“ಸಾರಿ ಕಣೇ’ ಎಂಬ ಚಿತ್ರ ಮಾಡಿದ್ದ ರೂಪೇಶ್ ಕುಮಾರ್, ಈಗ ಸದ್ದಿಲ್ಲದೆ ಇನ್ನೊಂದು ಚಿತ್ರ ಮಾಡಿ ಮುಗಿಸಿದ್ದಾರೆ. “ಸಾರಿ ಕಣೇ’ ಚಿತ್ರದಲ್ಲಿ ಹೀರೋ ಆಗಿ ನಟಿಸುವುದರ ಜೊತೆಗೆ ಅವರೇ ನಿರ್ದೇಶನ ಮಾಡಿದ್ದರು. ಈ ಬಾರಿ ಅವರು ನಿರ್ದೇಶನದ ಜವಾಬ್ದಾರಿಯನ್ನು ರಶ್ಮಿ ಎನ್ನುವವರಿಗೆ ವಹಿಸಿಕೊಟ್ಟಿದ್ದು, ಚಿತ್ರದ ಚಿತ್ರೀಕರಣ ಮುಗಿದಿದೆ. ಇತ್ತೀಚೆಗೆ ಚಿತ್ರದ ಹಾಡುಗಳು ಸಹ ಬಿಡುಗಡೆಯಾಗಿದ್ದು, ಸದ್ಯದಲ್ಲೇ ಚಿತ್ರ ಬಿಡುಗಡೆಯಾಗಲಿದೆ.
ಅಂದು ಹಾಡುಗಳನ್ನು ಬಿಡುಗಡೆ ಮಾಡುವುದಕ್ಕೆ ವಿಶೇಷ ಅತಿಥಿಗಳಾÂರೂ ಇರಲಿಲ್ಲ. ಚಿತ್ರದ ಹಾಡುಗಳನ್ನು ಹೊರತಂದಿರುವ ಲಹರಿ ವೇಲು ಅವರಿಂದಲೇ ಬಿಡುಗಡೆ ಮಾಡಿಸಲಾಯಿತು. ಕಳೆದ ಎರಡೂ¾ರು ತಿಂಗಳುಗಳಿಂದ ಯಾವುದೇ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಕಾಣಿಸಿಕೊಳ್ಳದ ವೇಲುಗೆ ಆ ಕುರಿತು ಕೇಳಲಾಯಿತು. ರಾಜಕೀಯಕ್ಕೆ ಸೇರಿದ ನಂತರ, ಚಿತ್ರರಂಗ ಎಲ್ಲಾದರೂ ಮರೆತು ಹೋಯಿತಾ ಎಂಬ ಪ್ರಶ್ನೆಗೆ, “ಯಾವುದೇ ಕಾರಣಕ್ಕೂ ಚಿತ್ರರಂಗದಿಂದ ದೂರವಾಗುವುದಿಲ್ಲ’ ಎಂದು ಶಪಥ ಮಾಡುತ್ತಾ ಮಾತಾಡಿದರು. “ನಾನು ಪಕ್ಷಕ್ಕೆ ಸೇರಿದ ಸಂದರ್ಭದಲ್ಲಿ, ಒಳ್ಳೆಯ ಸ್ವಾಗತ ಸಿಕ್ಕಿತು. ರಾಜಕೀಯದಲ್ಲಿ ಮುಂದೆ ಹೇಗೋ ಗೊತ್ತಿಲ್ಲ, ಚಿತ್ರರಂಗವನ್ನು ಮಾತ್ರ ಬಿಡುವುದಿಲ್ಲ’ ಎಂದು ಹೇಳಿದರು.
ಅದಕ್ಕೂ ಮುನ್ನ ಚಿತ್ರತಂಡದವರೆಲ್ಲರೂ ನಾಲ್ಕಾ°ಲ್ಕು ಮಾತುಗಳನ್ನಾಡಿದರು. ಮೊದಲಿಗೆ ಮಾತನಾಡಿದ್ದು ನಿರ್ದೇಶಕಿ ರಶ್ಮಿ. ಅವರು ಎಂ.ಎಸ್.ಸಿ, ಎಂಟೆಕ್ ಮಾಡಿ ಸದ್ಯಕ್ಕೆ ಪಿಎಚ್‌ಡಿ ಮಾಡುತ್ತಿದ್ದಾರೆ. ಈ ಮಧ್ಯೆ ಅವರು ಕಥೆ, ಕವಿತೆ ಬರೆಯುತ್ತಿದ್ದರಂತೆ. “ಸಾರಿ ಕಣೇ’ಗೆ ಸಹಾಯಕರಾಗಿಯೂ ಕೆಲಸ ಮಾಡಿದ್ದರಂತೆ. ಈಗ ಮೊದಲ ಬಾರಿಗೆ ಅವರು ನಿರ್ದೇಶನ ಮಾಡಿದ್ದಾರೆ. ಹಾಗೆ ಭಡ್ತಿ ಪಡೆಯುವುದಕ್ಕೆ ಕಾರಣರಾದ ನಾಯಕ ರೂಪೇಶ್‌ಗೆ ಥ್ಯಾಂಕ್ಸ್ ಹೇಳುತ್ತಲೇ ಅವರು ಮಾತು ಶುರು ಮಾಡಿದರು. ಇಷ್ಟಕ್ಕೂ ಈ ಚಿತ್ರದ ಕಥೆಯೇನು ಎಂದು ಕೇಳಿದಾಗ, “ಒಬ್ಬ ಮನುಷ್ಯನ ಜೀವನದಲ್ಲಿ ನಡೆಯುವ ಹಲವು ಘಟನೆಗಳೇ ಈ ಚಿತ್ರದ ಕಥೆ. ಚಿತ್ರ ನೋಡುವ ಪ್ರೇಕ್ಷಕರು, ಚಿತ್ರದ ಕಥೆ ತಮ್ಮ ಜೀವನವನ್ನು ಹೋಲುತ್ತದೆ ಅಂದುಕೊಳ್ಳುವಷ್ಟರ ಮಟ್ಟಿಗೆ ನೈಜವಾಗಿದೆ’ ಎಂದರು.
ಇನ್ನು ನಾಯಕ ರೂಪೇಶ್ ಹೇಳುವಂತೆ, ಅವರ ಪಾತ್ರವು ಚಿತ್ರದ ಹೆಸರಿಗೆ ತಕ್ಕ ಹಾಗೆ ಇದೆಯಂತೆ. “ಹೀರೋಗೆ ಚಿತ್ರದಲ್ಲಿ ನಾನಾ ಕಷ್ಟಗಳು ಬರುತ್ತವೆ. ಅವನ್ನೆಲ್ಲಾ ಆತ ಹೇಗೆ ಧೂಳೀಪಟ ಮಾಡುತ್ತಾನೆ ಎನ್ನುವುದು ಚಿತ್ರದ ಕಥೆ. ಹೊಟ್ಟೆಯ ಮೇಲೆ ಸಿಕ್ಸ್ ಪ್ಯಾಕ್ ಇರುವ ಬದಲು, ತಲೆಯೊಳಗಿದ್ದರೆ ಕಷ್ಟಗಳನ್ನು ಹೇಗೆ ಬಗೆಹರಿಸಬಹುದು ಎಂಬುದು ಚಿತ್ರದ ಕಥೆ’ ಎನ್ನುತ್ತಾರೆ ರೂಪೇಶ್. ಚಿತ್ರದಲ್ಲಿ ಅವರೆದುರು ಅರ್ಚನಾ, ಮುಕ್ತ ಮತ್ತು ಐಶ್ವರ್ಯ ನಾಯಕಿಯರಾಗಿ ನಟಿಸಿದ್ದಾರಂತೆ.
ಈ ಚಿತ್ರವನ್ನು ಬಾಗಲಕೋಟೆಯ ಸಿರಿಗಣ್ಣನವರ್ ನಿರ್ಮಾಣ ಮಾಡಿದರೆ, ಅವರಿಗೆ ಗಿರೀಶ್ ಮತ್ತು ನಿಂಗರಾಜ್ ಕೈಜೋಡಿಸಿದ್ದಾರೆ. ಇನ್ನು ಎ.ಟಿ. ರವೀಶ್ ಅವರ ಶಿಷ್ಯ ಅರುಣ್ ಶೆಟ್ಟಿ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.