Advertisement

ಕಾಲೇಜು ಹಂತದಲ್ಲೇ ಸಾಧಿಸಿ ಭವಿಷ್ಯ ಭದ್ರಪಡಿಸಿಕೊಳ್ಳಿ

02:57 PM Sep 02, 2017 | Team Udayavani |

ಕೊಪ್ಪ: ಕಾಲೇಜು ಜೀವನ ನಮ್ಮ ಜೀವನದ ಮಹತ್ವದ ಘಟ್ಟ. ಉತ್ತಮ ಸಾಧನೆ ಮಾಡಿ ಭವಿಷ್ಯ ಸಾರ್ಥಕಗೊಳಿಸಿ ಎಂದು ಚಿತ್ರನಟ ಮಾ|ಆನಂದ್‌ ಹೇಳಿದರು.

Advertisement

ಇಲ್ಲಿನ ಪ್ರಥಮ ದರ್ಜೆ ಕಾಲೇಜಿನ ವಿವಿಧ ಸಂಘಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ನಾನು ಪಿಯುಸಿಯಲ್ಲಿ ವಿಜ್ಞಾನ ವಿಷಯ ಆಯ್ಕೆ ಮಾಡಿದ್ದರಿಂದ ದ್ವಿತೀಯ ಪಿಯುಸಿಯಲ್ಲಿ ತೇರ್ಗಡೆಯಾಗಿಲ್ಲ. ನಂತರ ಕಾರಣಾಂತರದಿಂದ ವಿದ್ಯಾಭ್ಯಾಸ ಮುಂದುವರಿಸಲಾಗದೆ
ಚಿತ್ರರಂಗಕ್ಕೆ ಕಾಲಿಟ್ಟೆ. ಆದರೂ ಪದವಿ ಮಾಡಬೇಕೆಂಬ ಆಸಕ್ತಿಯಿಂದ ಬಿ.ಕಾಂ. ಮುಗಿಸಿದ್ದೇನೆ. ಆದರೆ ಇಂದಿಗೂ ನನ್ನ ಬಳಿ ದ್ವಿತೀಯ ಪಿಯುಸಿ ಸರ್ಟಿಕೇಟ್‌ ಇಲ್ಲ. ಇದರಿಂದ ಅನೇಕ ಕಡೆ ತೊಂದರೆ ಅನುಭವಿಸಿದ್ದೇನೆ. ನೀವು ಇಂತಹ ಸಂದಿಗ್ಧ ಸ್ಥಿತಿಯನ್ನು ಎದುರಿಸುವುದು ಬೇಡ. ಪ್ರತಿಯೊಬ್ಬನ ಜೀವನದ ಸಮಯ ಅಮೂಲ್ಯವಾದುದು. ಅದು ನಮ್ಮ ಭವಿಷ್ಯ ನಿರ್ಧರಿಸುತ್ತದೆ. ವಿಶ್ವಾಸದೊಂದಿಗೆ ಸಾಧನೆ ಮಾಡಿ. ಸವಾಲಾಗಿ ಸ್ವೀಕರಿಸಿ ಅಧ್ಯಯನ ಮಾಡಿದಾಗ ಯಶಸ್ಸು ಸಿದ್ಧಿಸುತ್ತದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಡಿ.ಎನ್‌. ಜೀವರಾಜ್‌, ಕಲಾವಿದರ ಜೀವನಶೈಲಿ ಸಾರ್ವಜನಿಕರ ಮೇಲೆ ಪರಿಣಾಮ ಬೀರುತ್ತದೆ. ಮಾ| ಆನಂದ್‌ ಉತ್ತಮ ಕಲಾವಿದ. ಚಲನಚಿತ್ರ, ಕಿರುತೆರೆ, ಟಿವಿಶೋಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳಿಗೆ ಉತ್ತಮ
ಸಂದೇಶ ಕೊಟ್ಟಿದ್ದಾರೆ. ವಿದ್ಯಾರ್ಥಿಗಳು ಕಾಲೇಜಿನ ಹೊರಗಡೆಯ ವಿಚಾರಗಳಿಗೆ ಹೆಚ್ಚು ಗಮನ ನೀಡದೇ ಓದಿಗೆ ಹೆಚ್ಚು ಒತ್ತು ನೀಡಿ ಎಂದರು.

ಸಮಾರಂಭದಲ್ಲಿ ಮಾ| ಆನಂದ್‌ ಹಾಗೂ ಶಾಸಕ ಡಿ.ಎನ್‌. ಜೀವರಾಜ್‌ ಅವರನ್ನು ಸನ್ಮಾನಿಸಲಾಯಿತು. ಕಾಲೇಜಿನ ಸಾಂಸ್ಕೃತಿಕ, ಕ್ರೀಡಾ, ರಾಷ್ಟ್ರೀಯ ಸೇವಾ ಯೋಜನೆ, ರೋವರ್ ಆಂಡ್‌ ರೇಂಜರ್, ರೆಡ್‌ಕ್ರಾಸ್‌, ರೆಡ್‌ ರಿಬ್ಬನ್‌ ವೇದಿಕೆಗಳಿಗೆ ಚಾಲನೆ ನೀಡಲಾಯಿತು. ಜಿಲ್ಲಾ ಪಂಚಾಯತ್‌ ಉಪಾಧ್ಯಕ್ಷ ಎಸ್‌.ಎನ್‌.ರಾಮಸ್ವಾಮಿ. ಪಟ್ಟಣ ಪಂಚಾಯತ್‌ ಅಧ್ಯಕ್ಷೆ ವಾಣಿ ಸತೀಶ್‌ ಹೆಗ್ಡೆ, ಕಾಲೇಜು ಪ್ರಾಂಶುಪಾಲ ಅನಂತ್‌, ಕಾಲೇಜು ಆಡಳಿತ ಮಂಡಳಿ ಸದಸ್ಯರಾದ ಹೊನಗಾರು ಶಿವಪ್ಪ, ನಾರ್ವೆ ಅಶೋಕ್‌, ರವಿಕುಮಾರ್‌, ಪ್ರಿಯಾ ಹರೀಶ್‌, ಉಪನ್ಯಾಸಕರಾದ ಡಿ.ಎಸ್‌. ಉದಯಕುಮಾರ್‌, ಪ್ರಸನ್ನಕುಮಾರ್‌, ಭಾಗ್ಯಲಕ್ಷ್ಮೀ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next