ಟದ ಆಹಾರ ಪೂರೈಸಬೇಕು. ಅವರ ತೂಕದಲ್ಲಿ ಹೆಚ್ಚಳವಾಗಬೇಕು. ಈ ಬಗ್ಗೆ ಅಂಗನವಾಡಿ ನೌಕರರು ಕಾಳಜಿ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ (ಪಂ.ರಾಜ್‌) ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ಉಮಾ ಮಹದೇವನ್‌ ಹೇಳಿದರು.

Advertisement

ನಗರದ ಜಿಪಂ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ವರದಿ ಪಡೆದು ಅವರು ಮಾತನಾಡಿದರು.

ಎಲ್ಲ ಅಂಗನವಾಡಿಗಳಲ್ಲಿ ಮಕ್ಕಳಿಗೆ ಉತ್ತಮ ಗುಣಮಟ್ಟದ ಪೌಷ್ಟಿಕ ಆಹಾರ ಒದಗಿಸಲಾಗುತ್ತಿದೆಯೇ ಎಂದು ಪ್ರಶ್ನಿಸಿದ ಅವರು, ಮಾತೃಶ್ರೀ ಯೋಜನೆ ಸೌಲಭ್ಯವು ಅರ್ಹ ಫಲಾನುಭವಿಗಳಿಗೆ ಸಿಗಬೇಕು. ಮಕ್ಕಳ ತೂಕ ಮತ್ತು ಎತ್ತರದ ಬಗ್ಗೆ ಗಮನ ಹರಿಸಬೇಕು ಎಂದರು.

ಅಂಗನವಾಡಿ ಕೇಂದ್ರಗಳಲ್ಲಿ ಶುಚಿ ಶೌಚಾಲಯ ನಿರ್ಮಾಣವಾಗಬೇಕು. ಅಲ್ಲದೇ ಸ್ವಚ್ಛತೆಯ ವಾತಾವರಣವನ್ನು ಸಹ ಕಲ್ಪಿಸಿಕೊಡಬೇಕು. ಗೋಶಾಲೆಗಳ ಜಾನುವಾರುಗಳಿಗೆ ಮೇವು ಸಿಗುತ್ತಿದೆಯೇ ಎಂದು ಸಂಬಂಧಿಸಿದ ಅಧಿಕಾರಿಗಳನ್ನು ಪ್ರಶ್ನಿಸಿದರು.

ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕರು ಮಾತನಾಡಿ, ತೀವ್ರ ಬರದ ಹಿನ್ನೆಲೆ ಕೊಪ್ಪಳ ಜಿಲ್ಲೆಯಲ್ಲಿ ಏಳು ಗೋಶಾಲೆಗಳನ್ನು ಹಾಗೂ ಮೇವು ಬ್ಯಾಂಕ್‌ಗಳನ್ನು ಸ್ಥಾಪಿಸಲಾಗಿದೆ. ಪ್ರತಿ ಗೋಶಾಲೆಯಲ್ಲಿ 300 ರಿಂದ 400 ಜಾನುವಾರಗಳಿವೆ. ಪ್ರತಿನಿತ್ಯ ಜಾನುವಾರುಗಳಿಗೆ ಮೇವು ಒದಗಿಸಲಾಗುತ್ತಿದೆ. ಇನ್ನೂ ಸುಮಾರು 13 ವಾರಗಳಷ್ಟು ಮೇವು ಲಭ್ಯವಿದೆ ಎಂದು ತಿಳಿಸಿದರು.

Advertisement

ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಬಿ. ಕಲ್ಲೇಶ ಮಾತನಾಡಿ, ಇಲಾಖೆಯಿಂದ 47 ವಸತಿ ಶಾಲೆಗಳು ಸ್ವಂತ ಹಾಗೂ 09 ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿವೆ. ಇನ್ನೂ ನಾಲ್ಕು ಕಟ್ಟಡಗಳು ನಿರ್ಮಾಣ ಹಂತದಲ್ಲಿವೆ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಮಾತನಾಡಿ, ಎಲ್ಲ ಅಂಗನವಾಡಿ ಕೇಂದ್ರಗಳಲ್ಲಿ ಉತ್ತಮ ಗುಣಮಟ್ಟದ ಪೌಷ್ಟಿಕ ಆಹಾರವನ್ನು ಮಕ್ಕಳಿಗೆ ನೀಡಲಾಗುತ್ತಿದೆ. ಮಾತೃಶ್ರೀ ಯೋಜನೆಯಡಿ ಅರ್ಜಿಗಳು ಬಂದಿದ್ದು, ಅವುಗಳಿಗೆ ಶೀಘ್ರ ಸೌಲಭ್ಯ ಒದಗಿಸಲಾಗುವುದು. 80 ಹೊಸ ಅಂಗನವಾಡಿ ಕೇಂದ್ರಗಳನ್ನು ಪ್ರಾರಂಭಿಸಲು ನಿವೇಶನಗಳನ್ನು ಗುರುತಿಸಲಾಗಿದೆ. ಅನುದಾನ ಮಂಜೂರಾದ ಕೂಡಲೇ ಅಂಗನವಾಡಿ ಕೇಂದ್ರಗಳ ಕಟ್ಟಡಗಳನ್ನು ಸ್ಥಾಪಿಸಲಾಗುವುದು ಎಂದರು.

ವಿವಿಧ ಇಲಾಖೆಗಳಿಂದ ಅನುಷ್ಠಾನಗೊಳಿಸುತ್ತಿರುವ ಸರ್ಕಾರದ ಯೋಜನೆಗಳ ಸೌಲಭ್ಯಗಳನ್ನು ಅರ್ಹ ಫಲಾನುಭವಿಗೆ ತಲಪಬೇಕು. ಯೋಜನೆ ಅನುಷ್ಟಾನಕ್ಕೆ ಸಂಬಂಧಿಸಿದಂತೆ ಅನುದಾನದ ಕೊರತೆ ಹಾಗೂ ಸಂಬಂಧಿಸಿದ ಇಲಾಖೆಯಿಂದ ಹಾಸ್ಟಲ್, ಶಾಲೆ, ಕಾಲೇಜು, ಅಂಗನವಾಡಿ ಸ್ಥಾಪಿಸಲು ಅವಶ್ಯವಿರುವ ಜಮೀನು ಮಂಜೂರು ಸಮಸ್ಯೆಗಳಿದ್ದಲ್ಲಿ ಕೂಡಲೇ ಮಾಹಿತಿ ನೀಡಬೇಕು. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಸಭೆಯಲ್ಲಿ ಡಿಸಿ ಪಿ. ಸುನೀಲ್ ಕುಮಾರ್‌, ಜಿಪಂ ಸಿಇಒ ಆರ್‌.ಎಸ್‌. ಪೆದ್ದಪ್ಪಯ್ಯ, ಎಡಿಸಿ ಬಾಲಚಂದ್ರ, ಎಸಿ ಸಿ.ಡಿ. ಗೀತಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ತಹಶೀಲ್ದಾರರು ಉಪಸ್ಥಿತರಿದ್ದರು.

ಕಾಟಾಚಾರಕ್ಕೆ ನಡೆಯಿತೇ ಕಾರ್ಯದರ್ಶಿ ಸಭೆ ?:

ಜಿಲ್ಲೆಯಲ್ಲಿ ಬರದ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮಳೆ ಆಗುತ್ತಿಲ್ಲ. ಜನ ಜಾನುವಾರು ಮೇವಿಗೆ ಪರದಾಡುವಂತ ಸ್ಥಿತಿಯಿದೆ. ಕುಡಿಯುವ ನೀರಿನ ಸಮಸ್ಯೆಯಂತೂ ಹೆಚ್ಚಾಗುತ್ತಿದೆ. ಇಷ್ಟೆಲ್ಲ ಸಮಸ್ಯೆ ಆಲಿಸಲು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಉಮಾ ಮಹದೇವನ್‌ ಅವರು ಬೆಂಗಳೂರಿನಿಂದ ಹುಬ್ಬಳ್ಳಿಗೆ ವಿಮಾನದಲ್ಲಿ ಆಗಮಿಸಿ, ನಂತರ ಕೊಪ್ಪಳಕ್ಕೆ ಆಗಮಿಸಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದು, ಕೇವಲ ಅರ್ಧ ಗಂಟೆಯಲ್ಲಿ ಸಭೆ ಮುಕ್ತಾಯ ಮಡಿ ಪುನಃ ಬೆಂಗಳೂರಿಗೆ ತೆರಳಿದ್ದಾರೆ. ಮಧ್ಯಾಹ್ನ 12.30ಕ್ಕೆ ಆರಂಭವಾದ ಪ್ರಗತಿ ಪರಿಶೀಲನಾ ಸಭೆಯು 1 ಗಂಟೆ ವೇಳೆಗೆ ಮುಕ್ತಾಯವಾಗಿದೆ. ಜಿಲ್ಲೆಯಲ್ಲಿ ನೀರಿನ ಸಮಸ್ಯೆ, ಮೇವು, ಜಾನುವಾರು, ಬರ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಸುದೀರ್ಘ‌ ಚರ್ಚಿಸಿ ಇತ್ಯರ್ಥ ಮಾಡಲೇ ಇಲ್ಲ ಎಂಬ ಮಾತು ಸಭೆಯಲ್ಲಿ ಕೇಳಿ ಬಂದಿತು. ಪ್ರಗತಿ ಪರಿಶೀಲನೆಗೆ ಬೆಂಗಳೂರಿನಿಂದ ಬಂದಿದ್ದ ಅವರು ಸಭೆ ಮುಗಿಸಿ ಅರ್ಧ ಗಂಟೆಯಲ್ಲೇ ವಾಪಸ್‌ ಆಗಿದ್ದಾರೆ. ಇನ್ನೂ ಜಿಲ್ಲಾ ಉಸ್ತುವಾರಿ ಸಚಿವರು ಸಭೆಗೆ ಗೈರಾಗಿದ್ದರು.
Advertisement

Udayavani is now on Telegram. Click here to join our channel and stay updated with the latest news.

Next