Advertisement

ಹುಳು ಬಾಧೆ ತಡೆಗೆ ಕ್ರಮವಹಿಸಿ

01:58 PM Nov 06, 2021 | Team Udayavani |

ತುಮಕೂರು: ಕಲ್ಪತರು ನಾಡಿನಲ್ಲಿ ಈ ಬಾರಿ ಉತ್ತಮ ಮಳೆಯಾಗಿದ್ದು ರಾಗಿ, ತೊಗರಿ ಸೇರಿದಂತೆ ಇತರೆ ಬೆಳೆಗಳು ನಿರೀಕ್ಷೆಗಿಂತ ಉತ್ತಮವಾಗಿ ಬರುವ ವೇಳೆಯಲ್ಲಿ ಹಲವು ರೋಗಬಾಧೆಗಳು ಕಾಣಿಸಿಕೊಳ್ಳುವ ನಿರೀಕ್ಷೆ ಇದೆ. ತೊಗರಿ ಬೆಳೆಗೆ ಕಾಯಿ ಕೊರಕ, ಗೂಡು ಮಾರು ಹುಳು ಬಾಧೆ ಕಾಣಿಸಿಕೊಳ್ಳುತ್ತಿದ್ದು ನಿಯಂತ್ರಣಕ್ಕೆ ಕ್ರಮ ವಹಿಸಬೇಕು ಎಂದು ಜಂಟಿ ಕೃಷಿ ನಿರ್ದೇಶಕಿ ರಾಜಸುಲೋಚನಾ ತಿಳಿಸಿದ್ದಾರೆ.

Advertisement

ಜಿಲ್ಲೆಯಲ್ಲಿ ತೊಗರಿ ಒಂದು ಪ್ರಮುಖ ದ್ವಿದಳಧಾನ್ಯ ಬೆಳೆಯಾಗಿದ್ದು, ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 11,878 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಬಿತ್ತನೆಯಾಗಿ ರುವ ತೊಗರಿ ಬೆಳೆಯು ಹೂವು ಬಿಡುವ ಹಂತದಲ್ಲಿದ್ದು, ಹೂ ಬಿಡುವ ಹಂತದಲ್ಲಿ ಸಾಮಾನ್ಯವಾಗಿ ಕಾಯಿ ಕೊರಕ ಹುಳು ಮತ್ತು ಗೂಡುಮಾರು ಹುಳು ಬಾಧೆ ಕಂಡು ಬರುತ್ತದೆ. ಕೀಟನಾಶಕ ಸಿಂಪಡಣೆ, ಬೇವಿನ ಬೀಜದ ಕಷಾಯ, ಸಮಗ್ರ ಕೀಟ ನಿರ್ವಹಣ ಕ್ರಮಗಳನ್ನು ಅನುಸರಿಸುವುದರಿಂದ ಈ ಹುಳುಗಳ ಬಾಧೆಯನ್ನು ಹತೋಟಿಗೆ ತರಬಹುದು ಎಂದು ಹೇಳಿದ್ದಾರೆ.

ಕಾಯಿ ಕೊರಕ ಹುಳುವಿನ ಬಾಧೆ: ಕಾಯಿ ಕೊರಕ ಹುಳುಗಳ ಬಾಧೆ ತಗುಲಿದಾಗ ತೊಗರಿ ಗಿಡದಲ್ಲಿ ಹುಳುಗಳು ಮೊಗ್ಗನ್ನು ಕೊರೆಯುತ್ತವೆ. ತೊಗರಿ ಹೂಗಳು ಉದುರು ತ್ತವೆ. ಕಾಯಿಗಳನ್ನು ಕೊರೆದು ಕಾಳುಗಳನ್ನು ತಿನ್ನುತ್ತವೆ. ಅಂತಹ ಕಾಯಿಗಳಲ್ಲಿ ಹುಳು ಕೊರೆಯುವಾಗ ತನ್ನ ತಲೆಯ ಭಾಗ ಮಾತ್ರ ಕಾಯಿಯಲ್ಲಿ, ಉಳಿದ ದೇಹದ ಭಾಗ ಕಾಯಿಯ ಹೊರಗಡೆ ಇರುತ್ತದೆ. ಗೂಡುಮಾರು ಹುಳುವಿನ ಬಾಧೆ: ಗೂಡುಮಾರು ಹುಳುಗಳು ಎಲೆ ಮತ್ತು ಹೂವಿನ ಭಾಗವನ್ನು ಹೊಂದುಗೂಡಿಸಿ ಗೂಡನ್ನು ಕಟ್ಟಿ, ಹೂವು ಮತ್ತು ಎಲೆಗಳನ್ನು ತಿನ್ನುತ್ತವೆ.

ಇದನ್ನೂ ಓದಿ:- ತಾಂಡಾ ಕಂದಾಯ ಗ್ರಾಮವಾಗಿಸಲು ಕ್ರಮ

ಆದ್ದರಿಂದ ಏಕ ಬೆಳೆಯಾಗಿ ತೊಗರಿಯನ್ನು ಬೆಳೆದಾಗ ಕೇವಲ ಕೀಟ ನಾಶಕಗಳನ್ನು ಬಳಸಿ, ಕೀಟಗಳನ್ನು ಹತೋಟಿ ಮಾಡುವುದು ಕಷ್ಟಕರ. ಆದ್ದರಿಂದ ಸಮಗ್ರ ಕೀಟ ನಿರ್ವಹಣಾ ಕ್ರಮಗಳನ್ನು ಅನುಸರಿಸಿ, ಹತೋಟಿ ಮಾಡುವುದು ಉತ್ತಮ.

Advertisement

ಮೊಗ್ಗ, ಹೂವಿನ ಹಂತದಲ್ಲೇ ಹತೋಟಿಗೆ ತನ್ನಿ: ತೊಗರಿ ಬೆಳೆಯು ಮೊಗ್ಗು ಮತ್ತು ಹೂವಿನ ಹಂತದಲ್ಲಿದ್ದಾಗಲೇ ಎಕರೆಗೆ 200 ಎಲ್‌.ಇ ನಂಜು ರೋಗಾಣು (ಎಚ್‌ಎ.ಎನ್‌ .ಪಿ.ವಿ)ಗಳನ್ನು 400 ಲೀಟರ್‌ ನೀರಿನಲ್ಲಿ ಸೇರಿಸಿ ಶೇ.0.1 ಟಿ-ಪಾಲ್‌ ಮತ್ತು ಶೇ.0.5ರ ಬೆಲ್ಲದ ಪಾಕವನ್ನು ಬೆರೆಸಿ ಸಾಯಂಕಾಲದ ಸಮಯದಲ್ಲಿ ಸಿಂಪಡಿಸುವುದರಿಂದ ಮರಿ ಹುಳುಗಳಿಗೆ ನಂಜಾಣು ರೋಗ ತಗಲಿ ತಲೆ ಕೆಳಗಾಗಿ ನೇತಾಡುತ್ತಾ ಸಾಯುತ್ತವೆ. ಎಚ್‌ಎ.ಎನ್‌.ಪಿ.ವಿ. ಸಿಂಪಡಿಸಿದ 10-15 ದಿನಗಳ ನಂತರ ಶೇ.4ರ ಬೇವಿನ ಬೀಜದ ಕಷಾಯವನ್ನು ಸಿಂಪರಣೆ ಮಾಡುವುದು.

ಈ ಕಷಾಯ ತಯಾರಿಸಲು 32 ಕಿ.ಗ್ರಾಂ ಬೇವಿನ ಬೀಜದ ಪುಡಿಯನ್ನು (ಸಿಪ್ಪೆಸಹಿತ) ಸುಮಾರು 50 ಲೀಟರ್‌ ನೀರಿನಲ್ಲಿ ಒಂದು ರಾತ್ರಿ ನೆನೆಸಿ, ಎರಡು ಮೂರು ಬಾರಿ ಸೋಸಿ, ಇದರಿಂದ ಬಂದ ದ್ರಾವಣಕ್ಕೆ 400 ಗ್ರಾಂ ಸಾಬೂನಿನ ಪುಡಿ ಸೇರಿಸಿ ನಂತರ 350 ಲೀಟರ್‌ ನೀರಿಗೆ ಈ 50 ಲೀಟರ್‌ ಬೇವಿನ ಬೀಜದ ದ್ರಾವಣ ಸೇರಿಸಿದರೆ ಒಟ್ಟು 400 ಲೀಟರ್‌ ಬೇವಿನ ಬೀಜದ ಕಷಾಯ ಸಿದ್ಧವಾಗುತ್ತದೆ. ಈ 400 ಲೀಟರ್‌ ದ್ರಾವಣ ಒಂದು ಎಕರೆಗೆ ಸಿಂಪಡಿಸಲು ಸಾಕಾಗುತ್ತದೆ

 ಕೀಟನಾಶಕ ಬಳಕೆ –

ಬೇವಿನ ಬೀಜದ ಕಷಾಯ ಸಿಂಪಡಿಸಿದ 10-15 ದಿನಗಳ ನಂತರ, ಅವಶ್ಯಕತೆ ಕಂಡುಬಂದರೆ ಕಾಯಿಕೊರಕ ಹುಳುವಿನ ಹತೋಟಿಗೆ ಕೀಟನಾಶಕಗಳನ್ನು ಸಿಂಪ ಡಿಸಬೇಕು. ಇಂಡಾಕ್ಸಾಕಾರ್ಬ್ 14.5 ಎಸ್‌.ಸಿ 0.5 ಮಿ.ಲೀ ಪ್ರತಿ ಲೀಟರ್‌ ನೀರಿಗೆ ಅಥವಾ ಕ್ಲೋರೆ³„ರಿಫಾಸ್‌ 20 ಇ.ಸಿ 2 ಮಿ.ಲೀ ಪ್ರತಿ ಲೀಟರ್‌ ನೀರಿಗೆ ಅಥವಾ ಎಮಾಮೆಕ್ಟಿನ್‌ ಬೆನ್‌ ಜೋಯೆಟ್‌ 0.3 ಗ್ರಾಂ ಪ್ರತಿ ಲೀಟರ್‌ ನೀರಿಗೆ ಬೆರೆಸಿ ಸಿಂಪಡಿಸಬೇಕು. ಸಕಾಲಕ್ಕೆ ಸಮಗ್ರ ಕೀಟ ನಿರ್ವಹಣೆ ಕೈಗೊಳ್ಳುವುದ ರಿಂದ ರೋಗ ಹತೋಟಿಗೆ ತರಬಹು ದಾಗಿದ್ದು, ಇಳುವರಿಯೂ ಹೆಚ್ಚಲಿದೆ ಎಂದು ಜಂಟಿ ಕೃಷಿ ನಿರ್ದೇಶಕಿ ರಾಜಸುಲೋಚನಾ ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next